HEALTH TIPS

ಕೊರೊನಾ ಪ್ರಕರಣ ಕಡಿಮೆಯಿರುವ ರಾಜ್ಯಗಳಲ್ಲೂ "ಆರ್" ದರ ಕಂಟಕವಾಗಬಹುದು; ಕೇಂದ್ರ

                  ನವದೆಹಲಿ: ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಭಾರತದಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಲಿರುವ ಸೂಚನೆ ನಡುವೆ ಕೇಂದ್ರ ಸರ್ಕಾರ ಮಂಗಳವಾರ ಸೋಂಕಿನ ಪುನರುತ್ಪತ್ತಿ ದರದ (Reproduction rate) ಕುರಿತು ಪ್ರಸ್ತಾಪಿಸಿದೆ. ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದರೂ ಪುನರುತ್ಪತ್ತಿ ದರ ಹೆಚ್ಚಿದ್ದರೆ ಆತಂಕ ತಪ್ಪಿದ್ದಲ್ಲ ಎಂದು ತಿಳಿಸಿದೆ.


          ದೇಶದ ಕೊರೊನಾ ಸ್ಥಿತಿಗತಿ ಕುರಿತು ಮಂಗಳವಾರ ವಿವರಣೆ ನೀಡಿರುವ ಆರೋಗ್ಯ ಸಚಿವಾಲಯ, ಸದ್ಯಕ್ಕೆ ರಾಜ್ಯಗಳಲ್ಲಿ ಸೋಂಕಿನ ಪುನರುತ್ಪತ್ತಿ ದರ ತಗ್ಗಿಸುವ ಕುರಿತು ಗಮನ ಹರಿಸಬೇಕಿದೆ ಎಂದು ಸೂಚಿಸಿದೆ. ಈ ಒಂದು ಅಂಶ ಕೊರೊನಾ ಮೂರನೇ ಅಲೆ ಪರಿಣಾಮ ನಿರ್ಧರಿಸಲು ನಿರ್ಣಾಯಕವಾಗಿದೆ ಎಂದು ಹೇಳಿದೆ.

         "ಕಳೆದ ಎರಡು ವಾರದಿಂದಲೂ ತಜ್ಞರು ಸೋಂಕಿನ ಪುನರುತ್ಪತ್ತಿ ದರದ ಕುರಿತು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಜೂನ್‌ನಲ್ಲಿ ಈ ದರ 0.75ಗೂ ಕಡಿಮೆಯಿತ್ತು. ಜುಲೈನಲ್ಲಿ 0.87ಗೆ ಏರಿಕೆಯಾಯಿತು. ಜುಲೈ ಮಧ್ಯದಲ್ಲಿ 0.95ಗೆ ಏರಿಕೆಯಾಗಿದೆ. ಹೀಗೆ ಪುನರುತ್ಪತ್ತಿ ದರ ಗಣನೀಯವಾಗಿ ಏರುತ್ತಿರುವುದು ಕಾಳಜಿಯ ವಿಷಯವಾಗಿದೆ" ಎಂದು ಏಮ್ಸ್‌ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಕೂಡ ಎಚ್ಚರಿಸಿದ್ದರು. 

                             ಕೊರೊನಾ ಸೋಂಕಿನ ಈ "R" ದರ ಎಂದರೇನು?

          ದೇಶದಲ್ಲಿ ಕೊರೊನಾ ಸೋಂಕು ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಈ "ಪುನರುತ್ಪತ್ತಿ ದರ" ಸಾಂಕೇತಿಸುತ್ತದೆ. ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು ಎಂಬ ಸರಾಸರಿ ಅಂದಾಜನ್ನು ಇದು ಹೇಳುತ್ತದೆ. ಈ ದರ 1ಕ್ಕಿಂತ ಹೆಚ್ಚಿದ್ದರೆ ಸೋಂಕು ಹರಡುವಿಕೆ ಪ್ರಮಾಣವೂ ಹೆಚ್ಚಿರುತ್ತದೆ.

                    ಕೊರೊನಾ ಕಡಿಮೆಯಿರುವ ಕಡೆಗಳಲ್ಲೂ "ಆರ್‌" ದರ ಹೆಚ್ಚಿದೆ

              ಸೋಂಕು ಹರಡುವ ವೇಗವನ್ನು ಸೂಚಿಸುವ ಪುನರುತ್ಪತ್ತಿ ದರ (Reproduction rate) ಹಲವು ರಾಜ್ಯಗಳಲ್ಲಿ 1ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಮಂಗಳವಾರ ಹೇಳಿದೆ. ಕೊರೊನಾ ಪ್ರಕರಣಗಳು ಇಳಿಕೆಯಾಗಿರುವ ರಾಜ್ಯಗಳಲ್ಲಿಯೂ "ಆರ್‌" ದರ ಹೆಚ್ಚಿದೆ. ಸದ್ಯಕ್ಕೆ ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ಪುನರುತ್ಪತ್ತಿ ದರ 1.3 ಇದೆ. ಉತ್ತರ ಪ್ರದೇಶ, ಆಂಧ್ರಪ್ರದೇಶದಲ್ಲಿ ಈ ದರ 1.1ಇದೆ. ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಕೇಂದ್ರ ತಿಳಿಸಿದೆ.

                ಸೋಂಕಿನ ಪ್ರಮಾಣ ಸ್ಥಿರವಾಗಿರುವ ರಾಜ್ಯಗಳಲ್ಲಿ "ಆರ್‌" ದರ ಹೆಚ್ಚಳ

              ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಈ ದರ 1.1 ಇದೆ. ಗೋವಾ, ನಾಗಾಲ್ಯಾಂಡ್‌ನಲ್ಲಿ 1.0 ಇದೆ. ಕೊರೊನಾ ಪ್ರಕರಣಗಳು ಸ್ಥಿರವಾಗಿರುವ ರಾಜ್ಯಗಳಲ್ಲಿ ಈ ದರ ಏರಿಕೆಯಾಗಿರುವುದು ಆತಂಕ ಮೂಡಿಸಿದೆ ಎಂದು ತಿಳಿಸಿದೆ. ದಿನನಿತ್ಯದ ಕೊರೊನಾ ಪ್ರಕರಣಗಳು ಕಡಿಮೆಯಿದ್ದರೂ ಪುನರುತ್ಪತ್ತಿ ದರ 1.0 ಇದ್ದರೆ ಇದು ಜಾಗ್ರತೆಯಿಂದಿರಬೇಕಾದ ಸೂಚನೆಯಾಗಿದೆ ಎಂದು ತಿಳಿಸಿದೆ.

                ಜುಲೈನಲ್ಲಿ ಹೆಚ್ಚಾದ ಪುನರುತ್ಪತ್ತಿ ದರ

           ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದ ಅವಧಿಯಲ್ಲಿ ಇಡೀ ದೇಶದಲ್ಲಿ ಈ ಆರ್‌ ದರ 1.37 ಇರುವುದೆಂದು ಅಂದಾಜಿಸಲಾಗಿತ್ತು. ಮಾರ್ಚ್ 9ರಿಂದ ಏಪ್ರಿಲ್ 21ರವರೆಗೆ 1.37 ಇದ್ದು, ಏಪ್ರಿಲ್ 24 ಹಾಗೂ ಮೇ 1ರ ನಡುವೆ ಇದು 1.10ಗೆ ಇಳಿದಿತ್ತು. ಮೇ 9-ಮೇ 11ರವರೆಗೆ ಈ ದರ 0.98ಗೆ ಇಳಿಕೆಯಾಗಿತ್ತು. ಕ್ರಮೇಣ ತಗ್ಗಿದ್ದು, ಜುಲೈ ಕೊನೆಗೆ ಈ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಜುಲೈ 3-22ರವರೆಗೆ ಇದು 0.95ಗೆ ಏರಿಕೆಯಾಗಿದೆ. ಪ್ರಸ್ತುತ ಈ ದರ ರಾಷ್ಟ್ರ ಮಟ್ಟದಲ್ಲಿ 1.0 ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

             ಈ ಆರ್‌ ದರವು 1ಕ್ಕಿಂತ ಕಡಿಮೆಯಿದ್ದರೆ ಅಪಾಯವಿಲ್ಲ ಎಂದು ಪರಿಗಣಿಸಬಹುದು. ಆದರೆ ಇದನ್ನು ಮೀರಿದರೆ ಪ್ರಕರಣಗಳ ಸಂಖ್ಯೆಯೂ ಏಕಾಏಕಿ ಏರಿಕೆಯಾಗುವುದು ಖಚಿತ. ಮುಂದಿನ ಎರಡು ವಾರಗಳಲ್ಲಿ ಈ ದರ ಇನ್ನಷ್ಟು ಹೆಚ್ಚಳವಾಗಲಿದ್ದು, ರಾಜ್ಯದ ಈಶಾನ್ಯ ಭಾಗದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಈಚೆಗೆ ಅಧ್ಯಯನವೊಂದು ಎಚ್ಚರಿಕೆ ನೀಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries