HEALTH TIPS

ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ

               ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಮೂರನೇ ಅಲೆಯ ಆತಂಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಕೊರೊನಾ ಮಟ್ಟಹಾಕಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ.


              ದಕ್ಷಿಣ ಕನ್ನಡ- ಕೇರಳ ಗಡಿಭಾಗದಲ್ಲಿ ಕೊರೊನಾ ಕಟ್ಟೆಚ್ಚರ ವಹಿಸಲಾಗಿದ್ದು, ಇದೀಗ ಜಿಲ್ಲೆಯ ಒಳಭಾಗದಲ್ಲೂ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲೇ ಅತೀ ಹೆಚ್ಚು ಜನ ಸೇರುವ ಹಿಂದೂ ಧಾರ್ಮಿಕ ಕ್ಷೇತ್ರಗಳಾದ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ಪೂಜಾ ಸೇವೆಗಳನ್ನು ಸ್ಥಗಿತಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

             ಕೆಲ ದಿನಗಳ ಹಿಂದೆಯಷ್ಟೇ ಕ್ಷೇತ್ರಗಳಲ್ಲಿ ಸೇವೆಗಳು ಆರಂಭವಾಗಿದ್ದು, ಇದೀಗ ಜಿಲ್ಲಾಡಳಿತ ಕೊರೊನಾ ಆತಂಕದಿಂದ ಸೇವೆಗಳನ್ನು ನಿಲ್ಲಿಸಲು ಸೂಚನೆ ನೀಡಿದೆ. ಈ ಎರಡು ಕ್ಷೇತ್ರಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಕೊರೊನಾ ಹರಡುವ ಭೀತಿಯಿಂದ ಜಿಲ್ಲಾಡಳಿತ ಈ ನೂತನ ಆದೇಶವನ್ನು ನೀಡಿದೆ. ಸದ್ಯ ಎಲ್ಲಾ ಸೇವೆಗಳನ್ನು ಸ್ಥಗಿತ ಮಾಡಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕೆಂದು ಜಿಲ್ಲಾಡಳಿತ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.


                       ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹರಕೆ ಮುಡಿ ಸೇವೆ ಬಂದ್

            ದಕ್ಷಿಣ ಕನ್ನಡ ಜಿಲ್ಲಾಡಳಿದ ಆದೇಶದ ಹಿನ್ನಲೆ ಧರ್ಮಸ್ಥಳದಲ್ಲಿ ನಡೆಯುವ ಎಲ್ಲಾ ಸೇವಾಧಿ ಕ್ರಿಯೆಗಳನ್ನು ಸ್ಥಗಿತಗೊಳಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮುಖವಾಗಿ ತುಲಾಭಾರ ಸೇವೆ, ಹರಕೆ ಮುಡಿ, ಸೇವೆಗಳಿಗೆ ಅತೀ ಹೆಚ್ಚಿನ ಭಕ್ತರು ನೋಂದಾವಣಿ ಮಾಡುತ್ತಿದ್ದು, ಈಗ ಆ ಎರಡೂ ಸೇವೆಗಳು ಸ್ಥಗಿತಗೊಳ್ಳಲಿದೆ. ಇನ್ನೂ ಶಿವನಿಗೆ ಅತ್ಯಂತ ಪ್ರಿಯವಾದ ರುದ್ರಾಭಿಷೇಕ, ಶತ ರುದ್ರಾಭಿಷೇಕ ಮತ್ತು ಸರ್ವ ಸೇವೆಗಳೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸ್ಥಗಿತಗೊಳ್ಳಲಿದೆ. ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಯನ್ನು ಕಡಿಮೆಗೊಳಿಸಲು ಜಿಲ್ಲಾಡಳಿತ ಆದೇಶ ನೀಡಿದೆ‌.

                       ಅನ್ನಛತ್ರ, ದರ್ಶನ ವ್ಯವಸ್ಥೆಯಲ್ಲಿ ಬದಲಾವಣೆ

         ಪ್ರಮುಖವಾಗಿ ಹರಕೆ ಮುಡಿ ಸೇವೆಯನ್ನು ಪ್ರತಿದಿನ ನೂರಾರು ಭಕ್ತರು ಮತ್ತು ವಾರಾಂತ್ಯದಲ್ಲಿ ಸಾವಿರಾರು ಜನ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಾಡಿಕೊಳ್ಳುತ್ತಿದ್ದರು. ಹರಕೆ ಮುಡಿ ಒಪ್ಪಿಸುವಂತಹ ವೇಳೆಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಗಳು ಇರುವುದರಿಂದ ಹೆಚ್ಚಿನ ಮುನ್ನೆಚ್ಚೆರಿಕಾ ದೃಷ್ಟಿಯಿಂದ ಸೇವೆಯನ್ನು ನಿಲ್ಲಿಸಲಾಗಿದೆ.

          ಅನ್ನಛತ್ರ, ದರ್ಶನ ವ್ಯವಸ್ಥೆ, ನೇತ್ರಾವತಿ ನದಿಯ ಸ್ನಾನ ಘಟ್ಟದಲ್ಲೂ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಲ್ಲಿ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಮಾಡಿದೆ.

                         ಕುಕ್ಕೆ ಸುಬ್ರಹ್ಮಣ್ಯದಲ್ಲೂ ಎಲ್ಲಾ ಸೇವೆಗಳು ಬಂದ್

               ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭಕ್ತ ಜನಸಾಗರವನ್ನು ತಪ್ಪಿಸುವಂತಹ ನಿಟ್ಟಿನಲ್ಲಿ ಸೇವೆಗಳನ್ನು ರದ್ದುಗೊಳಿಸಲು ಜಿಲ್ಲಾಡಳಿತ ಆದೇಶ ನೀಡಿದೆ. ಕುಕ್ಕೆ ಸುಬ್ರಹ್ಮಣ್ಯ ಸೇವೆಗಳು ಆರಂಭವಾಗಿ ವಾರ ಕಳೆಯುವಷ್ಟರಲ್ಲಿ ಈಗ ಮತ್ತೆ ಜಿಲ್ಲಾಡಳಿತ ಸೇವೆಗಳನ್ನು ಮಾಡುವುದಕ್ಕೆ ತಡೆ ನೀಡಿದೆ. ಈ ಹಿನ್ನಲೆಯಲ್ಲಿ ಮೊದಲೇ ಆನ್‌ಲೈನ್‌ನಲ್ಲಿ ಮುಂಗಡವಾಗಿ ಕಾಯ್ದಿರಿಕೊಂಡಿದ್ದ ಸೇವೆಗಳನ್ನು ರದ್ದುಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಸುಬ್ರಹ್ಮಣ್ಯದಲ್ಲಿ ಆಶ್ಲೇಷಾ ಬಲಿ ಸೇವೆ ಬಂದ್

            ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಮುಖವಾಗಿ ಆಶ್ಲೇಷಾ ಬಲಿ ಸೇವೆ ಮತ್ತು ಸರ್ಪ ಸಂಸ್ಕಾರ ಸೇವೆಗಳು ನಡೆಯುತ್ತಿದ್ದು, ಈ ಎರಡೂ ಸೇವೆಗಳು ಪ್ರತಿದಿನ ನಿಯಮಿತ ಸಂಖ್ಯೆಯಲ್ಲಿ ನಡೆಯುತ್ತಿತ್ತು. ಅಲ್ಲದೇ ಜನಸಂದಣಿಯನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ಎರಡು ಬ್ಯಾಚ್‌ಗಳಾಗಿ ಭಕ್ತರನ್ನು ವಿಂಗಡಿಸಲಾಗಿತ್ತು. ಆಶ್ಲೇಷಾ ಬಲಿ ಮತ್ತು ಸರ್ಪ ಸಂಸ್ಕಾರ ಸೇವೆಗಳನ್ನು ನೂರಕ್ಕೂ ಹೆಚ್ಚು ಭಕ್ತರು ಪ್ರತಿದಿನ ಮಾಡುತ್ತಿದ್ದು, ಈಗ ಆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

          ರಾಜ್ಯದಲ್ಲೇ ಬೆಂಗಳೂರು ಬಳಿಕ ಅತೀ ಹೆಚ್ಚಿನ ಕೊರೊನಾ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತಿದ್ದು, ಪ್ರವಾಸಿಗರು ಮತ್ತು ಭಕ್ತರಿಂದ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ ಎಂಬ ವರದಿಯನ್ನು ಜಿಲ್ಲಾಡಳಿತಕ್ಕೆ ಅಧಿಕಾರಿಗಳು ನೀಡಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಜಿಲ್ಲಾಡಳಿತ ಈ ನಿರ್ಧಾರ ಮಾಡಿದೆ.

                    ವಾರಾಂತ್ಯ ಭಕ್ತರ ಪ್ರವೇಶಕ್ಕೂ ನಿರ್ಬಂಧ

             ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ಗುರುವಾರದಿಂದ ಅಗಸ್ಟ್ 15ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪ್ರಮುಖ ದೇವಸ್ಥಾನಗಳಲ್ಲಿ ಸೇವೆ ಸ್ಥಗಿತಗೊಳಿಸಲಾಗಿದೆ. ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಭಕ್ತರ ಪ್ರವೇಶಕ್ಕೂ ನಿರ್ಬಂಧ, ದೇವರ ದರ್ಶನ ಬಂದ್ ಮಾಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ.

           ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವೆ ಸ್ಥಗಿತಗೊಳಿಸಲಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿದೆ.

             ತೀರ್ಥಪ್ರಸಾದ, ಸೇವೆ, ಅನ್ನ ಸಂತರ್ಪಣೆ ಬಂದ್ ಮಾಡಿ, ದೇವರ ದರ್ಶನಕ್ಕಷ್ಟೇ ಅವಕಾಶ ಕೊಡಲಾಗಿದೆ. ಶನಿವಾರ, ಭಾನುವಾರದಂದು ಭಕ್ತರ ಪ್ರವೇಶ ನಿರ್ಬಂಧದ ಜೊತೆ ದೇವರ ದರ್ಶನ, ವಸತಿ ಗೃಹಗಳಲ್ಲಿ ತಂಗುವುದಕ್ಕೂ ನಿಷೇಧಿವಿದ್ದು, ಉಳಿದ ದಿನ ವಸತಿ ಗೃಹಗಳಲ್ಲಿ ತಂಗುವವರಿಗೆ 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries