HEALTH TIPS

ಆಟಿ ಅಮಾವಾಸ್ಯೆಯಂದು ತುಳುನಾಡಿನಲ್ಲಿದೆ ಕಷಾಯ ಕುಡಿಯುವ ಸಂಪ್ರದಾಯ, ಏನಿದು? ಇಲ್ಲಿದೆ ಸಂಪೂರ್ಣ ಮಾಹಿತಿ

            ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಮತ್ತು ಶ್ರೀಮಂತ ಪರಂಪರೆಗೆ ವಿಶ್ವವಿಖ್ಯಾತಿ ಪಡೆದಿದೆ. ಕರಾವಳಿ ಜನರ ಶಿಸ್ತುಬದ್ಧ ಮತ್ತು ಕಠಿಣ ಪರಿಶ್ರಮದ ಜೀವನಶೈಲಿಯ ಜೊತೆಗೆ ಆರೋಗ್ಯಕರ ಆಹಾರಕ್ರಮವು ಅವರನ್ನು ಉತ್ತಮ ಆರೋಗ್ಯದಲ್ಲಿರಿಸಿದೆ ಎಂದರೆ ತಪ್ಪಾಗಲಾರದು.

     ಆಷಾಢ ಮಾಸದಲ್ಲಿ ತುಳುನಾಡಿನ ಜನರು ಸೇವಿಸುವ ಆಹಾರ, ಬೇರೆಲ್ಲರಿಗಿಂತ ಭಿನ್ನ. ಅದೇ ರೀತಿ ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯ ಆಚರಣೆಯೂ ಅಷ್ಟೇ ವಿಭಿನ್ನ. ಆಷಾಢವನ್ನು ಆಟಿ ಎಂದು ಕರೆಯುವ ತುಳುನಾಡಿನಲ್ಲಿ, ಆ ತಿಂಗಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದೇ, ಪಾಲೆ ಮರದ(ಹಾಳೆಮರ-ಕನ್ನಡದಲ್ಲಿ) ಕಷಾಯ. ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳುನಾಡಿನ ಜನರು ಆಟಿ ಅಮಾವಾಸ್ಯೆಯಂದು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾರೆ. ಇದರಿಂದ ಮುಂದಿನ ವರ್ಷದ ಆಷಾಢ ಮಾಸದವರೆಗೂ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ ಇಲ್ಲಿನ ಜನರದ್ದು.


     ಈ ಸಂಪ್ರದಾಯ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲದಿದ್ದರೂ, ತುಳುವರು ಹಿರಿಯರು ಅನುಸರಿಸಿಕೊಂಡು ಬಂದಿರುವ ಪದ್ಧತಿಗಳನ್ನು ಸಮರ್ಪಣೆಯಿಂದ ಪಾಲಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಈ ವರ್ಷ ಆಷಾಢ ಅಮಾವಾಸ್ಯೆ ಆಗಸ್ಟ್ 8ರಂದು ಬಂದಿದ್ದು, ಈ ದಿನ ಕಷಾಯ ಮಾಡಲು ಎಲ್ಲಾ ಸಿದ್ಧತೆ ಭರದಿಂದಲೇ ಮಾಡಿಕೊಳ್ಳುತ್ತಿದ್ದಾರೆ ತುಳುನಾಡಿನ ಜನರು.
     ಆಟಿ ಕಷಾಯದ ಮೂಲಿಕೆ: ಆಟಿ ಕಷಾಯವನ್ನು ಪಾಲೆ ಮರ(ಹಾಳೆ) ಎಂದು ಕರೆಯಲ್ಪಡುವ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ಇದು ದೈವಿಕ ಸ್ಥಾನಮಾನವನ್ನೂ ಹೊಂದಿದ್ದು, ವೃಷಭ ರಾಶಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಅಲ್ಸ್ಟೋನಿಯಾ ಸ್ಕಾಲರಿಸ್. ಸಾಮಾನ್ಯವಾಗಿ, ಪ್ರತಿಯೊಂದು ಗೊಂಚಲಲ್ಲೂ ಏಳು ಎಲೆಗಳನ್ನು ಹೊಂದಿರುವುದರಿಂದ ಇದನ್ನು ಸಪ್ತಪರ್ಣಿ ಮರ ಎಂದೂ ಕರೆಯುತ್ತಾರೆ. ಈ ಮರದಿಂದ ಮಾಡಿದ ಬೋರ್ಡ್‌ಗಳನ್ನು ಹಿಂದಿನ ಕಾಲದಲ್ಲಿ ಬರೆಯಲು ಬಳಸಲಾಗುತ್ತಿತ್ತು. ಆದ್ದರಿಂದ, ಇದನ್ನು ಸ್ಕೋಲಾರಿಸ್ ಮತ್ತು ಕಪ್ಪು ಹಲಗೆಯ ಮರ ಎನ್ನುವ ಹೆಸರೂ ಇದೆ.

   ಪಾಲೆ ಮರದ ತೊಗಟೆ ತೆಗೆಯುವ ಕ್ರಮ: ಪಾಲೆ ಮರದ ತೊಗಟೆ ತರುವಾಗ ಬಹಳ ಜಾಗರೂಕರಾಗಿರಬೇಕು ಏಕೆಂದರೆ ಪಾಲೆದ ಮರ ಎಂದು ಬೇರೆ ಮರದ ಕಷಾಯ ಕುಡಿದು ಪ್ರಾಣ ಕಳೆದುಕೊಂಡ ಹಲವು ಪ್ರಕರಣಗಳು ನಡೆದಿವೆ. ಅದಕ್ಕಾಗಿ ಇಲ್ಲಿನ ಜನರು ಪಾಲೆ ಮರದ ಕಷಾಯಕ್ಕಾಗಿ ಹಿಂದಿನ ದಿನವೇ ಹೋಗಿ ಗುರುತು ಮಾಡಿ ಬಂದಿರುತ್ತಾರೆ. ಏಕೆಂದರೆ ಮುಂಜಾನೆ ಬೇಗ ಎದ್ದು ತರುವಾಗ ಪತ್ತೆಹಚ್ಚಲು ಸುಲಭವಾಗಲೆಂದು ಮೊದಲೇ ಹಗ್ಗ ಕಟ್ಟಿ ಅಥವಾ ಬೇರಾವುದಾದರೂ ಗುರುತು ಮಾಡಿದರೆ ಪತ್ತೆಹಚ್ಚಲು ಸುಲಭ. ಹಿಂದಿನ ದಿನ ಹಗ್ಗ ಕಟ್ಟಿ ರೋಗ ನಿವಾರಿಸುವ ಎಲ್ಲಾ ಗುಣಗಳನ್ನು ತೊಗಟೆಗೆ ನೀಡು ಎಂದು ಪ್ರಕೃತಿ ಮಾತೆಯನ್ನು ಬೇಡಿಕೊಳ್ಳುವ ಸಂಪ್ರದಾಯವಿದೆ. ಆಟಿ ಅಮಾವಾಸ್ಯೆಯಂದು ಸೂರ್ಯೋದಯಕ್ಕೂ ಮುನ್ನ ಕುಟುಂಬದ ಹಿರಿಯರು ಹೋಗಿ, ಆ ಮರದ ತೊಗಟೆಯನ್ನು ಕಲ್ಲಿನಿಂದ ಕೆರೆದು ತರುತ್ತಾರೆ. ಈ ತೊಗಟೆಯನ್ನು ತೆಗೆಯಲು ಲೋಹವನ್ನು ಬಳಸಿದರೆ ತೊಗಟೆಯ ಔಷಧೀಯ ಗುಣಗಳು ಕಡಿಮೆಯಾಗುತ್ತವೆ ಎಂಬ ಕಾರಣದಿಂದ ಕಲ್ಲಿನಿಂದ ಕೆರೆಯುತ್ತಾರೆ.
     ಕಷಾಯದ ತಯಾರಿ ಹೇಗೆ?: ಸೂರ್ಯೋದಯಕ್ಕೂ ಮೊದಲೇ ಹೋಗಿ ತಂದ ಪಾಲೆ ಮರದ ತೊಗಟೆಗೆ ಜೀರಿಗೆ, ಬೆಳ್ಳುಳ್ಳಿ, ಅರಿಶಿನ ಮತ್ತು ಒಣ ಮೆಣಸಿನಕಾಯಿಗಳನ್ನ ಮಿಶ್ರಣ ಮಾಡಿ, ಅರೆದು ರಸ ತೆಗೆಯುತ್ತಾರೆ. ಈ ಮಸಾಲೆಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದಲ್ಲದೇ, ರುಚಿಯನ್ನೂ ಹೆಚ್ಚಿಸುತ್ತದೆ. ತದನಂತರ ಮನೆಯಲ್ಲಿರುವ ಎಲ್ಲರಿಗೂ ವಯಸ್ಸಿಗೆ ಅನುಗುಣವಾಗಿ 20 ಮಿಲಿ ನಿಂದ 40 ಮಿಲೀ ರಸವನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಲು ನೀಡುವುದು ಪದ್ಧತಿ. ಇದರ ಜೊತೆಗೆ ಬೆಲ್ಲ, ಮಳೆಗಾಲಕ್ಕೆಂದು ಮಾಡಿಟ್ಟ ಹಲಸಿನ ಹಪ್ಪಳ, ಕೆಂಡದಲ್ಲಿ ಸುಟ್ಟ ಹಲಸಿನ ಬೀಜ ಜೊತೆಗೆ ಮೆಂತ್ಯೆ ಗಂಜಿ ಆಟಿ ಅಮಾವಾಸ್ಯೆಯ ಆಚರಣೆಗೆ ಮತ್ತಷ್ಟು ಮೆರಗು ನೀಡುವುದು. ಈ ಕಷಾಯ ತುಂಬಾ ಉಷ್ಣವಾಗಿರುವುದರಿಂದ ದೇಹವನ್ನು ತಂಪು ಮಾಡಲು ಮೆಂತ್ಯೆ ಗಂಜಿ ಸೇವಿಸುವುದು ವೈದ್ಯಕೀಯ ದೃಷ್ಠಿಕೋನವಾಗಿದೆ.
     ಕಷಾಯದ ಔಷಧೀಯ ಮೌಲ್ಯ: ಪಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯವು ಮುಂದಿನ ಆಟಿ ತನಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುವ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆಯಿದೆ. ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು ಮತ್ತು ಆಸ್ತಮಾವನ್ನು ದೂರವಿಡಲು ಇದನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಇದನ್ನು ಚರ್ಮದ ಕಾಯಿಲೆಗಳು, ಮಲೇರಿಯಾ ಜ್ವರ, ದೀರ್ಘಕಾಲದ ಭೇದಿ, ಹಾವು ಕಡಿತದಲ್ಲಿ ಇತ್ಯಾದಿಗಳ ಚಿಕಿತ್ಸೆಗಾಗಿ ಕಹಿ ಸಂಕೋಚಕ ಮೂಲಿಕೆಯಾಗಿ ಬಳಸಲಾಗುತ್ತದೆ. ಜನಪದ ಸಂಶೋಧನಾ ಕೇಂದ್ರದ ಸಂಶೋಧನೆಯು ಅಮಾವಾಸ್ಯೆಯ ದಿನದಂದು ಸಂಗ್ರಹಿಸಿದ ತಿಳಿ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲವೊನೈಡ್ಸ್ ಎಂಬ ಪದಾರ್ಥವಿದೆ ಎಂದು ಸಾಬೀತು ಪಡಿಸಿದೆ. ಇದು ಅಲರ್ಜಿ, ಊತ ಇತ್ಯಾದಿಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದು, ಈ ಅಂಶ ಇತರ ದಿನಗಳಲ್ಲಿ ಈ ರಸದಲ್ಲಿ ಕಂಡುಬರುವುದಿಲ್ಲ. ಸಂಗ್ರಹಿಸಿದ ರಸವು ನೈಸರ್ಗಿಕ ಸ್ಟೀರಾಯ್ಡ್ ಗಳು ಮತ್ತು ಟೆರ್ಪಿನಾಯ್ಡ್ ಗಳನ್ನು ಹೊಂದಿರುವುದರ ಜೊತೆಗೆ, ರಸದ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಬೆಳೆಯುತ್ತದೆ ಎಂದು ಹೇಳಲಾಗಿದೆ. ಅದೇನೇ ಆಗಲಿ, ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿರುವ ಈ ಆಟಿ ಕಷಾಯ ಕುಡಿಯುವ ಪದ್ಧತಿ ಇನ್ನೂ ಇದೆಯಾದರೂ, ಹೆಚ್ಚಿನ ಕಡೆಗಳಲ್ಲಿ ಈ ಸಂಪ್ರದಾಯ ಬದಿಗೆ ಸರಿಯುತ್ತಿದೆ ಎಂಬುದು ದುರಂತ. ಇಂತಹ ವಿಶೇಷ, ಆಚರಣೆ ಸಂಪ್ರದಾಯಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries