ನವದೆಹಲಿ: ಮಕ್ಕಳ ಮೇಲೆ ನಡೆಯುತ್ತಿರುವ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಸುಗಮವಾಗಿದ್ದು, ಅಂದುಕೊಂಡಂತೆ ಆದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಮಕ್ಕಳ ಲಸಿಕೆ ಬಳಕೆಗೆ ಮುಕ್ತವಾಗಬಹುದು ಎಂದು ಪುಣೆ ಮೂಲದ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ)ದ ಸಿಇಓ ಆದಾರ್ ಪೂನಾವಾಲಾ ಹೇಳಿದ್ದಾರೆ.
ಈ ಬಗ್ಗೆ ವಿಶೇಷ ಸಂದರ್ಶನದಲ್ಲಿವೊಂದರಲ್ಲಿ ಮಾತನಾಡಿದ ಅವರು, ''2-3 ವರ್ಷ ವಯಸ್ಸಿನ ಮಕ್ಕಳಿಗೆ ಕೊವೊವ್ಯಾಕ್ಸ್ ಲಸಿಕೆ ಫೆಬ್ರವರಿ 2022 ರೊಳಗೆ ಅನುಮೋದನೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಜೊತೆಗೆ ವಿಶ್ವಕ್ಕೆ ಕೋವಿಡ್ -19 ಲಸಿಕೆಗಳ ರಫ್ತು ಪುನರಾರಂಭಿಸಲು ಕೇಂದ್ರ ಸರ್ಕಾರದ ಆದೇಶಕ್ಕಾಗಿ ಸಂಸ್ಥೆಯು ಕಾಯುತ್ತಿದೆ,'' ಎಂದು ಹೇಳಿದರು. "ಸರ್ಕಾರವು ಕೋವಿಶೀಲ್ಡ್‌ಗಾಗಿ ಡಿಸೆಂಬರ್‌ವರೆಗೆ ಪ್ರತಿ ತಿಂಗಳು 200 ದಶಲಕ್ಷ ಡೋಸ್‌ಗಳಿಗೆ ಆದೇಶಗಳನ್ನು ನೀಡಿದೆ. ಅಕ್ಟೋಬರ್ ಅಂತ್ಯದ ವೇಳೆಗೆ, ನಾವು ಕೆಲವು ರಫ್ತುಗಳನ್ನು ಪುನರಾರಂಭಿಸಲು ನೋಡುತ್ತಿದ್ದೇವೆ. ಅಸ್ತಿತ್ವದಲ್ಲಿರುವ ಲಸಿಕೆ ರಫ್ರ್ತಿಗೆ ಸರ್ಕಾರದಿಂದ ನಿರ್ದೇಶನಗಳಿಗಾಗಿ ಕಾಯುತ್ತಿದ್ದೇವೆ," ಎಂದರು.
ಕೊವೊವಾಕ್ಸ್ ಮತ್ತು ಲಸಿಕೆಗಳ ಲಭ್ಯತೆಯ ಕುರಿತು ಮಾತನಾಡುತ್ತಾ ಅವರು, ನಾವು ಕೊವೊವಾಕ್ಸ್‌ಗಾಗಿ ಡಬ್ಲ್ಯುಎಚ್‌ಒಗೆ ಡೇಟಾವನ್ನು ಸಲ್ಲಿಸಿದ್ದೇವೆ. ಮಕ್ಕಳಿಗೆ ಕೊವಿಡ್ ಲಸಿಕೆಯಂದು ಕೊವೊವಾಕ್ಸ್ ಅನ್ನು ಆಯ್ಕೆ ಮಾಡಿದ್ದೇವೆ. ಲಸಿಕೆ ದಾಸ್ತಾನುಗಳಿಗೆ ಇನ್ನು ಮುಂದೆ ಯಾವುದೇ ಅಡ್ಡಿಯಾಗುವುದಿಲ್ಲ. ನಮ್ಮಲ್ಲಿ ಒಂದು ತಿಂಗಳ ಸ್ಟಾಕ್ ಇದೆ. ಫೆಬ್ರವರಿಯ ಹೊತ್ತಿಗೆ ನಾವು 2-3 ವರ್ಷ ವಯಸ್ಸಿನ ಮಕ್ಕಳಿಗೆ ಕೊವೊವಾಕ್ಸ್‌ಗಾಗಿ ಅನುಮೋದನೆಯನ್ನು ಹೊಂದಬೇಕು ಎಂದರು.
ಕೋವಿಶೀಲ್ಡ್ ಉತ್ಪಾದನೆ ಮತ್ತು ವಿತರಣೆಗೆ ನಾವು 10,000 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದೇವೆ. ರಫ್ತು ನಿರ್ಬಂಧಗಳಿಂದಾಗಿ ನಾವು ಪೂರೈಸಲು ಸಾಧ್ಯವಾಗದ ದೇಶಗಳಿಗೆ ಸುಮಾರು 200 ಮಿಲಿಯನ್ ಡಾಲರ್‌ಗಳನ್ನು ಹಿಂದಿರುಗಿಸಬೇಕಾಗಿತ್ತು ಎಂದರು.
ಇತ್ತೀಚೆಗೆ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರು ಮುಂದಿನ ತಿಂಗಳು ಕೋವಿಡ್ -19 ಲಸಿಕೆಗಳ ರಫ್ತುನ್ನು ಭಾರತದಲ್ಲಿ 'ಲಸಿಕೆ ಮೈತ್ರಿ' ಕಾರ್ಯಕ್ರಮದ ಅಡಿಯಲ್ಲಿ ಪುನರಾರಂಭಿಸಲಿದ್ದೇವೆ ಎಂದಿದ್ದರು. ಆದರೆ ಸರ್ಕಾರ ಈ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಹಲವೆಡೆ ಲಸಿಕೆ ಕೊರತೆ ಇದೆ. ಹೀಗಾಗಿ ತನ್ನದೇ ಪ್ರಜೆಗಳಿಗೆ ಲಸಿಕೆ ಹಾಕುವುದು ಮೊದಲ ಆದ್ಯತೆಯಾಗಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.
ಲಸಿಕೆ ಕಾರ್ಯಕ್ರಮದಲ್ಲಿ ಭಾರತ ಸಾಧನೆ
ಕೋವಿಡ್ -19 ವಿರುದ್ಧದ ಲಸಿಕೆ ಕಾರ್ಯಕ್ರಮದಲ್ಲಿ ಭಾರತ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಏಕೆಂದರೆ ದೇಶದಲ್ಲಿ ನೀಡಲಾದ ಲಸಿಕೆ ಪ್ರಮಾಣವು ಗುರುವಾರ 100 ಕೋಟಿ ಗಡಿ ದಾಟಿದೆ. ಇದು ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ವಿಜಯ ಎಂದು ಲಸಿಕೆಯ ಹೆಗ್ಗುರುತನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಇತಿಹಾಸವನ್ನು ಬರೆದಿದೆ ಎಂದು ಹೊಗಳಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಭಾರತದ ಎಲ್ಲಾ ಅರ್ಹ ವಯಸ್ಕ ಜನಸಂಖ್ಯೆಯ ಶೇಕಡಾ 75 ಕ್ಕಿಂತಲೂ ಕಡಿಮೆ ಜನರಿಗೆ ಮೊದಲ ಡೋಸ್ ಅನ್ನು ನೀಡಲಾಗಿದೆ ಮತ್ತು ಸುಮಾರು 31 ಪ್ರತಿಶತದಷ್ಟು ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.
ದೇಶವು 30-ಕೋಟಿ ಡೋಸ್‌ಗಳಿಂದ 40-ಕೋಟಿ ಗಡಿಯನ್ನು ತಲುಪಲು 24 ದಿನಗಳನ್ನು ತೆಗೆದುಕೊಂಡಿತು. ನಂತರ ಆಗಸ್ಟ್ -6 ರಂದು 50-ಕೋಟಿ ವ್ಯಾಕ್ಸಿನೇಷನ್ ಮಾರ್ಕ್ ಅನ್ನು ಮೀರಲು 20 ದಿನಗಳನ್ನು ತೆಗೆದುಕೊಂಡಿದೆ. ಜನವರಿ 16 ರಂದು ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲಾಯಿತು. ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯೂ) ಮೊದಲ ಹಂತದಲ್ಲಿ ಲಸಿಕೆ ಪಡೆದರು. ಮುಂಚೂಣಿಯ ಕೆಲಸಗಾರರಿಗೆ (FLWs) ಫೆಬ್ರವರಿ 2 ರಂದು ಲಸಿಕೆ ನೀಡಲು ಆರಂಭಿಸಲಾಯಿತು.
ಕೋವಿಡ್ -19 ಲಸಿಕೆಯ ಮುಂದಿನ ಹಂತವು ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮತ್ತು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಿಗದಿತ ಸಹವರ್ತಿ ಪರಿಸ್ಥಿತಿಗಳೊಂದಿಗೆ ಆರಂಭವಾಯಿತು. ದೇಶವು ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆಯನ್ನು ಹಾಕಿತು. ನಂತರ 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ತನ್ನ ಲಸಿಕೆ ಹಾಕುವಿಕೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿತು.

