HEALTH TIPS

ದೆಹಲಿಯಲ್ಲಿ ರೈತರ ಪ್ರತಿಭಟನೆ ರಸ್ತೆ ತಡೆಗೆ ಪರಿಹಾರ ಯಾವಾಗ; ಸುಪ್ರೀಂಕೋರ್ಟ್ ಪ್ರಶ್ನೆ

              ನವದೆಹಲಿ: "ರೈತರ ಪ್ರತಿಭಟನೆಯು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುವಂತೆ ಇರಬಾರದು, ಕೂಡಲೇ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಿರಿ," ಎಂದು ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.


         ನೋಯ್ಡಾ ನಿವಾಸಿ ಮೋನಿಕಾ ಅಗರ್ವಾಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ಸರ್ಕಾರಗಳಿಗೆ ಸೂಚನೆ ನೀಡಿದೆ. "ಮಾರ್ಕೇಟಿಂಗ್ ವಿಭಾಗದಲ್ಲಿ ಉದ್ಯೋಗ ಮಾಡುತ್ತಿರುವ ನಾನು ದೆಹಲಿಯಿಂದ ನೋಯ್ಡಾಗೆ ಹೋಗಬೇಕಾದರೆ 20 ನಿಮಿಷಗಳ ಬದಲಿಗೆ 2 ಗಂಟೆ ತೆಗೆದುಕೊಳ್ಳುವಂತಾ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ತಡೆಯಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ," ಎಂದು ಅರ್ಜಿದಾರರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.

            ಸೋಮವಾರ ಸುಪ್ರೀಂಕೋರ್ಟ್ ನ್ಯಾ. ಎಸ್ ಕೆ ಕೌಲ್ ಮತ್ತು ನ್ಯಾ. ಋಷಿಕೇಶ್ ರಾಯ್ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತು. "ಅರ್ಜಿದಾರರು ಹಲವು ಸಮಸ್ಯೆಗಳು ಇರುವಂತೆ ಹೇಳುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕೈಯಲ್ಲೇ ಪರಿಹಾರವೂ ಇದೆ. ಒಂದು ವೇಳೆ ಪ್ರತಿಭಟನೆಗಳು ಮುಂದುವರಿದರೆ ವಾಹನ ಸಂಚಾರ ದಟ್ಟಣೆಗೆ ಯಾವುದೇ ರೀತಿ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿರಿ," ಎಂದು ಕೋರ್ಟ್ ಹೇಳಿದೆ. 2021ರ ಸಪ್ಟೆಂಬರ್ 20ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.


                         "ನಿಮಗೇಕೆ ಸಮಸ್ಯೆ ಪರಿಹರಿಸಿಕೊಳ್ಳಲು ಆಗುತ್ತಿಲ್ಲ?"

          "ನೀವು ಸಮಸ್ಯೆಯನ್ನು ಏಕೆ ಬಗೆಹರಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ?, ಅವರಿಗೆ ಪ್ರತಿಭಟನೆ ನಡೆಸುವ ಹಕ್ಕು ಇದೆ, ಆದರೆ ಪ್ರಯಾಣಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬೇಕಲ್ಲವೇ?," ಎಂದು ಸುಪ್ರೀಂಕೋರ್ಟ್ ನ್ಯಾ. ಎಸ್ ಕೆ ಪೌಲ್ ಅವರು ಸಾಲಿಸೆಟರಿ ಜನರಲ್ ತುಷಾರ್ ಮೆಹ್ತಾರಿಗೆ ಪ್ರಶ್ನಿಸಿದ್ದಾರೆ. ಕಳೆದ 2020ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕಳೆದ 2020ರ ನವೆಂಬರ್ ತಿಂಗಳಿನಿಂದಲೂ ದೆಹಲಿ ಮತ್ತು ನೋಯ್ಡಾ ಗಡಿ ಪ್ರದೇಶಗಳಲ್ಲಿ ಸಾವಿರಾರು ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

                         ಹರಿಯಾಣ ಮತ್ತು ಯುಪಿ ಸರ್ಕಾರಕ್ಕೆ ಚಾಟಿ

          ನವದೆಹಲಿಯ ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮನವೊಲಿಕೆ ಹಾಗೂ ಗಡಿಯಲ್ಲಿ ದಿಗ್ಬಂಧನವನ್ನು ತೆರವುಗೊಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರಗಳು ಪ್ರತಿಕ್ರಿಯೆ ನೀಡಬೇಕು ಎಂದು 2021ರ ಜುಲೈ 19ರಂದೇ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ರೈತರ ಮನವೊಲಿಕೆ ಹಾಗೂ ರಸ್ತೆ ತಡೆ ರೀತಿಯ ನಡವಳಿಕೆ ಸೂಕ್ತವಲ್ಲ ಎಂದು ಮನವರಿಕೆ ಮಾಡುವುದಕ್ಕೆ ಪ್ರಯತ್ನಿಸಿರುವುದಾಗಿ ಉಲ್ಲೇಖಿಸಿತ್ತು.

             ಇದಕ್ಕೂ ಮೊದಲು 2021ರ ಏಪ್ರಿಲ್ 19ರಲ್ಲಿ ನ್ಯಾ. ಎಸ್ ಕೆ ಕೌಲ್ ಮತ್ತು ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು. "ಬೇರೆ ಜನರ ಜೀವನಕ್ಕೆ ಅಡಚಣೆ ಉಂಟು ಮಾಡಬೇಡಿ. ನೀವು ಒಂದು ಗ್ರಾಮವನ್ನು ಕಟ್ಟಬೇಕಿದ್ದರೆ, ನೀವು ಅದನ್ನೇ ಮಾಡಿರಿ. ಆದರೆ ಅದಕ್ಕಾಗಿ ಬೇರೆಯವರ ಬದುಕಿಗೆ ಅಡಚಣೆ ಉಂಟು ಮಾಡಬೇಡಿ," ಎಂದು ಹೇಳಿತ್ತು.

ಏಪ್ರಿಲ್ 9ರಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಸಿದ ನ್ಯಾ. ಎಸ್ ಕೆ ಕೌಲ್ ಮತ್ತು ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠವು ಸಾರ್ವಜನಿಕ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ ಎಂದು ಕೋರ್ಟ್ ನಿರ್ದೇಶನ ನೀಡಿತ್ತು.

                    ಕೇಂದ್ರ ಸಚಿವರು ಕೃಷಿ ಕಾಯ್ದೆ ಬಗ್ಗೆ ಹೇಳುವುದೇನು?

             ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳಿಂದ ರೈತರಿಗೆ ಲಾಭದಾಯವಾಗಿದ್ದು, ಅನ್ನದಾತರ ಪರವಾಗಿವೆ ಎಂಬುದಕ್ಕೆ ದೇಶವೇ ಸಾಕ್ಷಿ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು. "ಮೂರು ಕೃಷಿ ಕಾಯ್ದೆಗಳ ಬಗ್ಗೆ ಈ ಹಿಂದೆಯೂ ನಾವು ಚರ್ಚೆ ನಡೆಸಿದ್ದೇವೆ. ರೈತರಿಗೆ ಈ ಕಾಯ್ದೆಗಳಲ್ಲಿ ಲೋಪದೋಷಗಳು ಕಂಡು ಬಂದರೆ ಅದನ್ನು ಪ್ರಸ್ತಾಪ ಮಾಡಲಿ. ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ನಾವು ಸಿದ್ಧವಾಗಿದ್ದೇವೆ," ಎಂದು ತೋಮರ್ ತಿಳಿಸಿದ್ದರು.

                ದೆಹಲಿಯ ಗಡಿಯಲ್ಲಿ ರೈತರ ಹೋರಾಟ

            ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.

                         ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಯಾವುವು?:

          ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries