HEALTH TIPS

ಅಕ್ಟೋಬರ್ ಅಂತ್ಯದವರೆಗೂ ಕೊರೊನಾ ನಿಯಂತ್ರಣ ಕ್ರಮ ವಿಸ್ತರಿಸಿದ ಕೇಂದ್ರ

               ನವದೆಹಲಿ: ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಸ್ಥಳೀಯ ಹರಡುವಿಕೆ ಹೆಚ್ಚಳವಾಗಿದ್ದು, ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸೋಂಕು ಸವಾಲಾಗಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ ದೇಶಾದ್ಯಂತ ಕೊರೊನಾ ನಿಯಂತ್ರಣ ಕ್ರಮಗಳನ್ನು ಅಕ್ಟೋಬರ್ ಅಂತ್ಯದವರೆಗೂ ವಿಸ್ತರಣೆ ಮಾಡಿದೆ.

            ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಸಂಬಂಧ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂಬರುವ ಹಬ್ಬಗಳ ಸಮಯದಲ್ಲಿ ಜನರು ಕೊರೊನಾ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದ್ದಾರೆ. ಇಂಥ ಸಮಯದಲ್ಲಿ ನಿಯಮಗಳ ಉಲ್ಲಂಘನೆಯಾದರೆ ಮತ್ತೆ ಕೊರೊನಾ ಪ್ರಕರಣಗಳ ಏರಿಕೆಯಾಗುವ ಸಾಧ್ಯತೆ ಅಧಿಕವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


           'ದೇಶದಲ್ಲಿ ಕೊರೊನಾ ಪ್ರಕರಣಗಳ ಇಳಿಕೆಯಾಗಿದೆ. ಆದರೆ ಹಬ್ಬಗಳು ಬರುತ್ತಿರುವುದರಿಂದ ಎಚ್ಚರಿಕೆಯಿಂದಿರುವುದು ಅತ್ಯಗತ್ಯ. ಸುರಕ್ಷಿತ ಕೋವಿಡ್ ಮಾರ್ಗಸೂಚಿ ಅನುಸರಿಸುವುದು ಇಂಥ ಸಮಯದಲ್ಲೇ ಹೆಚ್ಚು ಅವಶ್ಯಕ' ಎಂದು ಭಲ್ಲಾ ಪ್ರತಿಪಾದಿಸಿದ್ದಾರೆ.

          ಭಾರತದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಹಾಗೂ ಒಟ್ಟಾರೆ ಕೊರೊನಾ ರೋಗಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಸೋಂಕು ಹರಡುತ್ತಿದೆ ಹಾಗೂ ಕೊರೊನಾ ಸೋಂಕು ದೇಶದಲ್ಲಿ ಸಾರ್ವಜನಿಕ ಸವಾಲಾಗಿ ಮುಂದುವರೆದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

                ಕೊರೊನಾ ಪ್ರಕರಣಗಳ ಏರಿಕೆ ಸಾಧ್ಯತೆಯನ್ನು ತಪ್ಪಿಸಲು ಸಾಮೂಹಿಕವಾಗಿ ಜನ ಸೇರುವುದನ್ನು ತಪ್ಪಿಸಬೇಕು. ಕೊರೊನಾ ನಿಯಮಗಳನ್ನು ಪಾಲಿಸಿ ಜಾಗರೂಕತೆಯಿಂದಿರಬೇಕು. ಜಾತ್ರೆಗಳು, ಉತ್ಸವಗಳು, ದೊಡ್ಡ ಪ್ರಮಾಣದ ಸಾಮಾಜಿಕ ಕೂಟಗಳು, ಧಾರ್ಮಿಕ ಕಾರ್ಯಕ್ರಮಗಳು ಹೊಸ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

             ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ, ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಜಿಲ್ಲೆಯ ಪಾಸಿಟಿವಿಟಿ ದರ, ಆಸ್ಪತ್ರೆ, ಐಸಿಯು ಹಾಸಿಗೆಗಳ ಲಭ್ಯತೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸಲಹೆ ನೀಡಿದ್ದಾರೆ. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ತಮ್ಮ ಜಿಲ್ಲೆಗಳಲ್ಲಿ ಸೋಂಕಿನ ಪಾಸಿಟಿವಿಟಿ ದರ ಹೆಚ್ಚಾದರೆ, ಪ್ರಕರಣಗಳ ಹೆಚ್ಚಳವನ್ನು ಪರಿಣಾಮಕಾರಿಯಾಗಿ ತಡೆಯಲು ಹಾಗೂ ಹರಡುವಿಕೆ ತಡೆಗಟ್ಟಲು ಪೂರ್ವಭಾವಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

           ಸೋಂಕಿನ ಸಂಭಾವ್ಯ ಏರಿಕೆಯ ಸೂಚನೆಯನ್ನು ಮೊದಲೇ ಗುರುತಿಸಬೇಕು ಎಂದಿರುವ ಅವರು, ಕೊರೊನಾ ನಿಯಂತ್ರಣಕ್ಕೆ ಪಂಚಸೂತ್ರಗಳನ್ನು ಪುನರುಚ್ಚರಿಸಿದ್ದಾರೆ. ಟೆಸ್ಟ್‌-ಟ್ರ್ಯಾಕ್- ಟ್ರೀಟ್- ವ್ಯಾಕ್ಸಿನೇಷನ್ ಹಾಗೂ ಕೊರೊನಾ ನಿಯಮಗಳ ಪಾಲನೆಯನ್ನು ಎಂದಿಗೂ ಮರೆಯಬಾರದು ಎಂದು ಹೇಳುವುದರ ಜೊತೆಗೆ, ರಾಜ್ಯಗಳು ಕೊರೊನಾ ಲಸಿಕೆ ಯನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಹೇಳಿದ್ದಾರೆ. ಈ ದೃಷ್ಟಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸೂಚಿಸಿದ್ದಾರೆ.

                                    ಭಾರತದಲ್ಲಿ 201 ದಿನಗಳ ಬಳಿಕ ಸೋಂಕಿನ ದಾಖಲೆ ಇಳಿಕೆ:

           ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯು 201 ದಿನಗಳ ಬಳಿಕ ದಾಖಲೆಯ ಇಳಿಕೆ ಕಂಡಿದೆ. ಮಂಗಳವಾರ 20,000ಕ್ಕಿಂತಲೂ ಕಡಿಮೆ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಮಂಗಳವಾರ 18,795 ಮಂದಿಗೆ ಕೊವಿಡ್-19 ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 179 ಮಂದಿ ಸಾವನ್ನಪ್ಪಿದ್ದು, ಒಂದೇ ದಿನ 26,030 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

              ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,36,97,581ಕ್ಕೆ ಏರಿಕೆಯಾಗಿದೆ. ಇದುವರೆಗೂ 32,9,58,002 ಸೋಂಕಿತರು ಗುಣಮುಖರಾಗಿದ್ದು, 4,47,373 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 2,92,206 ಸಕ್ರಿಯ ಪ್ರಕರಣಗಳಿವೆ. 87 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries