ನವದೆಹಲಿ:ಕೇಂದ್ರ ಸರಕಾರವು 28 ಮಹಿಳಾ ಅಧಿಕಾರಿಗಳು ಸೇರಿದಂತೆ ದೇಶಾದ್ಯಂತ ವಿವಿಧ ತನಿಖಾ ಸಂಸ್ಥೆಗಳ 152 ಪೊಲೀಸ್ ಸಿಬ್ಬಂದಿಗಳಿಗೆ 2021ನೇ ಸಾಲಿನ 'ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹಸಚಿವರ ಪದಕ' ಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.
40 ಸಿಆರ್‌ಪಿಎಫ್ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದ 2019ರ ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣವನ್ನು ಭೇದಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ಎಸ್‌ಪಿ ರಾಕೇಶ ಬಲ್ವಾಲ್ ಅವರು ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ. 2018ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.
ಅರುಣಾಚಲ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಎಂ.ಹರ್ಷವರ್ಧನ್ ಅವರೂ ರಾಜ್ಯದಲ್ಲಿ ಬೆಳಕಿಗೆ ಬಂದಿದ್ದ 'ಉದ್ಯೋಗಕ್ಕಾಗಿ ಲಂಚ' ಸಿಬ್ಬಂದಿ ಆಯ್ಕೆ ಮಂಡಳಿ ಹಗರಣದ ತನಿಖೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 19 ಜನರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು. ಪ್ರಶಸ್ತಿ ಪುರಸ್ಕೃತರಲ್ಲಿ ಸಿಬಿಐನ 15,ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸ್‌ನ ತಲಾ 11,ಉತ್ತರ ಪ್ರದೇಶ ಪೊಲೀಸ್‌ನ 10,ಕೇರಳ ಮತ್ತು ರಾಜಸ್ಥಾನ ಪೊಲೀಸ್‌ನ ತಲಾ ಒಂಭತ್ತು,ತಮಿಳುನಾಡು ಪೊಲೀಸ್‌ನ ಎಂಟು, ಬಿಹಾರ ಪೊಲೀಸ್‌ನ ಏಳು,ಗುಜರಾತ,ಕರ್ನಾಟಕ ಮತ್ತು ದಿಲ್ಲಿ ಪೊಲೀಸ್‌ನ ತಲಾ ಆರು ಹಾಗೂ ಎನ್‌ಐಎದ ಐವರು ಅಧಿಕಾರಿಗಳು ಸೇರಿದ್ದಾರೆ. ಉಳಿದ ಅಧಿಕಾರಿಗಳು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ.
ಪುಲ್ವಾಮಾ ತನಿಖೆಯು ತನ್ನ ವೃತ್ತಿಜೀವನದಲ್ಲಿ ಅತ್ಯಂತ ಮುಖ್ಯ ತನಿಖೆಗಳಲ್ಲೊಂದಾಗಿತ್ತು ಎಂದು ಬಲ್ವಾಲ್ ಅವರನ್ನು ಉಲ್ಲೇಖಿಸಿ ThePrint ವರದಿ ಮಾಡಿದೆ.
'ಒಂದು ವರ್ಷದಿಂದ ತನಿಖೆ ನಡೆಯುತ್ತಿದ್ದರೂ ಯಾವುದೇ ಸುಳಿವು ಲಭಿಸಿರಲಿಲ್ಲ. ಪ್ರಕರಣವನ್ನು ಭೇದಿಸಲು ನಮಗೆ ನೆರವಾಗಬಲ್ಲ ಒಂದಾದರೂ ಸಾಕ್ಷಾಧಾರಕ್ಕಾಗಿ ನಾವು ಶ್ರಮಿಸುತ್ತಲೇ ಇದ್ದೆವು. ಹಲವಾರು ಸಿದ್ಧಾಂತಗಳು ಸುತ್ತುತ್ತಲೇ ಇದ್ದವು ಮತ್ತು ಜೈಷೆ ಮೊಹಮ್ಮದ್ ಹಾಗೂ ಪಾಕಿಸ್ತಾನ ಸತ್ಯವು ಹೊರಗೆ ಬರುವುದನ್ನು ಬಯಸಿರಲಿಲ್ಲ. ಅದು ನನ್ನ ವೃತ್ತಿಜೀವನದಲ್ಲಿಯ ಅತ್ಯಂತ ಕ್ಲಿಷ್ಟ ಮತ್ತು ಮಹತ್ವದ ತನಿಖೆಯಾಗಿತ್ತು 'ಎಂದು ಬಲ್ವಾಲ್ ಹೇಳಿದರು. ನೇಮಕಾತಿ ಹಗರಣದ ತನಿಖೆ ಮತ್ತು ಅದನ್ನು ಸರಿಯಾಗಿ ನಿರ್ವಹಿಸಿದ್ದು ಓರ್ವ ಪೊಲೀಸ್ ಅಧಿಕಾರಿಯಾಗಿ ತನಗೆ ಅತ್ಯಂತ ತೃಪ್ತಿಯನ್ನು ನೀಡಿತ್ತು ಎಂದು ಹರ್ಷವರ್ಧನ ಹೇಳಿದರು.
ತನಿಖೆಯು ತಾಂತ್ರಿಕ ಸಾಕ್ಷಾಧಾರಗಳನ್ನೇ ಬಲವಾಗಿ ನೆಚ್ಚಿಕೊಂಡಿತ್ತು. ಸಿಬ್ಬಂದಿ ಆಯ್ಕೆ ಮಂಡಳಿಯ ಅಧಿಕಾರಿಗಳಿಗೆ ಲಂಚವನ್ನು ನೀಡಿದ್ದ ಅಭ್ಯರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಗಳನ್ನು ಖಾಲಿ ಬಿಡುವಂತೆ ಮತ್ತು ಅವರಿಗೆ ಉದ್ಯೋಗ ದೊರೆಯುವಂತಾಗಲು ನಂತರ ಸರಿಯಾದ ಉತ್ತರಗಳನ್ನು ತುಂಬಲಾಗುವುದು ಎಂದು ತಿಳಿಸಲಾಗಿತ್ತು ಎನ್ನುವುದನ್ನು ನಾವು ಪತ್ತೆ ಹಚ್ಚಿದ್ದೆವು. ನಾವು ಪ್ರಕರಣವನ್ನು ಭೇದಿಸಿ ಆರೋಪಿ ಅಧಿಕಾರಿಗಳನ್ನು ಬಂಧಿಸಿದ ಬಳಿಕ ಆ ಪರೀಕ್ಷೆಗಳಿಗೆ ಹಾಜರಾಗಿದ್ದ ಯುವಜನರು ತಮಗೆ ನ್ಯಾಯ ಲಭಿಸಿದ ಭಾವನೆಯನ್ನು ಮತ್ತು ಸಂಪೂರ್ಣ ತೃಪ್ತಿಯನ್ನು ವ್ಯಕ್ತಪಡಿಸಿದ್ದರು 'ಎಂದು ಅವರು ತಿಳಿಸಿದರು.





