ನವದೆಹಲಿ : ಕೋವಿಡ್ ಪರಿಸ್ಥಿತಿ ನಿರ್ವಹಣೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳು ನಿರ್ಣಾಯಕವಾಗಿದ್ದು, ಹಬ್ಬಗಳನ್ನು ಮಾರ್ಗಸೂಚಿಗೆ ಅನುಗುಣವಾಗಿ ಎಚ್ಚರಿಕೆಯಿಂದ ಆಚರಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಈ ಮಾತು ಹೇಳಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶವು ಇನ್ನೂ ಕೋವಿಡ್ ಎರಡನೇ ಅಲೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕಳೆದ ವಾರ ದೇಶದಲ್ಲಿ ದಾಖಲಾದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ 58.4ರಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲಿಯೇ ವರದಿಯಾಗಿವೆ.
ಕೇರಳದಲ್ಲಿ ಸದ್ಯ 1 ಲಕ್ಷಕ್ಕೂ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಉಳಿದಂತೆ ನಾಲ್ಕು ರಾಜ್ಯಗಳಲ್ಲಿ 10 ಸಾವಿರದಿಂದ 1 ಲಕ್ಷ ಪ್ರಕರಣಗಳಿದ್ದರೆ, 31 ರಾಜ್ಯಗಳಲ್ಲಿ 10 ಸಾವಿರಕ್ಕೂ ಕಡಿಮೆ ಸಕ್ರಿಯ ಪ್ರಕರಣಗಳಿವೆ.
ಐಸಿಎಂಆರ್‌ನ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ ಅವರು, 'ಲಸಿಕೆಗಳು ರೋಗಗಳನ್ನು ತಡೆಯುವುದಿಲ್ಲ. ಅವುಗಳನ್ನು ಪರಿವರ್ತಿಸುತ್ತವೆ. ಹೀಗಾಗಿ, ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸುವುದು ಉತ್ತಮ' ಎಂದು ಅಭಿಪ್ರಾಯಪಟ್ಟರು.
ರಾಜೇಶ್ ಭೂಷಣ್ ಅವರು, 'ಕೋವಿಡ್ ಪ್ರಕರಣಗಳ ಏರುಗತಿ ಇನ್ನೂ ಕಡಿಮೆ ಆಗಿಲ್ಲ. ಎರಡನೇ ಅಲೆ ಇನ್ನೂ ಉಳಿದಿದೆ. ನಾವು ಅಗತ್ಯ ಮುನ್ನೆಚ್ಚರಿಕೆಯನ್ನು ಪಾಲಿಸಲೇಬೇಕು. ಮುಖ್ಯವಾಗಿ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ, ನಂತರ ಸೋಂಕು ಪ್ರಮಾಣ ಏರಿಕೆಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ' ಎಂದು ಪ್ರತಿಪಾದಿಸಿದರು.
ಈ ದೃಷ್ಟಿಯಿಂದ ಮುಂಬರುವ ಸೆಪ್ಟೆಂಬರ್, ಅಕ್ಟೋಬರ್ ತಿಂಗಳು ನಿರ್ಣಾಯಕವಾಗಿದೆ. ಈ ತಿಂಗಳುಗಳಲ್ಲಿ ಕೆಲವು ಹಬ್ಬಗಳು ಬರುತ್ತವೆ. ಕೋವಿಡ್ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡೇ ಇವುಗಳನ್ನು ಆಚರಿಸಬೇಕು ಎಂದು ಸಲಹೆ ಮಾಡಿದರು.
ದೇಶದಲ್ಲಿ ಒಟ್ಟು 41 ಜಿಲ್ಲೆಗಳಲ್ಲಿ ಕೋವಿಡ್‌ನ ವಾರದ ಸೋಂಕು ದೃಢೀಕರಣ ಪ್ರಮಾಣ ಶೇ 10ಕ್ಕೂ ಹೆಚ್ಚಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಹೊಸದಾಗಿ 46,164 ಮಂದಿ ಸೋಂಕುಪೀಡಿತರಾಗಿದ್ದು, ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 3,25,58,520 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,33,725 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
ಹೊಸದಾಗಿ 607 ಜನರು ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 4,26,365 ಆಗಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಒಟ್ಟು ಪ್ರಕರಣಗಳ ಪೈಕಿ ಶೇ 1.03ರಷ್ಟಾಗಿದೆ ಎಂದು ವರದಿ ತಿಳಿಸಿದೆ.


