ನವದೆಹಲಿ: ಭಾರತದ ಸ್ಟಾರ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಸಾಧನೆ ಬಳಿಕ 14 ಸ್ಥಾನ ಏರಿಕೆ ಕಂಡಿದ್ದು, ವಿಶ್ವ ನಂ.2 ಸ್ಥಾನಕ್ಕೇರಿದ್ದಾರೆ. ಆಗಸ್ಟ್ 7 ರಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ಎಸೆಯುವ ಮೂಲಕ ಚೋಪ್ರಾ ಸ್ವರ್ಣ ಗೆದ್ದುಕೊಂಡಿದ್ದರು. ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿದ್ದರು. ವಿಶ್ವ ಅಥ್ಲೆಟಿಕ್ಸ್ ಮಾಹಿತಿಯಂತೆ 23 ವರ್ಷದ ನೀರಜ್ ಚೋಪ್ರಾ, 1315 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ನೀರಜ್‌ಗೆ ಪ್ರಬಲ ಪೈಪೋಟಿ ಎಂದೇ ನಿರೀಕ್ಷಿಸಲಾಗಿದ್ದ ಜರ್ಮನಿಯ ಜೊಹಾನ್ನೆಸ್ ವೆಟ್ಟರ್ (1396) ಅಗ್ರಸ್ಥಾನದಲ್ಲಿದ್ದಾರೆ.
ನೀರಜ್ ಸ್ವರ್ಣ ಜಯಿಸಿರುವ ಕ್ಷಣವನ್ನು ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ಸ್ ಆಂಡ್ ಫೀಲ್ಡ್ ಸ್ಪರ್ಧೆಯ 10 ಅದ್ಭುತ ಕ್ಷಣಗಳಲ್ಲಿ ಒಂದು ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಪಟ್ಟಿ ಮಾಡಿದೆ. 'ಅಥ್ಲೆಟಿಕ್ಸ್‌ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ನೀರಜ್ ಚೋಪ್ರಾ, ಟೋಕಿಯೊದಲ್ಲಿ ಸ್ವರ್ಣ ಸಾಧನೆ ಬಳಿಕ ಸಾಕಷ್ಟು ಹೆಸರಾಗಿದ್ದಾರೆ.
ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಸ್ವರ್ಣ ಜಯಿಸಿದ ಭಾರತದ ಮೊದಲ ಅಥ್ಲೀಟ್, ಅವರ ಪ್ರೊಪೈಲ್ ರಾಕೆಟ್‌ನಂತೆ ಆಗಸಕ್ಕೆ ಹಾರಿದೆ' ವಿಶ್ವ ಅಥ್ಲೆಟಿಕ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಒಲಿಂಪಿಕ್ಸ್‌ಗೆ ಮುನ್ನ ಅವರ ಇನ್‌ಸ್ಟಾಗ್ರಾಂ 1.43 ಲಕ್ಷ ಇದ್ದ ನೀರಜ್ ಅವರ ಹಿಂಬಾಲಕರ ಸಂಖ್ಯೆ ಈಗ 32 ಲಕ್ಷ ದಾಟಿದೆ.




