HEALTH TIPS

ಶಾಲೆಗಳಲ್ಲಿ ಮಕ್ಕಳಿಗೆ ಆಗಾಗ್ಗೆ ಕೊರೊನಾ ಪರೀಕ್ಷೆ ನಡೆಸಲು ಐಸಿಎಂಆರ್ ಅಧ್ಯಯನ ಸಲಹೆ

                ನವದೆಹಲಿ: ದೇಶದ ಬಹುಪಾಲು ರಾಜ್ಯಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗಿದೆ. ಮೂರನೇ ಅಲೆ ಆತಂಕದ ನಡುವೆ ತಜ್ಞರ ಸಲಹೆ ಮೇರೆಗೆ ಕೊರೊನಾ ನಿಯಮಗಳ ಪಾಲನೆಯೊಂದಿಗೆ ತರಗತಿಗಳನ್ನು ನಡೆಸಲಾಗುತ್ತಿದೆ.

            ದಿನನಿತ್ಯವೂ ಮಕ್ಕಳ ದೈಹಿಕ ತಾಪಮಾನ ತಪಾಸಣೆ ನಡೆಸಿ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ಸೋಂಕು ಹರಡುವಿಕೆ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ದಿನನಿತ್ಯವೂ ನಿರಂತರ ತಾಪಮಾನ ತಪಾಸಣೆ ನಡೆಸುವುದಕ್ಕಿಂತ ಮಕ್ಕಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ಆಗಾಗ್ಗೆ ಕೊರೊನಾ ಪರೀಕ್ಷೆ ನಡೆಸುವುದು ಸೂಕ್ತ ಎಂದು ಅಧ್ಯಯನವೊಂದು ಸಲಹೆ ನೀಡಿದೆ.

         ಐಸಿಎಂಆರ್‌ನ 'ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌'ನಲ್ಲಿ ಪ್ರಕಟವಾದ ಅಧ್ಯಯನವು ಶಾಲೆಗಳಲ್ಲಿ ಪ್ರತಿದಿನವೂ ಮಕ್ಕಳಿಗೆ ತಾಪಮಾನ ತಪಾಸಣೆ ಅಗತ್ಯವಿಲ್ಲ ಎಂದು ಹೇಳಿದೆ.


             ದಿನನಿತ್ಯ ತಾಪಮಾನ ತಪಾಸಣೆ ಪ್ರಯೋಜನಕ್ಕೆ ಬರುವುದಿಲ್ಲ. ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ಕೊರೊನಾ ಪರೀಕ್ಷಾ ತಂತ್ರಗಳನ್ನು ಅನುಸರಿಸುವುದು ಮುಖ್ಯವಾಗಿವೆ. ಇದು ಸೋಂಕು ಹರಡುವಿಕೆ ತಡೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

ಶಾಲೆಗಳಲ್ಲಿ ಕೊರೊನಾ ಸೋಂಕಿನ ಪರೀಕ್ಷಾ ತಂತ್ರಗಳನ್ನು ಪೂರಕವಾಗಿ ಅಳವಡಿಸಬೇಕು ಎಂದು ಐಸಿಎಂಆರ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಲರಾಂ ಭಾರ್ಗವ್, ಸಮೀರನ್ ಪಾಂಡಾ ಹಾಗೂ ತನು ಆನಂದ್ ವಿವರಣೆ ನೀಡಿದ್ದಾರೆ.

                ಕೆನಡಾದ ಮಾದರಿಯನ್ನು ಎದುರಿಗಿಟ್ಟುಕೊಂಡು ಸೋಂಕಿನ ಹರಡುವಿಕೆ ತಡೆಯಲ್ಲಿ ಕೊರೊನಾ ಪರೀಕ್ಷೆ ಹಾಗೂ ಸೋಂಕಿನ ಲಕ್ಷಣಗಳ ಪರೀಕ್ಷೆಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ.

          ದಿನನಿತ್ಯವೂ ತಾಪಮಾನ ಅಥವಾ ಸೋಂಕಿನ ಲಕ್ಷಣಗಳ ಗುರುತಿಸುವಿಕೆಗಿಂತ ಮಕ್ಕಳಿಗೆ ಅಥವಾ ಶಾಲಾ ಸಿಬ್ಬಂದಿಗೆ ಆಗಾಗ್ಗೆ ಕೊರೊನಾ ಪರೀಕ್ಷೆ ನಡೆಸುವುದು ಸೂಕ್ತವಾಗಿದೆ ಎಂದು ತಿಳಿಸಿದೆ. ಇದಕ್ಕಾಗಿ ಶಾಲೆಗಳಲ್ಲಿ ಆಗಾಗ್ಗೆ ಕೊರೊನಾ ಪರೀಕ್ಷೆ ನಡೆಸಲು ಸೂಕ್ತ ಸೌಲಭ್ಯಗಳನ್ನು ಹೊಂದಬೇಕು. ಸರ್ಕಾರದ ಮಾರ್ಗಸೂಚಿಯನ್ವಯ ಈ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಶಾಲೆಗಳಲ್ಲಿ ಆನ್‌ಸೈಟ್ ಪರೀಕ್ಷಾ ಸೌಲಭ್ಯಗಳ ಅಗತ್ಯವಿದೆ ಎಂಬುದನ್ನು ಅಧ್ಯಯನ ಒತ್ತಿಹೇಳಿದೆ.

          ಶಾಲೆಗಳ ಪುನರಾರಂಭದ ಪ್ರಾಮುಖ್ಯದ ಕುರಿತು ಹೇಳಿರುವ ಅಧ್ಯಯನ, ಮಕ್ಕಳಿಗೆ ಶಾಲೆಗಳನ್ನು ತೆರೆಯುವುದರಿಂದ ಸೋಂಕು ಹೆಚ್ಚಿನ ಮಟ್ಟದಲ್ಲಿ ಹರಡುತ್ತದೆ ಹಾಗೂ ಸೋಂಕಿನ ಪುನರುತ್ಪತ್ತಿ ದರ ಹೆಚ್ಚುತ್ತದೆ ಎಂಬುದಕ್ಕೆ ಇದುವರೆಗೂ ಯಾವುದೇ ಸೂಕ್ತ ಪುರಾವೆಗಳು ಇಲ್ಲ ಎಂದಿದೆ. 1-17ರ ವಯಸ್ಸಿನ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆಯಿದೆ. ಸೋಂಕಿನಿಂದ ಅಪಾಯವೂ ಕಡಿಮೆಯಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವ, ಇಲ್ಲವೇ ಮರಣವನ್ನಪ್ಪುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ವಿವರಿಸಿದೆ.

            ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿಯೂ ಮಕ್ಕಳಿಗೆ ಸೋಂಕು ತಗುಲಿದ ಸಾಧ್ಯತೆ ತುಂಬಾ ಕಡಿಮೆಯಿತ್ತು ಎಂಬುದನ್ನು ಉಲ್ಲೇಖಿಸಿದೆ.

           ಇದೇ ಜೂನ್ ತಿಂಗಳಿನಲ್ಲಿ ದೇಶದಲ್ಲಿ ನಾಲ್ಕನೇ ಸೆರೋ ಸರ್ವೇ ನಡೆದಿದ್ದು, ಈ ಸೆರೊ ಸರ್ವೇಯಲ್ಲಿ, 6-17 ವರ್ಷದ ಮಕ್ಕಳಲ್ಲಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯಿದೆ ಎಂಬುದನ್ನು ತಿಳಿಸಿಕೊಟ್ಟಿದೆ.

              ಯುನೆಸ್ಕೊ ವರದಿ ಪ್ರಕಾರ, ಭಾರತದಲ್ಲಿ ಸುಮಾರು 500 ದಿನಗಳ ಕಾಲ ಕೊರೊನಾ ಸೋಂಕಿನ ಕಾರಣವಾಗಿ ಶಾಲೆಗಳನ್ನು ಮುಚ್ಚಲಾಗಿದ್ದು, ಇದು 320 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ. ದೇಶದ 15 ರಾಜ್ಯಗಳಲ್ಲಿ ನಡೆಸಲಾದ ಶಾಲಾ ಮಕ್ಕಳ ಆನ್‌ಲೈನ್ ಹಾಗೂ ಆಫ್‌ಲೈನ್ ಕಲಿಕಾ ಸಮೀಕ್ಷೆಯು, ಆನ್‌ಲೈನ್ ಕಲಿಕೆಗೆ ಅವಕಾಶ ನೀಡಿದ್ದರೂ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದನ್ನು ತಿಳಿಸಿದೆ.

          ಶೇ 8ರಷ್ಟು ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳು ಹಾಗೂ ಶೇ 24ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. ಇನ್ನುಳಿದ ಮಕ್ಕಳಿಗೆ ಶಿಕ್ಷಣದಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಾಗಿದೆ.

          ಬಹುಪಾಲು ಪೋಷಕರು ತಮ್ಮ ಮಕ್ಕಳ ಓದುವ ಸಾಮರ್ಥ್ಯವು ಈ ಸಾಂಕ್ರಾಮಿಕ ಅವಧಿಯಲ್ಲಿ ಕುಸಿದಿದೆ ಎಂದು ಹೇಳಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಹೆಚ್ಚಿನ ಪೋಷಕರು ಶಾಲೆಯ ಪುನರಾರಂಭದ ಪರ ಮಾತನಾಡಿದ್ದಾರೆ.

            ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ಸಾಮಾಜಿಕ ಸಂವಹನ, ದೈಹಿಕ ಚಟುವಟಿಕೆ ಕೊರತೆ ಹಾಗೂ ದೀರ್ಘಾವಧಿ ಶಾಲಾ ಮುಚ್ಚುವಿಕೆಯಿಂದಾಗಿ ಸ್ನೇಹಿತರೊಂದಿಗಿನ ಬಾಂಧವ್ಯವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಸಹಜ ಬಾಲ್ಯಕ್ಕೆ ಶೈಕ್ಷಣಿಕ ಭವಿಷ್ಯಕ್ಕೆ ಶಾಲೆಗಳು ತೆರೆಯುವುದು ಅತ್ಯವಶ್ಯಕವಾಗಿದೆ ಎಂಬುದನ್ನು ಅಧ್ಯಯನ ಒತ್ತಿಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries