ನವದೆಹಲಿ: 'ನ್ಯಾಯಾಂಗವೇ ಕಾಯ್ದೆ ರೂಪಿಸುವ ಪಾತ್ರ ನಿಭಾಯಿಸುವುದನ್ನು ತಡೆಯಲು, ಶಾಸಕಾಂಗವೇ ಆಯಾ ಕಾಲ ಮತ್ತು ಜನರ ಅಗತ್ಯವನ್ನು ಮನಗಂಡು ಕಾನೂನು ವ್ಯವಸ್ಥೆ ಸುಧಾರಣೆಗೆ ಮುಂದಾಗಬೇಕು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಶನಿವಾರ ಅಭಿಪ್ರಾಯಪಟ್ಟರು.
ಒಡಿಶಾದ ಕಾನೂನು ಸೇವಾ ಪ್ರಾಧಿಕಾರದ ನೂತನ ಕಟ್ಟಡವನ್ನು ಕಟಕ್‌ನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, 'ನ್ಯಾಯಾಂಗ ವ್ಯವಸ್ಥೆಯ ಭಾರತೀಯಕರಣ' ಆಗಬೇಕಾಗಿದೆ ಎಂದು ಪ್ರತಿಪಾದಿಸಿದರು.
'ಕಾಯ್ದೆಗಳು ಎಂದಿಗೂ ಸಮಕಾಲೀನ ಪರಿಸ್ಥಿತಿಗೆ ಪ್ರಾಯೋಗಿಕವಾಗಿ ಹೊಂದಬೇಕು. ಶಾಸಕಾಂಗ ಇದಕ್ಕೆ ಪೂರಕವಾಗಿ ಕಾಯ್ದೆಗಳನ್ನು ಸರಳೀಕರಣಗೊಳಿಸಬೇಕು. ಮುಖ್ಯವಾಗಿ ಕಾರ್ಯಾಂಗ, ಶಾಸಕಾಂಗಗಳು ಸಂವಿಧಾನದ ಆಶೋತ್ತರಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು' ಎಂದು ಸಲಹೆ ಮಾಡಿದರು.
ಅಂತಹ ಸಂದರ್ಭದಲ್ಲಿ ಕಾಯ್ದೆ ರೂಪಿಸುವ ಪಾತ್ರ ನಿಭಾಯಿಸಲು ನ್ಯಾಯಾಂಗ ಮುಂದಾಗುವುದಿಲ್ಲ. ಕಾಯ್ದೆಯನ್ನು ವ್ಯಾಖ್ಯಾನಿಸುವ, ಜಾರಿಗೆ ಪೂರಕವಾದ ಕಾರ್ಯಕ್ಕಷ್ಟೇ ಅದು ಸೀಮಿತವಾಗಲಿದೆ ಎಂದು ಸಿಜೆಐ ಹೇಳಿದರು.
ಶಿಷ್ಟಾಚಾರದ ಬದುಕು ಸಾಗಿಸುತ್ತಿರುವ ಸಾಂಪ್ರದಾಯಿಕ ಮತ್ತು ಕೃಷಿಕ ವರ್ಗವು ಸ್ವಾತಂತ್ರ್ಯದ 74 ವರ್ಷದ ನಂತರವೂ ಕೋರ್ಟ್‌ನ ನೆರವು ಪಡೆಯಲು ಹಿಂಜರಿಕೆಯ ಮನಸ್ಥಿತಿ ಹೊಂದಿವೆ. ಕೋರ್ಟ್‌ನ ಪರಿಭಾಷೆ, ಪ್ರಕ್ರಿಯೆ, ಚಟುವಟಿಕೆ ಯಾವುವೂ ಅವರಿಗೆ ಹತ್ತಿರವಾಗಿಲ್ಲ. ನ್ಯಾಯಾಂಗದ ಸಂಕೀರ್ಣವಾದ ಭಾಷೆ ಮತ್ತು ಪ್ರಕ್ರಿಯೆಯ ಪರಿಣಾಮವಾಗಿ ಜನಸಾಮಾನ್ಯರು ತಮ್ಮ ಸಮಸ್ಯೆಗಳ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ನ್ಯಾಯ ಕೋರುವವರು ಈಗಲೂ ಈ ವ್ಯವಸ್ಥೆಯ ಆಚೆಗೇ ಉಳಿದಿದ್ದಾರೆ ಎಂದು ಸಿಜೆಐ ಅಭಿಪ್ರಾಯಪಟ್ಟರು.
'ನ್ಯಾಯಾಂಗ ವ್ಯವಸ್ಥೆಯ ಭಾರತೀಯಕರಣವೇ ಪ್ರಾಥಮಿಕ ಸವಾಲು. ನಮ್ಮ ಕಾನೂನು ವ್ಯವಸ್ಥೆ ಸಾಮಾಜಿಕ ವಾಸ್ತವ, ಅದರ ಪರಿಣಾಮಗಳನ್ನು ಪರಿಗಣಿಸುತ್ತಿಲ್ಲ ಎಂಬುದು ಕಟು ಸತ್ಯ. ಜನರು ತಮ್ಮ ವ್ಯಾಜ್ಯಗಳನ್ನು ಕೋರ್ಟ್ ಅಂಗಳಕ್ಕೆ ತರುತ್ತಿರಬಹುದು. ಆದರೆ, ಅಂತಿಮವಾಗಿ ಅದು ಮತ್ತೊಂದು 'ದಾವೆ'ಯಾಗಿಯೇ ಉಳಿದುಕೊಳ್ಳಲಿದೆ. ಕಾಯ್ದೆ ರೂಪಿಸುವುದು ಕೋರ್ಟ್ ಕೆಲಸ ಎಂದೇ ಜನರು ಭಾವಿಸಿದಂತಿದೆ. ಈ ಭಾವನೆಯನ್ನು ಬದಲಿಸಬೇಕು. ಇಲ್ಲಿ ಕಾರ್ಯಾಂಗ, ಶಾಸಕಾಂಗದ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ಅರಿವು ಮೂಡಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಚೇತರಿಕೆ ನೀಡುವುದು ಈಗಿನ ಎರಡನೇ ಸವಾಲು. ಆದರೆ, ಮೂಲಸೌಕರ್ಯದ ಕೊರತೆಯಿಂದಾಗಿ ನ್ಯಾಯಾಂಗದ ಆಂತರಿಕ ಭಾಗವೇ ಆಗಿರುವ ಕಾನೂನು ಸೇವಾ ಪ್ರಾಧಿಕಾರಗಳ ಚಟುವಟಿಕೆಗಳು ಕುಂದಿವೆ ಎಂದು ಹೇಳಿದರು. ಬರುವ ದಿನಗಳಲ್ಲಿ ದೇಶದಾದ್ಯಂತ ಕಾನೂನು ಅರಿವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದೂ ತಿಳಿಸಿದರು.