HEALTH TIPS

18,000ಕೋಟಿ ರೂ.ಗೆ ಟಾಟಾ ಸನ್ಸ್‌ ಪಾಲಾದ ಏರ್‌ ಇಂಡಿಯಾ

                 ನವದೆಹಲಿ:ಟಾಟಾ ಸನ್ಸ್ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಡ್ ಅನ್ನು ಗೆದ್ದುಕೊಂಡಿದೆ. 50 ವರ್ಷಗಳ ಬಳಿಕ ಏರ್ ಇಂಡಿಯಾವನ್ನು ಮರುಸ್ವಾಧೀನ ಪಡಿಸಿಕೊಳ್ಳಲು ಟಾಟಾ ಸನ್ಸ್ 18,000 ಕೋ.ರೂ.ಗಳ ಬಿಡ್ ಸಲ್ಲಿಸಿತ್ತು. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿಯ ಶೇ.100ರಷ್ಟು ಮತ್ತು ಏರ್ ಇಂಡಿಯಾ ಎಸ್‌ಎಟಿಎಸ್ ಏರ್ಪೋರ್ಟ್ ಸರ್ವಿಸಿಸ್ ಪ್ರೈ.ಲಿ.ನಲ್ಲಿಯ ಶೇ.50ರಷ್ಟು ಪಾಲು ಬಂಡವಾಳವನ್ನು ಟಾಟಾ ಸನ್ಸ್ ಹೊಂದಿರಲಿದೆ.

          ಏರ್ ಇಂಡಿಯಾ ಹರಾಜು ಪ್ರಕ್ರಿಯೆಗಾಗಿ ಟಾಟಾ ಸನ್ಸ್ ಹುಟ್ಟುಹಾಕಿದ್ದ ಟಾಲೇಸ್ ಪ್ರೈ.ಲಿ.ಬಿಡ್ ಗೆದ್ದುಕೊಂಡಿದೆ ಎಂದು ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಪಾಂಡೆ ತಿಳಿಸಿದರು.

2021,ಆ.31ಕ್ಕೆ ಇದ್ದಂತೆ ಏರ್ ಇಂಡಿಯಾ 61,562 ಕೋ.ರೂ.ಗಳ ಒಟ್ಟು ಸಾಲವನ್ನು ಹೊಂದಿದ್ದು,ಈ ಪೈಕಿ 15,300 ಕೋ.ರೂ.ಗಳ ಸಾಲದ ಹೊಣೆಯನ್ನು ಟಾಟಾ ಸನ್ಸ್ ವಹಿಸಿಕೊಳ್ಳಲಿದೆ. ಉಳಿದ 46,262 ಕೋ.ರೂ.ಗಳ ಸಾಲವನ್ನು ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿ.ಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು.

           ಜಯಶಾಲಿ ಬಿಡ್‌ ದಾರ ಸಂಸ್ಥೆಯು ಕನಿಷ್ಠ ಒಂದು ವರ್ಷದ ಅವಧಿಗೆ ಯಾವುದೇ ಉದ್ಯೋಗಿಯನ್ನು ಕೆಲಸದಿಂದ ತೆಗೆಯುವುದಿಲ್ಲ ಮತ್ತು ಒಂದು ವರ್ಷದ ಬಳಿಕ ತೆಗೆದರೆ ಸ್ವಯಂ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಎಲ್ಲ ಉದ್ಯೋಗಿಗಳಿಗೆ ಗ್ರಾಚ್ಯುಯಿಟಿ ಮತ್ತು ಭವಿಷ್ಯ ನಿಧಿ ಸೌಲಭ್ಯಗಳನ್ನು ಒದಗಿಸಲಾಗುವುದು. ಇಂದು ಇದ್ದಂತೆ ಏರ್ ಇಂಡಿಯಾದಲ್ಲಿ 12,085 ಉದ್ಯೋಗಿಗಳಿದ್ದು,ಈ ಪೈಕಿ 8,084 ಕಾಯಂ ಮತ್ತು 4,001 ಗುತ್ತಿಗೆ ಆಧಾರದ ಉದ್ಯೋಗಿಗಳಾಗಿದ್ದಾರೆ. ಅಲ್ಲದೆ ಏರ್ ಇಂಡಿಯಾ ಎಕ್ಸ್ಪ್ರೆಸ್ 1,434 ಸಿಬ್ಬಂದಿಗಳನ್ನು ಹೊಂದಿದೆ ಎಂದು ನಾಗರಿಕ ವಾಯುಯಾನ ಕಾರ್ಯದರ್ಶಿ ರಾಜೀವ ಬನ್ಸಾಲ್ ತಿಳಿಸಿದರು.

             ಏರ್ ಇಂಡಿಯಾವನ್ನು ಸ್ವಾಧೀನ ಪಡಿಸಿಕೊಳ್ಳಲು ಟಾಟಾ ಸನ್ಸ್ ಮತ್ತು ಸ್ಪೈಸ್ ಜೆಟ್ ಅಧ್ಯಕ್ಷ ಅಜಯ ಸಿಂಗ್ (ವ್ಯಕ್ತಿಗತವಾಗಿ) ಬಿಡ್ಗಳನ್ನು ಸಲ್ಲಿಸಿದ್ದರು. ಟಾಟಾ ಬಿಡ್ ಅನ್ನು ಗೆದ್ದಿದೆ ಎಂದು ಕಳೆದ ತಿಂಗಳು ವರದಿಯಾಗಿತ್ತಾದರೂ,ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಕೇಂದ್ರ ಸಚಿವ ಪಿಯೂಷ ಗೋಯಲ್ ಹೇಳಿದ್ದರು.
          ಏರ್ ಇಂಡಿಯಾ ಒಟ್ಟು 70,000 ಕೋ.ರೂ.ಗೂ ಅಧಿಕ ನಷ್ಟದಲ್ಲಿದ್ದು,ಸರಕಾರವು ಪ್ರತಿದಿನ ಸುಮಾರು 20,000 ಕೋ.ರೂ.ಗಳ ನಷ್ಟವನ್ನು ಅನುಭವಿಸುತ್ತಿದೆ.
            ಏರ್ ಇಂಡಿಯಾದ ಮಾರಾಟಕ್ಕಾಗಿ ಇದು ನರೇಂದ್ರ ಮೋದಿ ಸರಕಾರದ ಎರಡನೇ ಪ್ರಯತ್ನವಾಗಿತ್ತು. 2018ರಲ್ಲಿ ಮೊದಲ ಬಾರಿ ಏರ್ ಇಂಡಿಯಾ ಮಾರಾಟಕ್ಕೆ ಅದು ಯತ್ನಿಸಿತ್ತಾದರೂ ಸಂಸ್ಥೆಯ ಸಾಲದ ಹೊರೆಯ ಕಳವಳದಿಂದಾಗಿ ಖರೀದಿದಾರರು ಆಸಕ್ತಿಯನ್ನು ತೋರಿಸಿರಲಿಲ್ಲ.

           ಜೆಆರ್ಡಿ ಟಾಟಾ ಅವರು 1932ರಲ್ಲಿ ಸ್ಥಾಪಿಸಿದ್ದ ಟಾಟಾ ಏರ್ ಸರ್ವಿಸಿಸ್,1953ರಲ್ಲಿ ರಾಷ್ಟ್ರೀಕರಣಗೊಂಡು ಏರ್ ಇಂಡಿಯಾ ಎಂದು ಮರುನಾಮಕರಣಗೊಂಡಿತ್ತು. ಜೆಆರ್ಡಿ ಟಾಟಾ ಅವರು 1977ರವರೆಗೂ ಅದರ ಅಧ್ಯಕ್ಷರಾಗಿ ಮುಂದುವರಿದಿದ್ದರು.
            ಏರ್ ಇಂಡಿಯಾ 1960ಲ್ಲಿ ಜೆಟ್ ವಿಮಾನವನ್ನು ಹೊಂದಿದ ಮೊದಲ ಏಷ್ಯನ್ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು,ನ್ಯೂಯಾರ್ಕ್ಗೆ ವಿಮಾನಯಾನವನ್ನು ಆರಂಭಿಸಿತ್ತು.

        ಪ್ರಸಕ್ತ ಟಾಟಾ ಸಮೂಹವು ಸಿಂಗಾಪುರ ಏರ್ಲೈನ್ಸ್ನೊಂದಿಗೆ ಪಾಲುದಾರಿಕೆಯಲ್ಲಿ ವಿಸ್ತಾರ ಮತ್ತು ಮಲೇಶಿಯಾದ ಏರ್‌ಏಷ್ಯಾದ ಪಾಲುದಾರಿಕೆಯಲ್ಲಿ ಏರ್‌ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಗಳನ್ನು ನಡೆಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries