ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಎರಡು ಕಂಪನಿಯ ಲಸಿಕೆಗಳ ಮಿಶ್ರಣ ಪರಿಣಾಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಎರಡು ಲಸಿಕೆಗಳ ಮಿಶ್ರಣಕ್ಕೆ ಈಗಾಗಲೇ ಅನುಮೋದನೆಯನ್ನು ನೀಡಲಾಗಿದೆ. ಇದರ ಮಧ್ಯೆ ಲಸಿಕೆ ಮಿಶ್ರಣಕ್ಕೆ ಅಪಸ್ವರ ಎದ್ದಿದೆ.
"ಎರಡು ಕೊರೊನಾವೈರಸ್ ಲಸಿಕೆಗಳ ಮಿಶ್ರಣವನ್ನು ನೀಡುವುದು ತುಂಬಾ ತಪ್ಪು ನಿರ್ಧಾರವಾಗುತ್ತದೆ. ಒಂದು ವೇಳೆ ಲಸಿಕೆಗಳ ಮಿಶ್ರಣದಿಂದ ಫಲಾನುಭವಿಗಳ ಜೀವಕ್ಕೆ ಅಪಾಯ ಎದುರಾದರೆ ಲಸಿಕೆ ಉತ್ಪಾದಿಸುವ ಎರಡು ಕಂಪನಿಗಳು ಪರಸ್ಪರ ದೂಷಿಸಿಕೊಳ್ಳುವಂತಾ ಸನ್ನಿವೇಶ ಸೃಷ್ಟಿಯಾಗುತ್ತದೆ," ಎಂದು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷ ಸೈರಸ್ ಪೂನಾವಾಲಾ ಹೇಳಿದ್ದಾರೆ.
ಭಾರತದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯ ಮಿಶ್ರಣವನ್ನು ನೀಡುವುದಕ್ಕೆ ಸಂಬಂಧಿಸಿದ ಅಧ್ಯಯನ ಆಧರಿಸಿ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿತ್ತು. ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನಲ್ಲಿ 300 ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಈ ಅಧ್ಯಯನ ನಡೆಸಲಾಗಿತ್ತು. ಅಧ್ಯಯನದ ವರದಿ ಆಧಾರದಲ್ಲಿ ಅನುಮೋದನೆ ನೀಡಿದ ಬೆನ್ನಲ್ಲೇ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ.
ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ ಎರಡು ವಿಭಿನ್ನ ಲಸಿಕೆಗಳ ಮಿಶ್ರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಅಧ್ಯಯನ ನಡೆಸಿದ್ದು ಏಕೆ?, ಈ ಅಧ್ಯಯನದಿಂದ ತಿಳಿದು ಬಂದ ಅಂಶವೇನು?, ನಿಜವಾಗಿಯೂ ಲಸಿಕೆಗಳ ಮಿಶ್ರಣದ ಅಗತ್ಯವಿದೆಯೇ?, ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಈ ಮಿಶ್ರಣವನ್ನು ವಿರೋಧಿಸುತ್ತಿರುವುದು ಏಕೆ? ಎಂಬ ಹಲವು ಪ್ರಶ್ನೆಗಳಿಗೆ ಒಂದೇ ಒಂದು ವರದಿಯಲ್ಲಿ ಉತ್ತರವನ್ನು ತಿಳಿಯಿರಿ.
ಕೊವಿಡ್-19 ಲಸಿಕೆ ಮಿಶ್ರಣ ಸಂಶೋಧನೆಯ ವರದಿ
ಒಂದೇ ಮಾದರಿಯ ಎರಡು ಡೋಸ್ ಲಸಿಕೆಯನ್ನು ಪಡೆದವರು ಹಾಗೂ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರನ್ನು ಪ್ರಯೋಗದಲ್ಲಿ ಬಳಸಿಕೊಳ್ಳಲಾಗಿತ್ತು. ಈ ವೇಳೆ ಮೊದಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಸಂಶೋಧಿಸಿದ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆ ಆಗುತ್ತಿರುವ ಕೊವಿಶೀಲ್ಡ್ ನಂತರ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ವೈದ್ಯಕೀಯ ಅಧ್ಯಯನದಿಂದ ಗೊತ್ತಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು 98 ಜನರನ್ನೊಳಗೊಂಡಂತೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. 18 ಜನರ ಮೇಲೆ ನಡೆಸಿದ ವೈದ್ಯಕೀಯ ಪ್ರಯೋಗದಲ್ಲಿ ಒಂದೇ ಮಾದರಿಯ ಎರಡು ಡೋಸ್ ಪಡೆದುಕೊಳ್ಳುವುದಕ್ಕಿಂತ ಮೊದಲು ಕೊವಿಶೀಲ್ಡ್ ಲಸಿಕೆಯ ಒಂದು ಡೋಸ್ ಮತ್ತು ಎರಡನೇ ಬಾರಿಗೆ ಕೊವ್ಯಾಕ್ಸಿನ್ ಲಸಿಕೆಯ ಡೋಸ್ ಪಡೆದುಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂಬುದು ವೈದ್ಯಕೀಯ ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಲಸಿಕೆ ಮಿಶ್ರಣದ ಅಗತ್ಯವಿಲ್ಲ ಎಂದ ಸೈರಸ್ ಪೂನಾವಾಲಾ
"ಎರಡು ಡೋಸ್ ಲಸಿಕೆಯನ್ನು ಮಿಶ್ರಣ ಮಾಡುವ ಅಗತ್ಯವೇ ಇಲ್ಲ", ಎಂದು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಚೇರ್ ಮನ್ ಸೈರಸ್ ಪೂನಾವಾಲಾ ಹೇಳಿದ್ದಾರೆ. ಒಂದೇ ವೇಳೆ ಇದರಿಂದ ಏನಾದರೂ ಅಪಾಯವಾದಲ್ಲಿ ಎರಡು ಲಸಿಕೆ ಉತ್ಪಾದನಾ ಕಂಪನಿಗಳ ನಡುವೆ ದೋಷಾರೋಪದ ಆಟ ಶುರುವಾಗುತ್ತದೆ. ಸೀರಂ ಕಂಪನಿಯು ಇನ್ನೊಂದು ಕಂಪನಿಯ ಲಸಿಕೆ ಸರಿಯಾಗಿಲ್ಲ ಎಂದು ಆರೋಪಿಸುತ್ತದೆ. ಅದೇ ರೀತಿ ಇನ್ನೊಂದು ಕಂಪನಿಯು ಸೀರಂ ಸಂಸ್ಥೆಯ ವಿರುದ್ಧ ಬೊಟ್ಟು ಮಾಡುತ್ತದೆ. ನನ್ನ ಪ್ರಕಾರ ಈ ಎರಡು ಲಸಿಕೆಗಳ ಮಿಶ್ರಣವು ತಪ್ಪು ನಿರ್ಧಾರವಾಗುತ್ತದೆ," ಎಂದು ಸೈರಸ್ ಪೂನಾವಾಲಾ ಹೇಳಿದ್ದಾರೆ.
18 ಜನರ ಮೇಲೆ ವಿಭಿನ್ನ ಮಾದರಿಯ ಲಸಿಕೆ ಪ್ರಯೋಗ
ಉತ್ತರ ಪ್ರದೇಶದ ಸಿದ್ದಾರ್ಥ್ ನಗರದಲ್ಲಿ ನಡೆದ ರಾಷ್ಟ್ರೀಯ ಯೋಜನೆಯಲ್ಲಿ 18 ಮಂದಿಯ ಮೇಲೆ ವೈದ್ಯಕೀಯ ಪ್ರಯೋಗ ನಡೆಸಲಾಯಿತು. ಈ 18 ಜನರಿಗೆ ಮೊದಲ ಬಾರಿ ಕೊವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು. ತದನಂತರದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಯಿತು. ದೇಶದಲ್ಲಿ ಕೊವಿಡ್-19 ಲಸಿಕೆಯ ವಿತರಣೆ ಅಭಿಯಾನ ಆರಂಭವಾಗಿ 204 ದಿನಗಳು ಪೂರ್ಣಗೊಂಡಿವೆ. ಈ ಹಂತದಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ತೆಗೆದುಕೊಳ್ಳುವುದರಿಂದ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಇದರ ಬೆನ್ನಲ್ಲೇ ಎರಡು ವಿಭಿನ್ನ ಮಾದರಿ ಲಸಿಕೆಗಳ ವಿತರಣೆಯ ಪ್ರಭಾವ ಮತ್ತು ಸುರಕ್ಷತೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 98 ಮಂದಿಯ ಮೇಲೆ ವೈದ್ಯಕೀಯ ಪ್ರಯೋಗವನ್ನು ನಡೆಸಲಾಯಿತು. 98 ಜನರ ಪೈಕಿ 40 ಜನರಿಗೆ ಎರಡು ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಹಾಗೂ 40 ಜನರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಯಿತು. ಇನ್ನುಳಿದ 18 ಜನರಿಗೆ ಮಾತ್ರ ಮೊದಲಿಗೆ ಕೊವಿಶೀಲ್ಡ್ ಲಸಿಕೆ ಹಾಗೂ ಎರಡನೇ ಬಾರಿ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿತ್ತು. 2021ರ ಮೇ ತಿಂಗಳಿನಿಂದ ಜೂನ್ ತಿಂಗಳ ಅವಧಿಯಲ್ಲಿ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು.
ವೈದ್ಯಕೀಯ ಪ್ರಯೋಗದಿಂದ ತಿಳಿದು ಬಂದ ಫಲಿತಾಂಶ
"ಮೊದಲು ಕೊವಿಶೀಲ್ಡ್ ನಂತರದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡ 18 ಜನರಲ್ಲಿನ ಸುರಕ್ಷತೆ ಹಾಗೂ ರೋಗ ನಿರೋಧಕರ ಶಕ್ತಿ ಮತ್ತು ಪರಿಣಾಮದ ಮೇಲೆ ಲಕ್ಷ್ಯ ವಹಿಸಿದ್ದೇವು. ಮೂರು ವರ್ಗಗಳಲ್ಲಿ ನೀಡಿರುವ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ಕಂಡುಕೊಳ್ಳಲಾಗಿದೆ. ಆಲ್ಫಾ, ಬೇಟಾ, ಡೆಲ್ಟಾ ರೂಪಾಂತರ ತಳಿಗಳ ವಿರುದ್ಧ ಹೆಚ್ಚು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಹಾಗೂ ರೋಗಾಣುಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಒಂದೇ ಮಾದರಿಯ ಎರಡು ಡೋಸ್ ಲಸಿಕೆಗಿಂತಲೂ, ಎರಡು ವಿಭಿನ್ನ ಡೋಸ್ ಮಾದರಿಯ ಲಸಿಕೆಯು ಹೆಚ್ಚು ಪರಿಣಾಮಕಾರಿ," ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಅಡೆನೋವೈರಸ್ ಮಾದರಿಯ ಲಸಿಕೆ ಮತ್ತು ರೋಗಾಣು ನಿಷ್ಕ್ರಿಯಗೊಳಿಸುವ ಲಸಿಕೆಗಳ ಸಮ್ಮಿಶ್ರಣವು ಕೇವಲ ಪರಿಣಾಮಕಾರಿಯಷ್ಟೇ ಅಲ್ಲ. ಒಂದು ಮಾದರಿ ಲಸಿಕೆಗಿಂತ ಎರಡು ಮಾದರಿಯ ಲಸಿಕೆಯ ಸಮ್ಮಿಶ್ರಣವು ಹೆಚ್ಚು ಸುರಕ್ಷಿತವಾಗಿದೆ. ಇದರ ಜೊತೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಪೂರಕವಾಗಿದೆ," ಎಂದು ವೈದ್ಯಕೀಯ ಪ್ರಯೋಗದಿಂದ ತಿಳಿದು ಬಂದಿದೆ.
ಪ್ರತಿಕೂಲ ರಕ್ಷಣೆ ಲಸಿಕೆ ನಂತರ ಪ್ರತಿಕೂಲ ಘಟನೆ ಮೇಲೆ ನಿಗಾ
ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ವಿತರಣೆ ನಂತರದಲ್ಲಿ ಎರಡು ಲಸಿಕೆಯ ಪ್ರತಿರಕ್ಷಣೆ ಕುರಿತು ವಿಶ್ಲೇಷಣೆ ನಡೆಸಲಾಯಿತು. ಮೊದಲ ಡೋಸ್ ಹಾಗೂ ಎರಡನೇ ಡೋಸ್ ಲಸಿಕೆ ವಿತರಣೆ ಸಂದರ್ಭದಲ್ಲಿ ಪ್ರತಿಪಕ್ಷಣಾ ಪ್ರಮಾಣ ಮತ್ತು ಪ್ರತಿಕೂಲ ಪ್ರಭಾವಗಳ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಎರಡು ಡೋಸ್ ಲಸಿಕೆ ನೀಡುವ ಸಂದರ್ಭದಲ್ಲಿ ಲಸಿಕೆ ಪಡೆದ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ನೋವು ಕಾಣಿಸಿಕೊಂಡಿದೆ. ಇದರ ಹೊರತಾಗಿ ಯಾವುದೇ ಸ್ಥಳೀಯ ಎಇಎಫ್‌ಐಗಳಾದ ಎರಿಥೆಮಾ, ಇಂಟ್ರಕ್ಷನ್, ಪ್ರುರಿಟಿಸ್ ಅಥವಾ ಪಸ್ಟಲ್ ರಚನೆಯು ಯಾವುದೇ ಭಾಗವಹಿಸುವವರಿಂದ ದಾಖಲಾಗಿಲ್ಲ. ಉರ್ಟೇರಿಯಾ, ವಾಕರಿಕೆ, ವಾಂತಿ, ಆರ್ತ್ರಲ್ಜಿಯಾ ಅಥವಾ ಕೆಮ್ಮಿನಂತಹ ಯಾವುದೇ ವ್ಯವಸ್ಥಿತ ರೋಗದ ಬಗ್ಗೆ ವರದಿಯಾಗಿಲ್ಲ. ಲಸಿಕೆ ಪಡೆದುಕೊಂಡ ಮೂರರಿಂದ ನಾಲ್ಕು ದಿನಗಳವರೆಗೂ ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆರೋಗ್ಯ ಸಮಸ್ಯೆ ನಿವಾರಣೆಗೆ ಪ್ಯಾರಾಸಿಟಮಲ್ ನೀಡವುದಕ್ಕೆ ಸಲಹೆ ನೀಡಲಾಗಿದೆ.
ಎರಡು ಪ್ರತ್ಯೇಕ ಮಾದರಿಯ ಲಸಿಕೆಯನ್ನು ಎರಡು ವಿಭಿನ್ನ ವೇದಿಕೆಗಳಲ್ಲಿ ನೀಡುವುದರ ಮೂಲಕ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. ಈ ಲಸಿಕೆಗಳ ಸಮ್ಮಿಶ್ರಣವು ಒಂದೇ ಮಾದರಿಯ ಎರಡು ಡೋಸ್ ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದು ಈ ಪ್ರಯೋಗದಿಂದ ತಿಳಿದು ಬಂದಿದೆ.
ಭಾರತದ ಆದ್ಯತೆ ಲಸಿಕೆ ವಿತರಣೆಯ ಮೇಲೆ ಹೆಚ್ಚಿದೆ
ದೇಶದಲ್ಲಿ ಎರಡೂ ಡೋಸ್ ಕೊರೊನಾವೈರಸ್ ಲಸಿಕೆ ಪಡೆದುಕೊಂಡವರ ಸಂಖ್ಯೆ ಶೇ.8ಕ್ಕಿಂತ ಕಡಿಮೆಯಾಗಿದೆ. ಈ ಹಂತದಲ್ಲಿ ನಾವು ಹೆಚ್ಚು ಜನರಿಗೆ ಲಸಿಕೆ ವಿತರಿಸುವ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಬೇಕಾಗಿದೆ. ಅಲ್ಲದೇ "ಎರಡು ಡೋಸ್ ಕೊವಿಡ್-19 ಲಸಿಕೆ ಪಡೆದುಕೊಂಡವರಿಗೆ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆ ಎಂಬುದಾಗಿ ಸೂಚಿಸುವ ಅಂಕಿ-ಅಂಶಗಳಿವೆ ಎಂದು ನನಗೆ ಅನ್ನಿಸುವುದಿಲ್ಲ," ಎಂದು ಕೊವಿಡ್-19 ಲಸಿಕೆ ವಿತರಣೆಯ ರಾಷ್ಟ್ರೀಯ ತಜ್ಞರ ತಂಡ ಸದಸ್ಯ ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸಮಿರನ್ ಪಾಂಡಾ ಹೇಳಿದ್ದಾರೆ.
"ದೇಶದಲ್ಲಿ ಯಾವ ವರ್ಗಕ್ಕೆ ಬೂಸ್ಟರ್ ಡೋಸ್ ನೀಡಬೇಕು ಮತ್ತು ಅದರ ಸಾಧ್ಯಾಸಾಧ್ಯತೆಗಳೇನುು ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮೊದಲು ಪರಿಶೋಧನೆ ನಡೆಸಬೇಕಾಗುತ್ತದೆ. ನಂತರದಲ್ಲಿ ಮೊದಲು ಲಸಿಕೆಯ ಡೋಸ್ ಪಡೆದುಕೊಂಡ ವೈದ್ಯಕೀಯ ಸಿಬ್ಬಂದಿಗೆ ಈ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆ. ಏಕೆಂದರೆ, ಅವರು ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡು ತಿಂಗಳುಗಳೇ ಕಳೆದು ಹೋಗಿವೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಬಹುಪಾಲು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯು ಪೂರ್ಣ ಪ್ರಮಾಣದ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದಾಗ್ಯೂ, ಕೊರೊನಾವೈರಸ್ ಎರಡನೇ ಅಲೆಯ ಸಂದರ್ಭದಲ್ಲಿ ನೂರಾರು ವೈದ್ಯರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ," ಎಂದು ಪಾಂಡಾ ಉಲ್ಲೇಖಿಸಿದ್ದಾರೆ.
ದೇಶದಲ್ಲಿ ಇಳಿಮುಖವಾಯಿತು ಲಸಿಕೆ ವಿತರಣೆ ಪ್ರಮಾಣ
ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 209 ದಿನಗಳಲ್ಲಿ 52.89 ಕೋಟಿಗೂ ಅಧಿಕ ಮಂದಿಗೆ ಲಸಿಕೆ ವಿತರಿಸಲಾಗಿದೆ. ಗುರುವಾರ ರಾತ್ರಿ 7 ಗಂಟೆ ವೇಳೆಗೆ 50,77,491 ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 52,89,27,844 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ದೇಶದಲ್ಲಿ ಒಂದೇ ದಿನ 39,49,956 ಫಲಾನುಭವಿಗಳಿಗೆ ಮೊದಲ ಡೋಸ್, 11,27,535 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.











