HEALTH TIPS

ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ದಾಖಲೆ ಬರೆದ ವೈದ್ಯರಿಗೆ ಸಚಿವರಿಂದ ಸಿಹಿ

               ನವದೆಹಲಿ: ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಒಂದೇ ದಿನದಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಿದ ವೈದ್ಯಕೀಯ ಸಿಬ್ಬಂದಿಗೆ ಸ್ವತಃ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶುಭ ಕೋರಿದ್ದಾರೆ.

           ಶುಕ್ರವಾರ ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವರು ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಅಭೂತಪೂರ್ವ ಸಾಧನೆಗೈದ ವೈದ್ಯರು ಹಾಗೂ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಸಿಹಿ(ಲಡ್ಡು) ನೀಡುವುದರ ಮೂಲಕ ಸಂಭ್ರಮಿಸಿದರು.

           "ಆರೋಗ್ಯ ವಲಯದ ಕಾರ್ಯಕರ್ತರೇ ಧನ್ಯವಾದಗಳು. ವೆಲ್ ಡನ್ ಇಂಡಿಯಾ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ. ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸಿಬ್ಬಂದಿಗೆ ಲಡ್ಡುವನ್ನು ಹಂಚಿರುವ ವಿಡಿಯೋವನ್ನು ತಮ್ಮ ಟ್ವೀಟ್ ಸಂದೇಶದಲ್ಲಿ ಪೋಸ್ಟ್ ಮಾಡಿದ್ದಾರೆ.



                             ಪ್ರಧಾನಿ ಮೋದಿಗೆ ದೇಶವಾಸಿಗಳ ಬರ್ತ್ ಡೇ ಉಡುಗೊರೆ

             "ಆರೋಗ್ಯ ಕಾರ್ಯಕರ್ತರು ಮತ್ತು ದೇಶವಾಸಿಗಳ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲಾಗಿದೆ. ಇಂದು, ಅವರ ಜನ್ಮದಿನವಾಗಿದ್ದು, ಭಾರತವು ಒಂದು ದಿನದಲ್ಲಿ 2 ಕೋಟಿ ಡೋಸ್ ಲಸಿಕೆಗಳನ್ನು ನೀಡುವ ಮೂಲಕ ಐತಿಹಾಸಿಕ ಅಂಕಿ-ಅಂಶವನ್ನು ದಾಟಿದೆ, ಹೊಸ ದಾಖಲೆಯನ್ನು ಮಾಡಿದೆ. ಚೆನ್ನಾಗಿದೆ ಭಾರತ!", ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


                    ಮಧ್ಯಾಹ್ನದ ಹೊತ್ತಿಗೆ 1 ಕೋಟಿ ಡೋಸ್ ಕೊವಿಡ್-19 ಲಸಿಕೆ ವಿತರಣೆ

             "ಪ್ರಧಾನಮಂತ್ರಿ ನರೇಂದ್ರ ಮೋದಿ ಜೀಯವರ ಹುಟ್ಟುಹಬ್ಬದ ದಿನ ಮಧ್ಯಾಹ್ನ 1.30 ಗಂಟೆ ವೇಳೆಗೆ ದೇಶದಲ್ಲಿ 1 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ಇದು ದೇಶದಲ್ಲೇ ಮೊದಲ ಬಾರಿ ಕಡಿಮೆ ಅವಧಿಯಲ್ಲಿ ಹೆಚ್ಚು ಡೋಸ್ ಲಸಿಕೆ ನೀಡಿದ ದಾಖಲೆಯಾಗಿದ್ದು, ಇದನ್ನು ನಾವು ಮುಂದುವರಿಸಬೇಕಿದೆ. ಲಸಿಕೆ ವಿತರಣೆಯಲ್ಲಿ ಇಂದು ನಾವು ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ಪ್ರಧಾನಮಂತ್ರಿಯವರಿಗೆ ಜನ್ಮದಿನದ ಉಡುಗೊರೆಯನ್ನು ನೀಡುತ್ತೇವೆ ಎಂಬುದು ನನ್ನ ವಿಶ್ವಾಸವಾಗಿದೆ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದರು.

                    ದೇಶದಲ್ಲಿ 78.72 ಕೋಟಿ ಡೋಸ್ ಕೊವಿಡ್ ಲಸಿಕೆ ವಿತರಣೆ

              ಶುಕ್ರವಾರ ಒಂದೇ ದಿನ 2.5 ಕೋಟಿ ಡೋಸ್ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಕಿಕೊಂಡಿತ್ತು. ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಒಟ್ಟು ಪ್ರಮಾಣ 78.72 ಕೋಟಿ ಡೋಸ್ ಆಗಿದೆ. ಕಳೆದ ಒಂದು ತಿಂಗಳಿನಲ್ಲಿ ನಾಲ್ಕನೇ ಬಾರಿ ಒಂದೇ ದಿನ 1 ಕೋಟಿಗೂ ಹೆಚ್ಚು ಡೋಸ್ ಕೊರೊನಾವೈರಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ.

ಶುಕ್ರವಾರ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಭಾರತದಲ್ಲಿ ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿ ಪ್ರತಿಯೊಂದು ನಿಮಿಷಕ್ಕೆ ಕನಿಷ್ಠ 42,000 ಡೋಸ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ವಿರುದ್ಧ ದೇಶದಲ್ಲಿ ಲಸಿಕೆ ಹಾಕುವವರ ಅವಿರತ ಶ್ರಮವನ್ನು ಕೊಂಡಾಡುತ್ತಿದ್ದು, ನೈಜ ಸಮಯದಲ್ಲಿ ಲಸಿಕೆ ಹಾಕುವುದನ್ನು ತೋರಿಸಲು ನಾವು ಟಿಕ್ಕರ್ ವೊಂದನ್ನು ಸೇರಿಸಿದ್ದೇವೆ. ಪ್ರಸ್ತುತ ನಾವು ಪ್ರತಿ ನಿಮಿಷಕ್ಕೆ 42 ಸಾವಿರ ಅಥವಾ ಸೆಕೆಂಡ್ ಗೆ 700 ಲಸಿಕೆ ನೀಡಲು ಎದುರು ನೋಡುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್ ಎಸ್ ಶರ್ಮಾ ಟ್ವೀಟ್ ಮಾಡಿದ್ದಾರೆ.

                      ಕೊವಿಡ್-19 ಮೂರನೇ ಅಲೆಯಿಂದ ರಕ್ಷಿಸಿಕೊಳ್ಳಲು ಲಸಿಕೆ

             ಭಾರತವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯಿಂದ ರಕ್ಷಿಸಿಕೊಳ್ಳಲು ಡಿಸೆಂಬರ್ ಅಂತ್ಯದ ವೇಳೆದೆ ದೇಶದ ಶೇ.60ರಷ್ಟು ಅರ್ಹ ಫಲಾನುಭವಿಗಳಿಗೆ ಎರಡೂ ಡೋಸ್ ಲಸಿಕೆಯನ್ನು ವಿತರಿಸಬೇಕು ಎಂದು ಸೂಕ್ಷ್ಮಾಣುರೋಗ ಶಾಸ್ತ್ರಜ್ಞ ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಸಾಧನೆಯಾಗಬೇಕಾದಲ್ಲಿ ಪ್ರತಿನಿತ್ಯ ದೇಶದಲ್ಲಿ 1.2 ಕೋಟಿ ಡೋಸ್ ಲಸಿಕೆಯನ್ನು ವಿತರಿಸಬೇಕಾದ ಸವಾಲು ಎದುರಾಗಲಿದೆ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಡಿಸೆಂಬರ್ ಅಂತ್ಯದ ವೇಳೆಗೆ ಶೇ.39ರಷ್ಟು ಜನರಿಗೆ ಮಾತ್ರ ಎರಡೂ ಡೋಸ್ ಲಸಿಕೆಯನ್ನು ನೀಡಲಾಗುವುದು ಎಂದು ಅಂದಾಜಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಅದೇ ಡಿಸೆಂಬರ್ ಅಂತ್ಯದ ವೇಳೆಗೆ 200 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಗುರಿಯನ್ನು ಹೊೊಂದಿದೆ.

                             ಕೊರೊನಾವೈರಸ್ ಲಸಿಕೆ ವಿತರಣೆ ಹಂತಗಳು

            ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries