HEALTH TIPS

ನವ ಮಂಗಳೂರು ಬಂದರಿನಲ್ಲಿ 3 ಹೊಸ ಯೋಜನೆ ಉದ್ಘಾಟಿಸಿದ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್

              ಮಂಗಳೂರು: ಕೇಂದ್ರ ಬಂದರು, ನೌಕಾ ಮತ್ತು ಜಲ ಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಇಂದು ನವ ಮಂಗಳೂರು ಬಂದರಿನಲ್ಲಿ ಮೂರು ಹೊಸ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

               ನವ ಮಂಗಳೂರು ಬಂದರಿನಲ್ಲಿ ಟ್ರಕ್ ಪಾರ್ಕಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ‌ನೆರವೇರಿಸುವುದು ಮತ್ತು ಯು.ಎಸ್ ಮಲ್ಯ ದ್ವಾರ ‌ನವೀಕರಣ ಮತ್ತು ಹೊಸದಾಗಿ ನಿರ್ಮಿಸಿರುವ ವ್ಯಾಪಾರ ಅಭಿವೃದ್ಧಿ ಕೇಂದ್ರದ ಲೋಕಾರ್ಪಣೆ ಸೇರಿದ್ದವು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ನವಮಂಗಳೂರು ಬಂದರು ಟ್ರಸ್ಟ್‌ನ ಅಧ್ಯಕ್ಷ ಡಾ. ಎ.ವಿ. ರಮಣ ಉಪಸ್ಥಿತರಿದ್ದರು.


           ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, "17,000 ಚದರ ಮೀಟರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಟ್ರಕ್ ನಿಲುಗಡೆ ಪ್ರದೇಶವನ್ನು 1.9 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಟ್ರಕ್ ಟರ್ಮಿನಲ್‌ನಲ್ಲಿ ಕಾಂಕ್ರೀಟ್ ಪೆವ್ಮೆಂಟ್, ಗೇಟ್ ಹೌಸ್, ರೆಸ್ಟೋರೆಂಟ್ ಮತ್ತು ಡಾರ್ಮೆಟ್ರಿಯನ್ನು 2022-23ರಲ್ಲಿ 5.00 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಬಂದರಿನ ಸಂಸ್ಥಾಪಕ‌ ಯು.ಎಸ್. ಮಲ್ಯ ಹೆಸರಿನ್ನಿಡಲಾಗಿರುವ ದ್ವಾರವನ್ನು 3.22 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುವುದು," ಎಂದರು.

          "ಈ ಕಾಮಗಾರಿ 2022ರ ಮಾರ್ಚ್ ವೇಳೆಗೆ ಪುರ್ಣಗೊಳ್ಳಲಿದೆ. ವ್ಯಾಪಾರ ಅಭಿವೃದ್ಧಿ ಕೇಂದ್ರದಲ್ಲಿ ಆಮದು, ರಫ್ತುದಾರರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗುತ್ತದೆ," ಎಂದು ಸಚಿವರು‌ ಹೇಳಿದರು.

                "ಒಳನಾಡು ಸಂಪರ್ಕ ಸುಧಾರಿಸಿರುವ ಹಿನ್ನೆಲೆಯಲ್ಲಿ ಕಂಟೈನರ್ ಮತ್ತು ಸಾಮಾನ್ಯ ಸರಕು ಸಂಚಾರ ಬಂದರಿನಲ್ಲಿ ಹೆಚ್ಚಾಗಿದೆ. ಪ್ರತಿದಿನ ಸುಮಾರು 500ಕ್ಕೂ ಅಧಿಕ ಟ್ರಕ್‌ಗಳು ಸರಕು ತುಂಬಿಕೊಂಡು ನವ ಮಂಗಳೂರು ಬಂದರಿನಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಸಂಚರಿಸುತ್ತಿವೆ. ಬಂದರಿನಲ್ಲಿ ಸದ್ಯ 160 ಟ್ರಕ್‌ಗಳಿಗೆ ನಿಲುಗಡೆ ಸೌಕರ್ಯ ಒದಗಿಸಿದ್ದರೂ ಸಹ ಹಾಲಿ ಆ ಪ್ರದೇಶ ಸಾಕಾಗುತ್ತಿಲ್ಲ.‌ ಅಂತೆಯೇ ಹೊಸ ನಿಲುಗಡೆ ಪ್ರದೇಶದ ನಿರ್ಮಾಣ ಅಮದು ರಫ್ತುದಾರರ ಪಾಲಿಗೆ ವರದಾನವಾಗಲಿದೆ," ಎಂದು ಹೇಳಿದರು.

        ನವ ಮಂಗಳೂರು ಬಂದರು ಟ್ರಸ್ಟ್‌ ಅಧ್ಯಕ್ಷ ಡಾ.ಎ.ವಿ. ರಮಣ ಮಾತನಾಡಿ, "ಉದ್ದೇಶಿತ ಪೂರ್ವದ್ವಾರ ಸಂಕೀರ್ಣ ನವೀಕರಣದಲ್ಲಿ, 46.6 ಮೀಟರ್ ಉದ್ದ ಮತ್ತು 13.5 ಮೀಟರ್ ಇರಲಿದೆ. ದ್ವಾರ ಸಂಕೀರ್ಣದಲ್ಲಿ ಟ್ರಕ್ ಸಂಚಾರ, ಪ್ರಯಾಣಿಕರ ನಾಲ್ಕು ಚಕ್ರದ ವಾಹನಗಳ ಸಂಚಾರ, ದ್ವಿಚಕ್ರ ವಾಹನ, ಪಾದಚಾರಿಗಳು, ಆರ್‌ಎಫ್‌ಐಡಿ ವ್ಯವಸ್ಥೆ, ರೇಡಿಯೋಲಾಜಿಕಲ್ ನಿಗಾ ವ್ಯವಸ್ಥೆ, ಬೂಮ್ ಬ್ಯಾರಿಯರ್ಸ್ ಇತ್ಯಾದಿ ಬೇರೆ ಪಥಗಳಿವೆ," ಎಂದು ಮಾಹಿತಿ ನೀಡಿದರು.

              "ಐಒಸಿ ಸಗಟು ಮಳಿಗೆಗೆ ಹೊಂದಿಕೊಂಡಿರುವ ಎನ್.ಎಚ್- 66ರ ಪಶ್ಚಿಮ ಭಾಗದಲ್ಲಿ 2.80 ಎಕರೆ ಪ್ರದೇಶದಲ್ಲಿ ವ್ಯಾಪಾರ ಅಭಿವೃದ್ಧಿ ಕೇಂದ್ರ ಮತ್ತು ಪರೀಕ್ಷಾ ಕೇಂದ್ರವನ್ನು ನಿರ್ಮಿಸಲಾಗುವುದು. ಈ ವ್ಯಾಪಾರ ಅಭಿವೃದ್ಧಿ ಕೇಂದ್ರ, ತಳಮಹಡಿ, ನೆಲಮಹಡಿ, ಮೂರು‌ ಮಹಡಿಯ ಕಟ್ಟಡವಾಗಿರಲಿದ್ದು, ಒಟ್ಟು 6300 ಚದರ ಮೀಟರ್ ಕಾರ್ಪೆಟ್ ಪ್ರದೇಶವಿರಲಿದೆ ಮತ್ತು ಪರೀಕ್ಷಾ ಕೇಂದ್ರ 1200 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ರಫ್ತಿಗಾಗಿ ವ್ಯಾಪಾರ ಅಭಿವೃದ್ಧಿ ಕೇಂದ್ರ ಮತ್ತು ಪರೀಕ್ಷಾ ಕೇಂದ್ರ ನಿರ್ಮಾಣದ ಅಂದಾಜು ವೆಚ್ಚ 24.57 ಕೋಟಿ ರೂ. ವ್ಯಾಪಾರ ಅಭಿವೃದ್ಧಿ ಕೇಂದ್ರ ಸಮಾವೇಶ ಸಭಾಂಗಣ, ರೆಸ್ಟೋರೆಂಟ್, ಅಂಚೆ ಕಚೇರಿ, ಬ್ಯಾಂಕ್ ಇತ್ಯಾದಿಗಳನ್ನು ಹೊಂದಿರಲಿದೆ," ಎಂದು ಮಾಹಿತಿ ನೀಡಿದರು.

         ನವ ಮಂಗಳೂರು ಬಂದರು ಕರ್ನಾಟಕದ ಒಂದು ಪ್ರಮುಖ ಬಂದರಾಗಿದ್ದು, ಅದು ಕೊಚ್ಚಿನ್ ಮತ್ತು ಗೋವಾ ಬಂದರು ನಡುವೆ ಆಯಕಟ್ಟಿನ ಜಾಗದಲ್ಲಿದೆ. ಬಂದರಿನ ಪ್ರತಿಯೊಂದು ಮೂಲಸೌಕರ್ಯವನ್ನು ಹಡಗುಗಳ ಅನುಕೂಲಕ್ಕೆ ತಕ್ಕಂತೆ ಮತ್ತು ಗ್ರಾಹಕರ ಸಾರಿಗೆ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಬಂದರಿನಲ್ಲಿ 15 ಸಂಪೂರ್ಣ ಕಾರ್ಯಾನಿರ್ವಹಣಾ ಬರ್ತ್‌ಗಳು, ನಿರ್ವಹಣಾ ಕಂಟೇನರ್‌ಗಳು, ಕಲ್ಲಿದ್ದಲು ಮತ್ತು ಇತರೆ ಸರಕು ನಿರ್ವಹಣೆಗೆ ಅನುಕೂಲಕಾರಿಯಾಗಿವೆ.

ನವ ಮಂಗಳೂರು ಬಂದರು ಟ್ರಸ್ಟ್‌ಗೆ ಐಎಸ್‌ಒ 9001, 14001 ಪ್ರಮಾಣಪತ್ರ ಪಡೆದಿದೆ ಮತ್ತು ಸುರಕ್ಷತೆ ಮತ್ತು ಭದ್ರತೆಯ ನಿಯಮ ಕಠಿಣ ಪಾಲನೆಯಿಂದಾಗಿ ಐಎಸ್‌ಪಿಎಸ್ ಪಾಲನೆ ಬಂದರೆಂದು ಹೆಸರಾಗಿದೆ. ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಟ್ರಸ್ಟ್, ಪರಿಸರ ಸುಧಾರಣೆ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದು, ಗ್ರೀನ್ ಬೆಲ್ಟ್ ಅಭಿವೃದ್ಧಿ ಮತ್ತು ಬಂದರಿನಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಬಂದರು ಪ್ರವಾಸಿಗರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತದೆ.

              ಇಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಎಲ್ಲ ಸೌಕರ್ಯಗಳಿರುವ ಅತ್ಯಾಧುನಿಕ ಕ್ರೂಸ್ ಟರ್ಮಿನಲ್ ಇದೆ ಮತ್ತು ಮಂಗಳೂರು ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿವೆ. ಈ ಬಂದರು ಮೂರು ರಾಷ್ಟ್ರೀಯ ಹೆದ್ದಾರಿಗಳಾದ ಎನ್.ಎಚ್- 66, 75 ಮತ್ತು 169ಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಮೂರು ರೈಲು ಮಾರ್ಗಗಳಾದ ಕೊಂಕಣ, ನೈರುತ್ಯ ಮತ್ತು ದಕ್ಷಿಣ ಮಾರ್ಗಗಳನ್ನು ಸಂಧಿಸುತ್ತದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries