ತಿರುವನಂತಪುರಂ: ರಾಜ್ಯ ಸರ್ಕಾರ ಆರಂಭಿಸಿರುವ ಲಸಿಕೆ ಅಭಿಯಾನದ ಭಾಗವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 817 ಕೋಟಿ ರೂ. ಧನ ಸಹಾಯ ಲಭಿಸಿದೆ. ವಿಧಾನಸಭೆಯಲ್ಲಿ ಶಾಸಕ ಕೆಜೆ ಮ್ಯಾಕ್ಸಿ ಕೇಳಿದ ಪ್ರಶ್ನೆಗಳಿಗೆ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಈ ಮಾಹಿತಿ ನೀಡಿರುವರು.
ಜುಲೈ 30 ಕ್ಕೆ ಮುಖ್ಯಮಂತ್ರಿಯವರ ವಿಪತ್ತು ಪರಿಹಾರ ನಿಧಿಗೆ 817.50 ಕೋಟಿ ರೂ.ಜಮೆಯಾಗಿತ್ತು. ಆದರೆ ಈ ಪೈಕಿ ರಾಜ್ಯ ಸರ್ಕಾರ ಲಸಿಕೆ ಖರೀದಿಸಲು ಕೇವಲ 29.29 ಕೋಟಿ ರೂ. ಮಾತ್ರ ಖರ್ಚುಮಾಡಿದೆ. 13,42,540 ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ನೇರವಾಗಿ ಖರೀದಿಸಲಾಗಿದೆ. ಇವುಗಳಲ್ಲಿ ಕೇವಲ 8,84,290 ಡೋಸ್‍ಗಳಿಗೆ ಮಾತ್ರ ಇಲ್ಲಿಯವರೆಗೆ ಬೆಲೆ ನೀಡಲಾಗಿದೆ.
ಈ ಆರ್ಥಿಕ ವರ್ಷದಲ್ಲಿ ಕೊರೊನಾ ರಕ್ಷಣಾ ಸಾಧನಗಳನ್ನು ಖರೀದಿಸಲು ಸರ್ಕಾರವು ಕೇರಳ ವೈದ್ಯಕೀಯ ಸೇವೆಗಳ ನಿಗಮಕ್ಕೆ 324 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತ್ತು. ಇದರಲ್ಲಿ 318.2747 ಕೋಟಿ ರೂಪಾಯಿಗಳನ್ನು ಪಿಪಿಇ ಕಿಟ್‍ಗಳು ಮತ್ತು ಕೊರೋನಾ ಪರೀಕ್ಷಾ ಕಿಟ್‍ಗಳು ಮತ್ತು ಲಸಿಕೆಗಳ ಖರೀದಿಗೆ ಖರ್ಚು ಮಾಡಲಾಗಿದೆ.





