ಮಂಜೇಶ್ವರ: ರಾಜಕೀಯ ಗಂಧಗಾಳಿ ಇಲ್ಲದ ಮುಗ್ಧ ಮಕ್ಕಳ ನಿಷ್ಕಲ್ಮಶ ಮನಸ್ಸುಗಳಲ್ಲಿ ಕಮ್ಯೂನಿಸಂನ್ನು ಬಲವಂತವಾಗಿ ಹೇರುವ ಕೇರಳ ವಿದ್ಯಾಭ್ಯಾಸ ಇಲಾಖೆಯ ದುರುದ್ದೇಶ ಪೂರಿತ ಕ್ರಮವನ್ನು ದೇಶೀಯ ಅಧ್ಯಾಪಕ ಪರಿಷತ್ ಎನ್.ಟಿ.ಯು ಜಿಲ್ಲಾ ಸಮಿತಿ ತೀವೃವಾಗಿ ಖಂಡಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಜಿಲ್ಲೆಯ ಎಲ್.ಪಿ.ವಿಭಾಗದ ಮಕ್ಕಳಿಗಾಗಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಗೆ ಕಯ್ಯೂರು ಚಳವಳಿಯನ್ನು ಪ್ರಧಾನ ವಿಷಯವಾಗಿ ನೀಡಲಾಗಿತ್ತು. ಸ್ವಾತಂತ್ರ್ಯ ಸಮರ ಇತಿಹಾಸದಲ್ಲಿ ಯಾವುದೇ ಮಹತ್ವವಿಲ್ಲದ ಕೆಲಸ ಕಮ್ಯೂನಿಸಂ ಚಳವಳಿಗಷ್ಟೇ ಸೀಮಿತವಾಗಿರುವ ಕಯ್ಯೂರು ಚಳವಳಿಯನ್ನು ಆರಿಸಿಕೊಂಡ ಬಗ್ಗೆ ವ್ಯಾಪಕ ಆಕ್ರೋಶ ಖಂಡನೆ ವ್ಯಕ್ತವಾಗಿತ್ತಾದರೂ ಅದನ್ನು ಲೆಕ್ಕಿಸದೆ ಶಿಕ್ಷಣೆ ಇಲಾಖೆ ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸಿತ್ತು. ಅನೇಕ ಎಡವಟ್ಟುಗಳನ್ನು ಒಳಗೊಂಡ ಅರ್ಥ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗದ ಕೇವಲ ಕಮ್ಯೂನಿಸಂನ್ನು ವೈಭವೀಕರಿಸುದಕ್ಕಷ್ಟೇ ಸೀಮಿತವಾಗಿದ್ದ ಈ ಪ್ರಶ್ನೆ ಪತ್ರಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಶಿಕ್ಷಣ ಇಲಾಖೆಯ ಮೂಗಿನಡಿಯಲ್ಲಿ ನಡೆಯುತ್ತಿರುವ ಇಂತಹ ವ್ಯವಸ್ಥಿತ ಎಡವಟ್ಟುಗಳ ಬಗ್ಗೆ ವಿಚಾರಿಸಿದಾಗ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಕೂಡಾ ಬೇಜವಾಬ್ದಾರಿ ಉತ್ತರಗಳನ್ನು ನೀಡುತ್ತಿರುವುದು ಶಿಕ್ಷಣ ಇಲಾಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಾದರೂ ಇಂತಹ ತಪ್ಪುಗಳಾಗದಂತೆ ಗರಿಷ್ಟ ಜಾಗೃತಿ ವಹಿಸುವ ಮೂಲಕ ಶಿಕ್ಷಣ ಇಲಾಖೆಯನ್ನು ರಾಜಕೀಯ ಮುಕ್ತಗೊಳಿಸಬೇಕೆಂದು ಕೋರಿ ಎನ್.ಟಿ.ಯು ವತಿಯಿಂದ ಇದೇ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು. ಎನ್.ಟಿ.ಯು ರಾಜ್ಯ ಕಾರ್ಯದರ್ಶಿ ಪ್ರಭಾಕರನ್ ನಾಯರ್, ಜಿಲ್ಲಾಧ್ಯಕ್ಷ ರಂಜಿತ್ ಕಾಸರಗೋಡು, ಉಪಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಹಾಗೂ ಇತರ ನೇತಾರರು ಉಪಸ್ಥಿತರಿದ್ದರು.


