ನವದೆಹಲಿ; ಕೇಂದ್ರ ಸರ್ಕಾರ ಮೇ 30ರಂದು ಜೂನ್‌ನಲ್ಲಿ 11,95,70,000 ಡೋಸ್ ಲಸಿಕೆ ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿತ್ತು. ಜೂನ್ ತಿಂಗಳು ಪೂರ್ಣಗೊಂಡಿದ್ದು 11,96,69,381 ಡೋಸ್ ಲಸಿಕೆ ನೀಡಲಾಗಿದೆ.
ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ನೀಡಲಾಗಿದೆ. ಮೇ ತಿಂಗಳಿನಲ್ಲಿ ಪ್ರತಿದಿನ ಸರಾಸರಿ 19,69,580 ಡೋಸ್ ಲಸಿಕೆ ನೀಡಲಾಗಿದ್ದು, ಒಟ್ಟು 6,10,57,003 ಡೋಸ್ ಲಸಿಕೆ ಕೊಡಲಾಗಿದೆ.
ಮೇ ತಿಂಗಳಿನಲ್ಲಿ ಸರ್ಕಾರ 18-44 ವಯೋಮಿತಿಯ ಜನರಿಗೆ ಲಸಿಕೆ ನೀಡುವುದಾಗಿ ಘೋಷಣೆ ಮಾಡಿತು. ಏಪ್ರಿಲ್ ತಿಂಗಳಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿತ್ತು. ಆಗ ತಿಂಗಳಿಗೆ 8,98,71,739 ಡೋಸ್ ಲಸಿಕೆ ನೀಡಲಾಗಿತ್ತು.
ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಲಸಿಕೆ ನೀಡುವ ಪ್ರಮಾಣ ಜೂನ್‌ನಲ್ಲಿ ಶೇ 33.15ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ 13 ದಿನಗಳಲ್ಲಿಯೇ 30 ಲಕ್ಷ ಡೋಸ್ ಲಸಿಕೆ ನೀಡಲಾಗಿತ್ತು. ಆದರೆ ಜೂನ್ ತಿಂಗಳಿನಲ್ಲಿ 21 ದಿನಗಳಲ್ಲಿ 30 ಲಕ್ಷ ಡೋಸ್ ನೀಡಲಾಗಿದೆ.
ಪ್ರಸ್ತುತ ದೇಶದಲ್ಲಿ ಖಾಸಗಿ ಆಸ್ಪತ್ರೆಗಳಿಗೆ 18-44 ವಯೋಮಿತಿಯ ಜನರಿಗೆ ಲಸಿಕೆ ನೀಡಲು ಶೇ 50ರಷ್ಟು ಖರೀದಿ ಮಾಡಲು ಅವಕಾಶವಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆಯನ್ನು ನೀಡಲು ಸರ್ಕಾರ ದರವನ್ನು ನಿಗದಿಗೊಳಿಸಿದೆ.
ಭಾರತದಲ್ಲಿ ಜೂನ್ 21ರಿಂದ ಲಸಿಕಾ ಮಹಾ ಅಭಿಯಾನವನ್ನು ಆರಂಭಿಸಲಾಯಿತು. ಜೂನ್ 27ರಂದು 17,21,268 ಡೋಸ್, ಜೂನ್ 29ರಂದು 36,51,983 ಡೋಸ್ ಮತ್ತು ಜೂನ್ 30ರಂದು 27,60,345 ಡೋಸ್ ಲಸಿಕೆಯನ್ನು ಕೊಡಲಾಗಿದೆ.
2011ರ ಜನಗಣತಿ ವರದಿ ಪ್ರಕಾರ ಭಾರತದ ಜನಸಂಖ್ಯೆ 136.13 ಕೋಟಿ. 94.02 ಕೋಟಿ ವಯಸ್ಕರಿಗೆ ಲಸಿಕೆ ನೀಡುವ ಸವಾಲು ದೇಶದ ಮುಂದಿದೆ. ಸದ್ಯದ ಮಾಹಿತಿ ಪ್ರಕಾರ 33,57,16,019 ಜನರು ಮೊದಲ ಅಥವ ಎರಡು ಡೋಸ್ ಲಸಿಕೆ ಪಡೆದಿದ್ದಾರೆ.





