ನವದೆಹಲಿ: 'ಕಾಣೆಯಾಗಿದ್ದಾರೆ..' ಇಂಥದ್ದೊಂದು ಪ್ರಕಟಣೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ದೇಶದಲ್ಲಿ ಕಾಣೆಯಾಗುತ್ತಿರುವ ಮಹಿಳೆಯರ ಸಂಖ್ಯೆಯಂತೂ ಹಿಂದಿನ ವರ್ಷಕ್ಕಿಂತಲೂ ಹೆಚ್ಚಳಗೊಂಡಿದೆ. ಭಾರತದಲ್ಲಿ ದಿನವೊಂದಕ್ಕೆ 1,157 ಮಹಿಳೆಯರು ನಾಪತ್ತೆ ಆಗುತ್ತಿದ್ದಾರೆ.
ಭಾರತದಲ್ಲಿ ಪ್ರತಿ ತಿಂಗಳೂ 35,000 ಮಹಿಳೆಯರು ಕಾಣೆಯಾಗುತ್ತಿದ್ದಾರೆ. ನ್ಯಾಷನಲ್ ಕ್ರೈಮ್ ಬ್ಯೂರೋ ರೆಕಾರ್ಡ್ಸ್ (ಎನ್ಸಿಆರ್ಬಿ) 2019ರ ವರದಿ ಪ್ರಕಾರ ದೇಶದಲ್ಲಿ 4,22,439 ಮಹಿಳೆಯುರು ನಾಪತ್ತೆ ಆಗಿದ್ದಾರೆ. ಆ ಪೈಕಿ ಮಹಾರಾಷ್ಟ್ರದಲ್ಲಿ 67746, ಪಶ್ಚಿಮ ಬಂಗಾಳದಲ್ಲಿ 64382, ರಾಜಸ್ಥಾನದಲ್ಲಿ 22375, ದೆಹಲಿಯಲ್ಲಿ 27310 ಮತ್ತು ಒಡಿಶಾದಲ್ಲಿ 21569 ಮಹಿಳೆಯರು ನಾಪತ್ತೆ ಆಗಿದ್ದಾರೆ.
4,22,439 ಮಂದಿಯ ಪೈಕಿ 222949 ಮಹಿಳೆಯರನ್ನು ಪತ್ತೆ ಮಾಡಿರುವುದಾಗಿ ಎನ್ಸಿಆರ್ಬಿ ತಿಳಿಸಿದೆ. ಅಂದರೆ ನಾಪತ್ತೆಯಾದವರ ಪೈಕಿ ಶೇ. 52.8 ಮಹಿಳೆಯರು ಪತ್ತೆಯಾಗಿದ್ದು, ಶೇ. 48.2 ಮಹಿಳೆಯರ ಸುಳಿವೇ ಸಿಕ್ಕಿಲ್ಲ. ಇನ್ನು 2018ಕ್ಕೆ ಹೋಲಿಸಿದರೆ 2019ರಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ಶೇ. 9.8 ಹೆಚ್ಚಾಗಿದೆ. 2018ರಲ್ಲಿ 384685 ಮಹಿಳೆಯರು ನಾಪತ್ತೆ ಆಗಿದ್ದು, 209852 (ಶೇ.54.6) ಮಂದಿ ಪತ್ತೆಯಾಗಿದ್ದರು. ಪತ್ತೆಯಾಗದೆ ಉಳಿದವರ ಕಥೆ ಏನು ಎಂಬುದರ ಸುಳಿವಿಲ್ಲದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನಾಪತ್ತೆ ಪ್ರಕರಣ ಹೆಚ್ಚಳಗೊಂಡಿರುವುದು ಕೂಡ ಆತಂಕ ಹೆಚ್ಚಿಸಿದೆ.





