ನವದೆಹಲಿ: ಈ ಬಾರಿ ನೈಋತ್ಯ ಮುಂಗಾರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿದ್ದು, 19 ವರ್ಷಗಳಲ್ಲೇ ದಾಖಲಾದ ಕನಿಷ್ಠ ಮಳೆ ಪ್ರಮಾಣ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಆಗಸ್ಟ್ ತಿಂಗಳಿನಲ್ಲಿ ದುರ್ಬಲ ಮುಂಗಾರಿನ ಎರಡು ಪ್ರಮುಖ ಅವಧಿ ದೇಶದಲ್ಲಿ ಕಂಡುಬಂದಿದೆ. ಆಗಸ್ಟ್ 9-16 ಹಾಗೂ ಆಗಸ್ಟ್ 23-27ರವರೆಗೆ ಮಳೆ ಚಟುವಟಿಕೆ ಕ್ಷೀಣಿಸಿದೆ ಎಂದು ಇಲಾಖೆ ಶುಕ್ರವಾರ ಮಾಹಿತಿ ಹಂಚಿಕೊಂಡಿದೆ.
ಆಗಸ್ಟ್ ತಿಂಗಳ ಅವಧಿಯಲ್ಲಿ, ಇಡೀ ದೇಶಾದ್ಯಂತ ಮಳೆಯು ದೀರ್ಘಾವಧಿ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ, ಅಂದರೆ 24% ಮಳೆ ಕೊರತೆ ಕಂಡುಬಂದಿದೆ. 2002ರ ನಂತರ, ಕಳೆದ 19 ವರ್ಷಗಳಲ್ಲಿ ದಾಖಲಾದ ಅತಿ ಕನಿಷ್ಠ ಮಳೆ ಪ್ರಮಾಣ ಇದಾಗಿದೆ.
ನೈಋತ್ಯ ಮುಂಗಾರು ಅಧೀಕೃತವಾಗಿ ಜೂನ್ 1ರಿಂದ ಆರಂಭವಾಗಿ ಸೆಪ್ಟೆಂಬರ್ 30ರವರೆಗೂ ಇರಲಿದೆ.
ಜೂನ್ ತಿಂಗಳಿನಲ್ಲಿ ಶೇ 10ರಷ್ಟು ಅಧಿಕ ಮಳೆ ದಾಖಲಾಗಿತ್ತು. ಆದರೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆ ಕೊರತೆ ಕಂಡುಬಂದಿತ್ತು. ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ 7% ಮಳೆ ಕಡಿಮೆಯಾಗಿದ್ದರೆ, ಆಗಸ್ಟ್ ತಿಂಗಳಿನಲ್ಲಿ 24% ಕಡಿಮೆ ಮಳೆ ದಾಖಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ 24ರಷ್ಟು ಕಡಿಮೆ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ನಾಲ್ಕು ವಿಭಾಗಗಳ ಪೈಕಿ, ಮಧ್ಯ ಭಾರತದಲ್ಲಿ ಅತಿ ಕಡಿಮೆ ಮಳೆ, ಅಂದರೆ ಶೇ. 39ರಷ್ಟು ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ. ಮಹಾರಾಷ್ಟ್ರ, ಗುಜರಾತ್, ಗೋವಾ, ಮಧ್ಯ ಪ್ರದೇಶ, ಛತ್ತೀಸ್‌ಗಡ ಹಾಗೂ ಒಡಿಶಾ ರಾಜ್ಯಗಳನ್ನು ಈ ಭಾಗ ಒಳಗೊಂಡಿದೆ.
ಉತ್ತರ ಭಾರತದ ರಾಜ್ಯಗಳನ್ನು ಒಳಗೊಂಡಿರುವ ವಾಯವ್ಯ ಭಾರತದ ಭಾಗದಲ್ಲಿನ ಮಳೆ ಕೊರತೆ ಶೇ 30ರಷ್ಟಿತ್ತು.
ಆಗಸ್ಟ್ ತಿಂಗಳಿನಲ್ಲಿ ಮಳೆ ಚಟುವಟಿಕೆ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಕನಿಷ್ಠ ಮಳೆ ದಾಖಲಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸೂಚನೆಯನ್ನು ನೀಡಿದೆ.
ಆಗಸ್ಟ್ ತಿಂಗಳಿನಲ್ಲಿ ವಾರದಿಂದ ವಾರಕ್ಕೆ ಮಳೆ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಸತತ ಮೂರು ವಾರದವರೆಗೆ ಮಳೆ ಕಡಿಮೆಯಾಗಿದೆ. ಆಗಸ್ಟ್ 11, ಆಗಸ್ಟ್ 18, ಆಗಸ್ಟ್ 25ರಂದು ಕೊನೆಗೊಳ್ಳುವ ವಾರದಲ್ಲಿ ದೇಶದಲ್ಲಿ ಕ್ರಮವಾಗಿ ಶೇ 35, ಶೇ 36, ಶೇ 21 ಮಳೆ ಇದ್ದು, ದೀರ್ಘಾವಧಿ ಸರಾಸರಿಗಿಂತ ಕಡಿಮೆ ಮಳೆ ಇದಾಗಿದೆ ಎಂದು ಇಲಾಖೆ ತಿಳಿಸಿದೆ.
ವಾಯುಭಾರ ಕುಸಿತ ಹಾಗೂ ಅವುಗಳ ಪ್ರಭಾವವೂ ಕಡಿಮೆ ಅವಧಿ ಉಳಿದಿದೆ. ಆಗಸ್ಟ್ ತಿಂಗಳಿನಲ್ಲಿ ಈ ಮಾರುತಗಳು ಪಶ್ಚಿಮದೆಡೆಗೆ ಚಲನೆ ಮಾಡಿದ್ದು, ದೊಡ್ಡ ಮಟ್ಟದಲ್ಲಿ ಮಳೆ ಕೊರತೆಗೆ ಕಾರಣವಾಗಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಅಧಿಕ ಮಳೆ ಸೂಚನೆ: ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಮುಂಗಾರಿನ ಕೊನೆಯ ತಿಂಗಳಾದ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಮಳೆ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿಯುವ ಮಳೆಯಿಂದಾಗಿ ಖಾರಿಫ್ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರೀ ಮಳೆ ಮುಂದುವರೆದರೆ ಸೋಯಾಬೀನ್, ಕಡಲೆ, ಭತ್ತ, ಜೋಳ, ಹತ್ತಿ ಬೆಳೆಗಳು ನಾಶವಾಗಲಿವೆ ಎಂದು ಕೃಷಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭಾರೀ ಮಳೆಯಿಂದಾಗಿ ಬೆಳೆ ನಾಶವಾಗಿ ಬೆಳೆಗಳ ಬೆಲೆ ಏರಿಕೆಯಾಗಲಿದೆ ಎಂದು ಅಂದಾಜಿಸಿದ್ದಾರೆ.





