HEALTH TIPS

ಸಾಧ್ಯವೇ ಇಲ್ಲ; ಕೋವಿಶೀಲ್ಡ್‌ ಮರುಲಸಿಕೆ ಮನವಿ ತಿರಸ್ಕರಿಸಿದ ಕೇಂದ್ರ

             ತಿರುವನಂತಪುರಂ, ಆಗಸ್ಟ್‌ 18: ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದ ಕೇರಳದ ವ್ಯಕ್ತಿಯೊಬ್ಬರು ತಮಗೆ ಮತ್ತೆ ಕೋವಿಶೀಲ್ಡ್ ಲಸಿಕೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಮಂಗಳವಾರ ತಿರಸ್ಕೃತಗೊಂಡಿದೆ.

            ಈ ಮನವಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೇರಳ ಹೈಕೋರ್ಟ್‌ನಲ್ಲಿ ಈ ಸಂಬಂಧ ಮಂಗಳವಾರ ವಿಚಾರಣೆ ನಡೆದಿದ್ದು, ಈ ಸಂದರ್ಭ, ಕೊರೊನಾ ಸೋಂಕಿನ ವಿರುದ್ಧ ಸಂಪೂರ್ಣ ಎರಡು ಡೋಸ್‌ ಲಸಿಕೆ ಪಡೆದ ನಾಗರಿಕರಿಗೆ ಮತ್ತೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರು, ತಮಗೆ ಕೋವಿಶೀಲ್ಡ್‌ ಲಸಿಕೆಯನ್ನು ಮತ್ತೆ ನೀಡಬೇಕು. ತಾವು ಕೆಲಸ ಮಾಡುವ ಸೌದಿ ಅರೇಬಿಯಾದಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಪರಿಗಣಿಸಿಲ್ಲ. ಹೀಗಾಗಿ ಮತ್ತೆ ತಮಗೆ ಕೋವಿಶೀಲ್ಡ್ ಲಸಿಕೆ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

            ಗಿರಿಕುಮಾರ್ ತೆಕ್ಕನ್ ಕುನ್ನುಪುರಾತ್ (50), ದೇಶಕ್ಕೆ ಬರುವವರಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಸೌದಿ ಅರೇಬಿಯಾ ಅನುಮೋದಿಸಿಲ್ಲ ಎಂದು ಉಲ್ಲೇಖಿಸಿ ಮನವಿ ಸಲ್ಲಿಸಿದ್ದರು. ವೀಸಾ ನಿಯಮಗಳಂತೆ ಆಗಸ್ಟ್‌ 30ರ ಒಳಗೆ ಮತ್ತೆ ಸೌದಿ ಅರೇಬಿಯಾಗೆ ಹಿಂದಿರುಗಿಹೋಗಬೇಕಿದ್ದು, ಆ ನಿಗದಿತ ಸಮಯಕ್ಕೆ ಹಿಂದಿರುಗದಿದ್ದರೆ ಕೆಲಸ ಕಳೆದುಕೊಳ್ಳಲಿದ್ದಾರೆ.

              ಜನವರಿ ತಿಂಗಳಿನಲ್ಲಿ ಸೌದಿ ಅರೇಬಿಯಾದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ಸಂದರ್ಭ ಭಾರತಕ್ಕೆ ಗಿರಿಕುಮಾರ್ ಹಿಂದಿರುಗಿದ್ದರು. ಆ ಸಮಯ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಅನುಮತಿ ನೀಡಿದ್ದು, ತಮ್ಮ ಪಾಸ್‌ಪೋರ್ಟ್ ವಿವರಗಳನ್ನು ಸಲ್ಲಿಸಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು.

             ಏಪ್ರಿಲ್ 17ರಂದು ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ತಿಂಗಳ ನಂತರ ಎರಡನೇ ಡೋಸ್ ಪಡೆದುಕೊಂಡಿದ್ದರು. ಆದರೆ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡ ನಂತರ, ಈ ಲಸಿಕೆಗೆ ಸೌದಿ ಅರೇಬಿಯಾ ಅನುಮತಿ ನೀಡಿಲ್ಲ ಎಂಬುದು ತಿಳಿದುಬಂದಿತ್ತು.

          ದೇಶದಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಕೇರಳದಲ್ಲಿ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಭೇಟಿ ನೀಡಿ ಸಿಎಂ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು.

             ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ 1.11 ಕೋಟಿ ಕೋವಿಡ್‌ ಲಸಿಕೆಗಳನ್ನು ನೀಡುವುದಾಗಿಯೂ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಭರವಸೆ ನೀಡಿದ್ದಾರೆ.

            ಭೇಟಿ ನಂತರ ಈ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ಸಚಿವರು, "ಕೇಂದ್ರ ಸರ್ಕಾರವು ಕೇರಳಕ್ಕೆ ತುರ್ತು ಕೋವಿಡ್ ರೆಸ್ಪಾನ್ಸ್ ಪ್ಯಾಕೇಜ್- II ಅಡಿಯಲ್ಲಿ 267.35 ಕೋಟಿ ರೂ ಮಂಜೂರು ಮಾಡಿದೆ. ಇದು ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುತ್ತದೆ ಮತ್ತು ಕೊರೊನಾ ಸೋಂಕನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯವಾಗುತ್ತದೆ. ಹೆಚ್ಚುವರಿಯಾಗಿ, ಔಷಧಕ್ಕಾಗಿ ಕೇರಳದ ಪ್ರತಿ ಜಿಲ್ಲೆಗೆ 1 ಕೋಟಿ ಲಭ್ಯವಾಗಲಿದೆ," ಎಂದು ಮಾಹಿತಿ ಹಂಚಿಕೊಂಡಿದ್ದರು.

            ಕೇರಳದ ಜೊತೆಗೆ ದೇಶದಲ್ಲಿಯೂ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದ ಪ್ರಸ್ತುತ ದೈನಂದಿನ ಹೊಸ ಕೊರೊನಾ ಪ್ರಕರಣದಲ್ಲಿ ಅರ್ಧದಷ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕೇರಳ ರಾಜ್ಯದಿಂದಲ್ಲೇ ವರದಿಯಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ 37 ಭಾರತೀಯ ಜಿಲ್ಲೆಗಳ ಪೈಕಿ 11 ಜಿಲ್ಲೆಗಳು ಕೇರಳದ್ದು ಆಗಿದೆ. ಕೇರಳದ ಮಲಪ್ಪುರಂ, ಎರ್ನಾಕುಲಂ ಮತ್ತು ತ್ರಿಶೂರ್ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದೆ.

           ಭಾರತದಲ್ಲಿ ಮಂಗಳವಾರ 25,166 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 154 ದಿನಗಳಲ್ಲೇ ದಾಖಲಾದ ಅತಿ ಕಡಿಮೆ ಪ್ರಕರಣ ಇದಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25,166 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆ 3,69,846ಗೆ ಇಳಿದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries