ಕಾಸರಗೋಡು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ಪ್ರತಿಭಟಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ಭಾರತ್ ಬಂದ್ ಕೇರಳದಲ್ಲಿ ಹರತಾಳವಾಗಿ ಪರಿಣಮಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ಕಾಸರಗೋಡು ಜಿಲ್ಲೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿವೆ. ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ. ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಕನಿಷ್ಠ ಸಂಖ್ಯೆಯಲ್ಲಿ ರಸ್ತೆಯಲ್ಲಿ ಕಂಡು ಬಂತು. ಸರ್ಕಾರಿ ಕಚೇರಿಗಳು ಬಹುತೇಕ ಮುಚ್ಚಿಕೊಂಡಿತ್ತು.
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ಭಾರತ ಬಂದ್ ಗೆ ಕೇರಳದಲ್ಲಿ ಆಡಳಿತ ನಡೆಸುವ ಎಡರಂಗ ಹಾಗು ವಿಪಕ್ಷ ಐಕ್ಯರಂಗ ಬೇಬಲ ನೀಡಿತ್ತು. ಬೆಳಗ್ಗೆ 6 ರಿಂದ ಆರಂಭಗೊಂಡ ಹರತಾಳ ಸಂಜೆ 6 ಗಂಟೆಯ ವರೆಗೆ ನಡೆಯಿತು. ಜಿಲ್ಲೆಯಲ್ಲಿ ಹರತಾಳ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಮಂಜೇಶ್ವರ, ಉಪ್ಪಳ, ಕುಂಬಳೆ, ಬದಿಯಡ್ಕ, ಪೆರ್ಲ, ಮುಳ್ಳೇರಿಯ, ಬೋವಿಕ್ಕಾನ, ಕಾಸರಗೋಡು ಸಹಿತ ಜಿಲ್ಲೆಯ ವಿವಿಧೆಡೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ತೆರೆದಿಲ್ಲ, ಬೆರಳೆಣಿಕೆಯಲ್ಲಿ ಆಟೋ ರಿಕ್ಷಾಗಳು ಮಾತ್ರ ಸಂಚರಿಸಿತು. ಕಾಸರಗೋಡು ನಗರ ಮತ್ತು ಉಪ್ಪಳ ಸಹಿತ ವಿವಿಧ ಕಡೆಗಳಲ್ಲಿ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿತು.
(ಚಿತ್ರ ನಿಸ್ತೇಜಗೊಂಡ ಕುಂಬಳೆ ಪೇಟೆ)







