ಕುಂಬಳೆ: ಕೃಷಿ ಭೂಮಿಗೆ ಧಾಳಿ ನೀಡಿ ಕೃಷಿಗೆ ಹಾನಿಮಾಡುವ ಕಾಡು ಮೃಗಗಳ ಹನನಕ್ಕೆ ಕೋವಿ ಪರವಾನಿಗೆ ಇರುವ ಕೃಷಿಕರಿಗೆ ಹಲವಾರು ಹೋರಾಟದ ಬಳಿಕ ಕೊನೆಗೂ ಕೋವಿ ಬಳಸಲು ಸರ್ಕಾರ ಇತ್ತೀಚೆಗೆ ಅನುಮತಿ ನೀಡಿದೆ. ಇದರ ಬೆನ್ನಿಗೇ ಸರ್ಕಾರ ಹಲವು ನಿಬಂಧನೆಗಳನ್ನು ಹೇರಿರುವುದರಿಂದ ಕೃಷಿಕರು ಧೈರ್ಯವಾಗಿ ಕೋವಿ ಬಳಸಲು ಇನ್ನೂ ಮುಂದೆ ಬಂದಿಲ್ಲ ಎನ್ನಲಾಗಿದೆ.
ಈ ಮಧ್ಯೆ ಕಾಸರಗೋಡಿನ ಯುವ ವಕೀಲ, ಧರ್ಮತ್ತಡ್ಕ ಬಳಿಯ ಮೇಪೋಡು ನಿವಾಸಿ ಕೃಷಿಕರೂ ಆದ ಪ್ರದೀಪ್ ರಾವ್ ಅವರು ಭಾನುವಾರ ರಾತ್ರಿ ತಮ್ಮ ತೋಟಕ್ಕೆ ನುಗ್ಗಿದ ಕಾಡುಹಂದಿಯನ್ನು ತಮ್ಮ ಡಬಲ್ ಬ್ಯಾರಲ್ ಕೋವಿಯಿಂದ ಕೊಂದು ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು.
ವಿಷಯ ತಿಳಿದು ಆಗಮಿಸಿದ ಕಾಸರಗೋಡು ಫಾರೆಸ್ಟ್ ರ್ಯಾಂಜ್ ಅಧಿಕಾರಿ ಸೋಲಮನ್ ಥಾಮಸ್, ವಿಭಾಗ ಫಾರೆಸ್ಟ್ ಅ|ಧಿಕಾರಿಗಳಾದ ಬಾಬು ಕೆ, ಜಯಕುಮಾರ್, ವೀಟ್ ಅಧಿಕಾರಿ ಉಮರ್ ಫಾರೂಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡರು. ಮಂಜೇಶ್ವರ ತಾಲೂಕು ವ್ಯಾಪ್ತಿಯ ಅರಣ್ಯ ವಲಯದಲ್ಲಿ ಇದೇ ಮೊದಲಬಾರಿ ಇಂತಹ ಘಟನೆಗೆ ಸಾಕ್ಷಿಯಾಗಿದೆ.







