ಮಂಜೇಶ್ವರ: ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಪ್ರಯಾಣಿಕರ ಸಂಚಾರ ಸ್ವಾತಂತ್ರ್ಯವನ್ನು ಕಸಿಯುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ದಿನಾಚರಣೆಯಂದು(ಇಂದು) ಏಕ ದಿನದ ನಿರಾಹಾರ ಸತ್ಯಾಗ್ರಹ ಕೈಗೊಳ್ಳುವುದಾಗಿ ಶಾಸಕ ಎ ಕೆ ಎಂ ಅಶ್ರಫ್ ಘೋಷಿಸಿದ್ದಾರೆ.
'ಒಂದು ದೇಶ ಒಂದು ಜನತೆ' ಎಂಬ ಸಂಕಲ್ಪವನ್ನು ಗಾಳಿಗೆ ತೂರಿ ಸಂಕುಚಿತ ರಾಜಕೀಯ ಲಾಭಕ್ಕಾಗಿ ಈ ನಾಡನ್ನು ವಿಭಜಿಸಲು ಹುನ್ನಾರ ನಡೆಸುವ ಕರ್ನಾಟಕ ಸರ್ಕಾರವು ಪುಣ್ಯ ದೇಶದ ಸಮಾನತೆ ಮತ್ತು ಸಹಿಷ್ಣುತೆಯ ಸಂಸ್ಕøತಿಯನ್ನು ಕೊನೆಗಾಣಿಸುವ ಪ್ರಯತ್ನದಲ್ಲಿದೆ. ರಾಜ್ಯದ ಗಡಿಗಳಲ್ಲಿ ಲಸಿಕೆಯನ್ನು ಪಡೆದವರಿಗೆ ಟೆಸ್ಟ್ ಇಲ್ಲದೆ ಪ್ರಯಾಣವನ್ನು ನಡೆಸಲು ಅನುಮತಿ ನೀಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ನಿರಾಕರಿಸಿ ಕಾಸರಗೋಡು ಜಿಲ್ಲೆಯ ಜನತೆಯೊಂದಿಗೆ ಅವರ ವೈರಾಗ್ಯ ಮನೋಭಾವದ ನಡವಳಿಕೆಯು, 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಭಾರತಕ್ಕೆ ಕಪ್ಪುಚುಕ್ಕಿಯಾಗಿದೆ ಎಂದು ಎ ಕೆ ಎಂ ಅಶ್ರಫ್ ತಿಳಿಸಿರುವರು.
ವಿದ್ಯಾರ್ಥಿಗಳು, ರೋಗಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ದಿನಂಪ್ರತಿ ಸಂಚರಿಸುವ ಪ್ರಯಾಣಿಕರನ್ನು ಆರ್ ಟಿ ಪಿ ಸಿ ಆರ್ ವರದಿಯನ್ನು ಮುಂದಿರಿಸಿ ಯಾತ್ರೆಯನ್ನು ನಿರ್ಬಂಧಿಸುವ ಕರ್ನಾಟಕ ಸರ್ಕಾರವು ಜನ ಸಾಮಾನ್ಯರೆಡೆಯಲ್ಲಿ ಕೇರಳ ಜನತೆಯ ವಿರುದ್ಧ ಅಪಪ್ರಚಾರ ನಡೆಸುವವರಿಗೆ ಸಹಕಾರ ನೀಡುತ್ತಿದೆ ಎಂದು ಶಾಸಕರು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಕೋವಿಡ್ ಹರಡವುದು ಕೇರಳದ ಜನತೆಯ ಮೂಲಕ ಎಂಬ ಅಪಪ್ರಚಾರದ ಮೂಲಕ ಕೇರಳ ದ ವಿರುದ್ಧ ರಾಜಕೀಯ ಪಿತೂರಿ ಹಾಗೂ ಕರ್ನಾಟಕದ ಜನತೆಯಿಂದ ವಾಸ್ತವವನ್ನು ಮರೆಮಾಚಲು ಅಧಿಕಾರವನ್ನು ವಹಿಸಿಕೊಂಡವರು ಉದ್ಧೇಶವನ್ನಿಟ್ಟಿದ್ದಾರೆ ಎಂದು ಎ ಕೆ ಎಂ ಆರೋಪಿಸಿದರು.
ತಲಪಾಡಿ ಗಡಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ. ಪ್ರತಿಭಟನೆಯನ್ನು ಕೋವಿಡ್ ನಿಯಂತ್ರಣದ ನಿರ್ದೇಶಗಳನ್ನು ಪಾಲಿಸಿ ನಡೆಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.


