ಕುಂಬಳೆ : ಕೇರಳದಲ್ಲಿಯೇ ಮೊತ್ತ ಮೊದಲ ಬಾರಿಗೆ ದಟ್ಟಡವಿಗಳಲ್ಲಿ ಮಾತ್ರವೇ ಕಂಡು ಬರುವ ಅಪರೂಪದ ಹೊಸದೊಂದು ದುಂಬಿಯನ್ನು ಕಿದೂರಿನ ಪಕ್ಷಿ ಗ್ರಾಮದಿಂದ ನಿರೀಕ್ಷಿಸಲಾಗಿದೆ. ಬ್ರಾಡಿನೋಪೈಗಾ ಕೊಂಣ್ಕನೆನ್ಸಿಸ್ ಎಂಬ ವೈಜ್ಞಾನಿಕ ಹೆಸರಿನ ದುಂಬಿಗೆ ಕೆಂಗಲ್ಲು ದುಂಬಿ ಎಂಬ ಹೆಸರಿದೆ. ಪಕ್ಷಿ ನಿರೀಕ್ಷಕ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಅಧ್ಯಾಪಕ ರಾಜು ಕಿದೂರು ಅವರ ಕ್ಯಾಮರಾ ಕಣ್ಣು ಈ ದುಂಬಿಯನ್ನು ಕಿದೂರು ಕುಂಟಂಗೇರಡ್ಕದ ಪಾರೆ ಪ್ರದೇಶದ ನಡುವೆ ಇರುವ ಪ್ರಾಕೃತಿಕ ಸಣ್ಣ ಪಳ್ಳದ ಬದಿಯಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಈ ಕುರಿತು ಅಂತಾರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆಯಾದ ಜರ್ನಲ್ ಆಫ್ ಥ್ರೆಟಂಡ್ ಟಾಕ್ಸಾ ಎಂಬ ಪತ್ರಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟಗೊಂಡಿದ್ದು, ಮತ್ತೆ ಪ್ರಕೃತಿ ಪ್ರೇಮಿಗಳ ಚಿತ್ತ ಕಿದೂರಿನತ್ತ ಹೊರಟಿದೆ.
ಈ ನಿರೀಕ್ಷಣೆಯಿಂದಾಗಿ ಕೇರಳದಲ್ಲಿ ಕಂಡು ಬಂದ ಒಟ್ಟು ದುಂಬಿಗಳ ಸಂಖ್ಯೆ 175 ಕ್ಕೆ ಏರಿದ್ದು, ವೈಜ್ಞಾನಿಕ ಅಧ್ಯಯನ್ನು ನಡೆಸಲು ಕಾಸರಗೋಡಿನ ಮುಖ್ಯ ದುಂಬಿ ನಿರೀಕ್ಷಕರಾದ ಮೊಹಮ್ಮದ್ ಹನೀಫ್ ಹಾಗೂ ತೃಶ್ಶೂರು ಸ್ವದೇಶಿ ವಿನಯಚಂದ್ರ ಸಹಕರಿಸಿದ್ದರು.
ಈ ಅಪೂರ್ವ ಕೆಂಗಲ್ಲು ದುಂಬಿಯನ್ನು ಮೊತ್ತಮೊದಲ ಬಾರಿಗೆ 2020 ರಲ್ಲಿ ಮಹಾರಾಷ್ಟ್ರದಲ್ಲಿ ಪತ್ತಹಚ್ಚಲಾಗಿತ್ತು. ಬಳಿಕ ವೈಜ್ಞಾನಿಕವಾಗಿ ಸಂಶೋಧನೆ ನಡೆಸಿದ ಎರಡನೇ ನಿರೀಕ್ಷಣೆ ಇದಾಗಿದ್ದು, ಸಾಧಾರಣವಾಗಿ ಗ್ರಾಮ ಪ್ರದೇಶದಲ್ಲಿ ಕಾಣ ಸಿಗುವ ಇತರ ಕಪ್ಪು ದುಂಬಿಗಳಿಗೆ ಬಹಳ ಹತ್ತಿರದ ಸಾಮ್ಯತೆ ಕಂಡು ಬಂದಿದೆ.ಈ ದುಂಬಿ ನಿರೀಕ್ಷಣೆಯಿಂದ ಕಾಸರಗೋಡಿನಲ್ಲಿ ಇದೀಗ 97 ವಿಧದ ದುಂಬಿಗಳನ್ನು ಗುರುತಿಸಿದಂತಾಗಿದ್ದು, ಜಿಲ್ಲೆಯ ಪಕ್ಷಿ ಸಂಕುಲದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.
ಮನುಷ್ಯ ಸ್ನೇಹಿ ದುಂಬಿಗಳು ಜೀವ ವೈವಿದ್ಯತೆಯನ್ನು ಹೆಚ್ಚಿಸಿದ್ದು, ಕಿದೂರು ಪ್ರದೇಶ ನಿಸರ್ಗದ ಅನೇಕ ವಿಸ್ಮಯಗಳಿಗೆ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಚಾರ.




