HEALTH TIPS

ಸಮಷ್ಠಿ ಪ್ರಜ್ಞೆಯ ಸಾಹಿತ್ಯ ಇಂದಿನ ಅಗತ್ಯ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವಿಚಾರ ಸಂಕಿರಣದ ಅಧ್ಯಕ್ಷಸ್ಥಾನದಿಂದ ಡಾ. ಪೆರ್ಲ ಹೇಳಿಕೆ

               ಮಂಗಳೂರು: ಇವತ್ತಿನ ಸಾಹಿತ್ಯವು ನಮ್ಮನಮ್ಮ ವೈಯಕ್ತಿಕ ಬದುಕಿನ ನೋವು, ಜಂಜಡ ಮತ್ತು ಹಪಾಪಿತನಗಳ ಚಿತ್ರಣದಿಂದ ಹೊರಬಂದು ರಾಷ್ಟ್ರೀಯ ಸಮಷ್ಟಿಪ್ರಜ್ಞೆಯನ್ನು ಪ್ರತಿಪಾದಿಸುವ ಅಗತ್ಯವಿದೆ ಎಂದು ಕವಿ- ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.

                ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಏರ್ಪಡಿಸಿದ ಸಮಷ್ಟಿಪ್ರಜ್ಞೆಯ ಸಾಹಿತ್ಯ ಮತ್ತು ಸಮಾಜದ ಸಮಗ್ರೀಕರಣ ಎಂಬ ವಿಚಾರ ಸಂಕಿರಣದ ಅಧ್ಯಕ್ಷ ಸ್ಥಾನದಿಂದ ಅವರು ಮಾತಾಡುತ್ತಿದ್ದರು.

                ನಮ್ಮ ಹಿಂದಿನ ಯಾವುದೇ ಮಹತ್ವದ ಸಾಹಿತಿಗಳ ಸಾಹಿತ್ಯವನ್ನು ನೋಡಿದರೆ ಅವರು ಯಾರೂ ನಮ್ಮಂತೆ ವೈಯಕ್ತಿಕವಾದ ಹಳವಂಡಗಳನ್ನು ವೈಭವೀಕರಿಸಲಿಲ್ಲ. ಬದಲಾಗಿ ಚಿರಕಾಲ ನಿಲ್ಲುವ ಮೌಲ್ಯ ನೀತಿ ಪ್ರತಿಪಾದನೆಯ ಸಾಹಿತ್ಯ ಸೃಷ್ಟಿಸಿದ್ದನ್ನು ಕಾಣುತ್ತೇವೆ ಎಂದು ಡಾ. ಪೆರ್ಲ ಅವರು ಹೇಳಿದರು.

             ನಮ್ಮಲ್ಲಿರುವ ಹಲವು ಪ್ರಾಂತಗಳು, ಹಲವು ಭಾಷೆಗಳು, ಹಲವು ಮತಗಳು ರಾಷ್ಟ್ರವನ್ನು ಬೇರೆ ಬೇರೆ ನೆಲೆಗಳಿಂದ ನೋಡಿ ಸಮಗ್ರತೆಯ ದೃಷ್ಟಿಕೋನವನ್ನು ಹೊಂದುವ ಸಲುವಾಗಿ ಇವೆ. ರಾಜಕೀಯ ದೃಷ್ಟಿಕೋನದಿಂದ ವಸ್ತುವಿಷಯಗಳನ್ನು ನೋಡದೆ ಸಾಂಸ್ಕøತಿಕ ಮತ್ತು ಮಾನವೀಯ ಪ್ರಜ್ಞೆಯಿಂದ ನಾವು ಸಮಾಜವನ್ನು ನೋಡಿದರೆ ಸಮಷ್ಟಿಪ್ರಜ್ಞೆಯ ಸಾಹಿತ್ಯ ಹುಟ್ಟಿ ಬರಲು ಸಾಧ್ಯವಾಗುತ್ತದೆ ಎಂದು ಡಾ. ಪೆರ್ಲ ಅವರು ಪ್ರತಿಪಾದಿಸಿದರು.

              ವೈವಿಧ್ಯದಲ್ಲಿ ಏಕತೆಯೆಂಬುದು ಕೇವಲ ಘೋಷಣೆಯಲ್ಲ, ಅದು ಸಾಮೂಹಿಕ ಪ್ರಜ್ಞೆಯಿಂದ ಮೂಡಿ ಬರಬೇಕಾದ ವಿಶಾಲ ಮನೋಭಾವವಾಗಿದೆ. ಬೌದ್ಧಿಕ ಕ್ಷೇತ್ರದಲ್ಲಿ ಇರುವವರು ಸಮಾಜದ ಚುಕ್ಕಾಣಿ ಹಿಡಿದುಕೊಂಡು ರಾಜಕೀಯ ಮತ್ತು ಆಡಳಿತದಲ್ಲಿ ಇರುವವರಿಗೆ ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. 


                     ಪ್ರಾಧ್ಯಾಪಕಿ ಡಾ. ಶೈಲಜಾ ಯೇತಡ್ಕ ಅವರು ವಿಷಯಪ್ರವೇಶ ಮಾಡಿ ವಿಚಾರ ಸಂಕಿರಣಕ್ಕೆ ದಿಕ್ಕು ದೆಸೆ ತೋರಿಸಿದರು. ಹಳಗನ್ನಡ ಸಾಹಿತ್ಯ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಪರಿಕಲ್ಪನೆ ಎಂಬ ವಿಷಯವಾಗಿ ಡಾ. ಮೀನಾಕ್ಷಿ ರಾಮಚಂದ್ರ, ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಎಂಬ ವಿಷಯವಾಗಿ ಡಾ. ವಿಶ್ವನಾಥ ಬದಿಕಾನ, ಸ್ವಾತಂತ್ರ್ಯ ಬಳಿಕದ ಕಾಲಘಟ್ಟದಲ್ಲಿ ರಾಷ್ಟ್ರೀಯ ಪ್ರಜ್ಞೆ ಎಂಬ ವಿಷಯವಾಗಿ ಅಕ್ಷಯ ಆರ್. ಶೆಟ್ಟಿ ಮತ್ತು ಪ್ರಸ್ತುತ ಸಂದರ್ಭದ ಸವಾಲುಗಳು ಎಂಬ ವಿಷಯದ ಬಗ್ಗೆ ಡಾ. ಬಾಲಕೃಷ್ಣ ಭಾರದ್ವಾಜ ಅವರು ವಿಚಾರಗಳನ್ನು ಮಂಡಿಸಿದರು.

        ಬಳಿಕ  ಸಂವಾದ ಕಾರ್ಯಕ್ರಮ ಜರಗಿತು. ಆರಂಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಚ. ನ. ಶಂಕರ ರಾವ್ ದೀಪ ಬೆಳಗಿಸಿ ವಿಚಾರ ಸಂಕಿರಣ ಉದ್ಘಾಟಿಸಿದರು. ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಪರಿಷತ್ತಿನ ಚಟುವಟಿಕೆಗಳು ವೇಗ ಪಡೆದುಕೊಂಡಿದೆ ಎಂದು ಅವರು ಹೇಳಿದರಲ್ಲದೆ, ಇದೇ ಡಿಸೆಂಬರ್ ತಿಂಗಳಲ್ಲಿ ಉಜಿರೆಯಲ್ಲಿ ರಾಜ್ಯ ಸಮ್ಮೇಳನ ಜರಗಿಸಲು ಭರದಿಂದ ಸಿದ್ಧತೆಗಳಾಗುತ್ತಿವೆ ಎಂದರು.

             ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಡಾ. ಮಾಧವ ಎಂ. ಕೆ, ವಿದ್ಯಾರ್ಥಿ ಪರಿಷತ್ತಿನ ರಾಜೇಂದ್ರ ಬಾಯಾರು ಮೊದಲಾದವರು ಉಪಸ್ಥಿತರಿದ್ದರು.

           ನಿರೀಕ್ಷಾ ಯು. ಕೆ. ಪ್ರಾರ್ಥಿಸಿದರು. ಪ್ರಶಾಂತಿ ಶೆಟ್ಟಿ ಇರುವೈಲು ಸ್ವಾಗತಿಸಿದರು. ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ ಮಲ್ಲಿಗೆಮಾಡು ವಂದಿಸಿದರು. 





    


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries