ನವದೆಹಲಿ: ಪಕ್ಷದ ಅಧಿಕೃತ ಖಾತೆಯನ್ನು ಟ್ವಿಟರ್ ಲಾಕ್ ಮಾಡಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಫೇಸ್‌ಬುಕ್ ಮೂಲಕ ಗುರುವಾರ ತಿಳಿಸಿದೆ.
ಟ್ವಿಟರ್ ಖಾತೆ ಲಾಕ್ ಆಗಿರುವ ಸ್ಕ್ರೀನ್ ಶಾಟ್ ಅನ್ನು ಫೇಸ್ಬುಕ್ನಲ್ಲಿ ಕಾಂಗ್ರೆಸ್ ಶೇರ್ ಮಾಡಿಕೊಂಡಿದೆ. ಈ ಖಾತೆಯು ಟ್ವಿಟರ್ ನಿಯಮ ಉಲ್ಲಂಘಿಸಿದೆ ಎಂದು ನಮಗೆ ಖಚಿತವಾಗಿದೆ. ಖಾಸಗಿ ಮಾಹಿತಿಯನ್ನು ಪೋಸ್ಟ್ ಮಾಡುವ ಮೂಲಕ ನಮ್ಮ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನೀವು ಇತರರ ಖಾಸಗಿ ಮಾಹಿತಿಯನ್ನು ಅವರ ಅಧಿಕೃತ ದೃಢೀಕರಣ ಮತ್ತು ಅನುಮತಿಯಿಲ್ಲದೆ ಪ್ರಕಟಿಸಬಾರದು ಅಥವಾ ಪೋಸ್ಟ್ ಮಾಡಬಾರದು ಎಂದು ಕಾಂಗ್ರೆಸ್ ಶೇರ್ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ ಉಲ್ಲೇಖವಾಗಿದೆ.
ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ನಮ್ಮ ನಾಯಕರುಗಳನ್ನು ಜೈಲಿನಲ್ಲಿಟ್ಟಗಾಲೇ ನಾವು ಹೆದರಲಿಲ್ಲ, ಇನ್ನು ನಮ್ಮ ಟ್ವಿಟರ್ ಖಾತೆಯನ್ನು ಲಾಕ್ ಮಾಡಿದ್ರೆ ಹೆದರುತ್ತೇವಾ? ನಾವು ಕಾಂಗ್ರೆಸ್ಸಿಗರು. ನಾವು ಹೋರಾಡುತ್ತೇವೆ… ಹೋರಾಡುತ್ತಲೇ ಇರುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
9 ವರ್ಷದ ದಲಿತ ಹುಡುಗಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಸಿ, ಅಪರಾಧಗಳು ಮತ್ತು ಸಂತ್ರಸ್ತರ ನ್ಯಾಯಕ್ಕಾಗಿ ಧ್ವನಿಯೆತ್ತಿದಕ್ಕೆ ಖಾತೆ ಲಾಕ್ ಮಾಡಲಾಗಿದೆ ಎಂದು ಆರೋಪಿಸಿದೆ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ಧ್ವನಿ ಎತ್ತುವುದು ಅಪರಾಧವಾಗಿದ್ದರೆ, ನಾವು ಈ ಅಪರಾಧವನ್ನು ನೂರು ಬಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದೆ. ಅಲ್ಲದೆ, ಮೋದಿ ಜಿ ನಿಮಗೆಷ್ಟು ಭಯವಿದೆ? ಎಂದು ಕಾಂಗ್ರೆಸ್ ಪ್ರಧಾನಿ ಮೋದಿಯವರನ್ನು ಕುಟುಕಿದ್ದಾರೆ.



