ತಿರುವನಂತಪುರಂ: ಕೇರಳದಲ್ಲಿ ಅಕ್ಟೋಬರ್ 4 ರಂದು ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ತರಗತಿಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಶಿಕ್ಷಣ ಸಂಸ್ಥೆಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ತಾಂತ್ರಿಕ, ಪಾಲಿಟೆಕ್ನಿಕ್ ಮತ್ತು ವೈದ್ಯಕೀಯ ಸೇರಿದಂತೆ ಪದವಿ ಮತ್ತು ಉನ್ನತ ಪದವಿ ಕೋರ್ಸ್‍ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭಗೊಳ್ಳಲಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ವಾರ ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳಬೇಕು ಎಂದು ಸಿಎಂ ಹೇಳಿದರು. ಆದಾಗ್ಯೂ, ಎರಡನೇ ಡೋಸ್‍ಗೆ ಅರ್ಹರು ಲಸಿಕೆಯನ್ನು ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ವಸತಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶಿಕ್ಷಣ ಸಂಸ್ಥೆಗಳು ತೆರೆಯಲಿದೆ. ಕನಿಷ್ಠ ಒಂದು ಡೋಸ್ ಲಸಿಕೆ ಪೂರ್ಣಗೊಳಿಸಿದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಬಯೋ-ಬಬಲ್ ಮಾದರಿಯಲ್ಲಿ ಸೇರಿಸಿಕೊಳ್ಳಬಹುದು ಎಂದು ಸಿಎಂ ಹೇಳಿದರು.
ಎಸ್.ಎಸ್.ಎಲ್.ಸಿ ಮತ್ತು ಪ್ಲಸ್ ಟು ತರಗತಿಗಳ ಅಧ್ಯಯನ ಬಹಳ ಮುಖ್ಯವಾದುದು. ಆದ್ದರಿಂದ, ಈ ವಾರ ಶಾಲಾ ಶಿಕ್ಷಕರಿಗೂ ಲಸಿಕೆ ಹಾಕಿಸಬೇಕು. ಇದಕ್ಕಾಗಿ, ಲಸಿಕೆ ಪಡೆಯುವಲ್ಲಿ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕ ಮತ್ತು ಉನ್ನತ ಶಿಕ್ಷಣ ಇಲಾಖೆಗಳು ಇದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವಂತೆ ಮತ್ತು ಹತ್ತು ದಿನಗಳೊಳಗೆ ವಿಷಯವನ್ನು ಸ್ಪಷ್ಟಪಡಿಸುವಂತೆ ಸಿಎಂ ಸೂಚಿಸಿರುವರು.





