HEALTH TIPS

ಮತ್ತೊಂದು ಚಂಡಮಾರುತ ಸೂಚನೆ; ಈ ರಾಜ್ಯಗಳಲ್ಲಿ ಅ.12ರವರೆಗೂ ಮಳೆ

               ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುವ ಸಂಭವವಿದ್ದು, ಕೆಲವು ರಾಜ್ಯಗಳಲ್ಲಿ ಇನ್ನಷ್ಟು ದಿನ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಅಂಡಮಾನ್ ಸಮುದ್ರದಲ್ಲಿ ಅಕ್ಟೋಬರ್ 10ರ ವೇಳೆಗೆ ವಾಯುಭಾರ ಕುಸಿತ ಉಂಟಾಗಲಿದ್ದು, ಇದರ ಪ್ರಭಾವದಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಅಧಿಕ ಮಳೆಯಾಗಲಿರುವುದಾಗಿ ತಿಳಿಸಿದೆ.

              ಮುಂದಿನ 4-5 ದಿನಗಳಲ್ಲಿ ಪಶ್ಚಿಮದಿಂದ ವಾಯವ್ಯ ದಿಕ್ಕಿಗೆ- ದಕ್ಷಿಣ ಒಡಿಶಾ, ಆಂಧ್ರಪ್ರದೇಶ ಉತ್ತರ ಕರಾವಳಿ ಕಡೆಗೆ ಚಂಡಮಾರುತ ಪರಿಚಲನೆಯಾಗಬಹುದು ಎಂದು ತಿಳಿಸಿದೆ. ಈ ಚಂಡಮಾರುತ ಪ್ರಭಾವದಿಂದಾಗಿ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗಲಿದೆ. ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಒಳನಾಡಿನಲ್ಲಿ, ಆಂಧ್ರ ಪ್ರದೇಶ, ಕೇರಳದಲ್ಲಿ ಶುಕ್ರವಾರ ಅಧಿಕ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.

               ಅಕ್ಟೋಬರ್ 12ರವರೆಗೂ ಇದರ ಪ್ರಭಾವ ಮುಂದುವರೆಯಲಿದೆ. ಇದರ ಪ್ರಭಾವದಿಂದ ಆಂಧ್ರ ಕರಾವಳಿ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕಾರೈಕಲ್‌, ಕರ್ನಾಟಕದ ಉತ್ತರ ಒಳನಾಡು, ಗೋವಾ, ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ, ಕೊಂಕಣದಲ್ಲಿ ಗುಡುಗುಮಿಂಚು ಸಹಿತ ಮಳೆಯಾಗುವುದಾಗಿ ತಿಳಿಸಿದೆ.

              ಅರೇಬಿಯನ್ ಸಮುದ್ರ, ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿಯ ಚಲನೆ ಇರಲಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ರವಾನಿಸಲಾಗಿದೆ.

ಒಡಿಶಾದಲ್ಲಿ ಅಕ್ಟೋಬರ್ ತಿಂಗಳನ್ನು 'ಚಂಡಮಾರುತ ಮಾಸ' ಎಂದೇ ಕರೆಯಲಾಗುತ್ತದೆ. ಒಡಿಶಾ ಕರಾವಳಿಯಲ್ಲಿ ಅಪ್ಪಳಿಸಿದ ಪ್ರಮುಖ ಚಂಡಮಾರುತಗಳು ಅಕ್ಟೋಬರ್ ತಿಂಗಳಿನಲ್ಲಿಯೇ ಸಂಭವಿಸಿವೆ. ಹೀಗಾಗಿ ಸದ್ಯದ ಹವಾಮಾನ ವೈಪರೀತ್ಯಗಳು ಆತಂಕಕ್ಕೀಡು ಮಾಡಿದೆ.

           ಆದರೆ ಪ್ರಸ್ತುತ ಹವಾಮಾನ ಪರಿಸ್ಥಿತಿ ಚಂಡಮಾರುತಕ್ಕೆ ಅನುಕೂಲಕರವಾಗಿ ಕಂಡುಬರುತ್ತಿದೆಯಾದರೂ ಈಗಲೇ ಅದರ ಬಗ್ಗೆ ಹೇಳುವುದು ಅಕಾಲಿಕವೆನಿಸುತ್ತದೆ. ಅಕ್ಟೋಬರ್ 13ರಂದು ಈ ಕುರಿತು ವಿವರಣೆ ನೀಡಲು ಸೂಕ್ತ ಸಮಯವಾಗಿರುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

        'ಸಂಭವನೀಯ ಚಂಡಮಾರುತದ ಕುರಿತು ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ. ವಾಯುಭಾರ ಕುಸಿತದ ನಂತರವೇ ಚಂಡಮಾರುತದ ಮುನ್ಸೂಚನೆ ನೀಡಲು ಸಾಧ್ಯವಿದೆ' ಎಂದು ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್. ಬಿಸ್ವಾಸ್ ತಿಳಿಸಿದ್ದಾರೆ.

       ಇದರ ಜೊತೆಜೊತೆಗೆ ನೈಋತ್ಯ ಮುಂಗಾರು ಕೆಲವು ರಾಜ್ಯಗಳಲ್ಲಿ ಅಂತ್ಯವಾಗಲು ಆರಂಭಿಸಿದೆ. ಈ ಮುಂಗಾರು ಋತುವಿನಲ್ಲಿ, ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಒಟ್ಟಾರೆಯಾಗಿ 87 ಸೆ.ಮೀ.ನಷ್ಟು ದೀರ್ಘಾವಧಿಯ ಸರಾಸರಿ ಮಳೆ ದಾಖಲಾಗಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಟ್ಟದಲ್ಲಿ ಮಳೆ ದಾಖಲಾಗಿದೆ. ಮುಂಗಾರು ದೀರ್ಘಾವಧಿ ಮಳೆ (ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದ 96- 106%) ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ಮಾಹಿತಿ ಒದಗಿಸಿದ್ದಾರೆ.

              ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದೇಶದ ದಕ್ಷಿಣ ರಾಜ್ಯಗಳಲ್ಲಿ ಈಶಾನ್ಯ ಮುಂಗಾರು ಅವಧಿಯಲ್ಲಿ ಕೂಡ ಸಾಮಾನ್ಯ ಮಳೆ ದಾಖಲಾಗಲಿದೆ ಎಂದು ತಿಳಿಸಿದ್ದಾರೆ. ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಜಮ್ಮು ಹಾಗೂ ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಶುಕ್ರವಾರ ಮುಂಗಾರು ಅಂತ್ಯವಾಗುವ ಲಕ್ಷಣಗಳು ಕಂಡುಬಂದಿವೆ. ಮುಂದಿನ ಎರಡು ದಿನಗಳ ಕಾಲ ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಮುಂಗಾರು ಅಂತ್ಯವಾಗುವುದಾಗಿ ತಿಳಿಸಿದೆ.

         ಅಕ್ಟೋಬರ್ 6ರ ನಂತರ ವಾಯವ್ಯ ರಾಜ್ಯಗಳಲ್ಲಿ ಮುಂಗಾರು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ ಹವಾಮಾನ ಇಲಾಖೆ ಮಾಹಿತಿ ಒದಗಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries