ಭಾರತದ 2021 ಆಗಸ್ಟ್ 15ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಕೊರೊನಾ ನಡುವೆ ಸ್ವಾತಂತ್ರ್ಯ ದಿನಾಚರಣೆ ಸಾಮೂಹಿಕವಾಗಿ ಅಷ್ಟೇನೂ ಅದ್ಧೂರಿಯಾಗಿ ಆಚರಿಸದೇ ಇದ್ದರೂ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಈ ದಿನ ದೇಶದ ಬಗ್ಗೆ ತಮಗೆ ಇರುವ ಗೌರವವನ್ನು ತಮ್ಮದೇ ಆದ ರೀತಿಯಲ್ಲಿ ತೋರ್ಪಡಿಸುತ್ತಾರೆ.
ಈ ಹಿನ್ನೆಲೆ ನಮ್ಮ ದೇಶದ ಬಗ್ಗೆ ಹಾಗೂ ದೇಶದ ಗೌರವ, ಹಿರಿಮೆ, ಸಂಸ್ಕೃತಿ, ಇಲ್ಲಿದ ಭೌತಿಕ ಹಾಗೂ ಪ್ರಾಕೃತ್ತಿಕ ಸಂಪತ್ತಿನ ಬಗ್ಗೆ ನಮ್ಮ ಸಾಹಿತಿ, ಕವಿಗಳು ರಚಿಸಿರುವ ಆಯ್ದ ಕೆಲವು ದೇಶಭಕ್ತಿ ಗೀತೆಗಳನ್ನು ಸಾಹಿತ್ಯ ಸಹಿತ ನೀಡಲಿದ್ದೇವೆ:1. ಬಂಕಿಮಚಂದ್ರ ಚಟರ್ಜಿ ಅವರು ಬರೆದ ವಂದೇ ಮಾತರಂ
"ವಂದೇ ಮಾತರಂ" ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ ಸುಹಾಸಿನೀಂ ಸುಮಧುರ ಭಾಷಿಣೀಂ ಸುಖದಾಂ ವರದಾಂ ಮಾತರಂ || ವಂದೇ ಮಾತರಂ ||
ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ ಕೋಟಿ ಕೋಟಿ ಭುಜೈರ್ಧೃತ ಖರ ಕರವಾಲೇ ಅಬಲಾ ಕೆನೊ ಮಾ ಎತೋ ಬಲೆ ಬಹುಬಲಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||
ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ ತ್ವಂಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕ್ತಿ ಹೃದಯೇ ತುಮಿ ಮಾ ಭಕ್ತಿ ತೋಮಾರಯಿ ಪ್ರತಿಮಾ ಗಡಿ ಮಂದಿರೇ ಮಂದಿರೇ || ವಂದೇ ಮಾತರಂ ||
ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ ಕಮಲಾ ಕಮಲದಲವಿಹಾರಿಣೀ ವಾಣೀ ವಿದ್ಯಾದಾಯಿನೀ ನಮಾಮಿತ್ವಾಂ ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ ||
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ || ವಂದೇ ಮಾತರಂ ||
2. ಸಾಹಿತಿ ಸಾಶಿ ಮರುಳಯ್ಯ ಅವರ ವಿರಚಿತ "ದೇಶ ಒಂದೇ ಭಾರತ"
ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ
ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ ಇದೇ ನಮ್ಮ ಭಾರತ
ಪುಣ್ಯ ಭೂಮಿ ಭಾರತ ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ
ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕೃತಿ
3. ರಾಷ್ಟ್ರಕವಿ ಕುವೆಂಪು ವಿರಚಿತ ಭರತ ಭೂಮಿ ನನ್ನ ತಾಯಿ
ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು || ಪ ||
ತುಹಿನ ಗಿರಿಯ ಸಿರಿಯ ಮುಡಿಯ ಹಿರಿಯ
ಕಡಲು ತೊಳೆಯುವಡಿಯ ಪೈರು ಪಚ್ಚೆ ಪಸುರಿನುಡೆಯ || ಅ || ಪ ||
ಸಿಂಧು ಯಮುನೆ ದೇವ ಗಂಗೆ ತಪತಿ ಕೃಷ್ಣೆ ಭದ್ರೆ ತುಂಗೆ
ಸಲಿಲ ತೀರ್ಥ ಪುಣ್ಯ ರಂಗೆ || 1 ||
ಮತದ ಬಿರುಕುಗಳನು ತೊರೆವೆ ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಿಲು || 2 ||
4. ಸಾಹಿತಿ ಆರ್. ಎನ್ ಜಯಗೋಪಾಲ್ ಅವರು ಬರೆದ "ಈ ಮಣ್ಣು ನಮ್ಮದು"
ಈ ಮಣ್ಣು ನಮ್ಮದು ಈ ಗಾಳಿ ನಮ್ಮದು ಕಲಕಲನೆ ಹರಿಯುತಿಹ ನೀರು ನಮ್ಮದು ಕಣಕಣದಲು ಭಾರತೀಯ ರಕ್ತ ನಮ್ಮದು ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ ಈ ದೇಶದ ಜನರೆಲ್ಲರೂ ಸೋದರ ಸಮಾನ, ಈ ನಾಡಿನ ಹೃದಯವದು ದೈವ ಸನ್ನಿಧಾನ ಅಜಂತ ಎಲ್ಲೋರ ಹಳೆಬೀಡು ಬೇಲೂರು ಶಿಲೆಗಳಿವು ಕಲೆಯ ಆಗರ ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಧರ್ಮಗಳ ಮಹಾಸಾಗರ ನಡೆದು ಹೋದ ಚರಿತೆಯು ನಾಳೆ ಎನುವ ಕವಿತೆಯು ಈ ನಾಡ ಮಣ್ಣಲಿದೆ ಜೀವನ ಸಾರ/ ಜೀವನ ಸಾರ ಹ್ಞೂ..ಹ್ಞೂ...ಹ್ಞೂ...ಹ್ಞೂ... ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು ವಿಜ್ಞಾನವು ಅಜ್ಞಾನವ ಗೆಲ್ಲುವ ಹಾಡು ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು
5. ಗಾನಮಾಲದ ದೇಶಭಕ್ತಿ ಗೀತೆಗಳ ಸಂಗ್ರಹದಿಂದ ಆಯ್ದ ಗೀತೆ
"ದೇಶ ನನ್ನದು" ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು ಎಲ್ಲ ನನ್ನದು, ಎಲ್ಲ ನನ್ನದು ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ ಎಲ್ಲ ನನ್ನದು, ಎಲ್ಲ ನನ್ನದು ನರಹರಿಯ ಪಾಂಚಜನ್ಯ, ವಾಲ್ಮೀಕಿಯ ರಾಮಾಯಣ ವೇದಗಳ ಉದ್ಘೋಷ ಮಂತ್ರತಂತ್ರ ಆವಾಸ ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ ಎಲ್ಲ ನನ್ನದು, ಎಲ್ಲ ನನ್ನದು ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ ಎಲ್ಲ ನನ್ನದು, ಎಲ್ಲ ನನ್ನದು.


