ನವದೆಹಲಿ: ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಒಂದಾದ ಎಸ್ - 400 ಕ್ಷಿಪಣಿ ವ್ಯವಸ್ಥೆಯನ್ನು ಈ ವರ್ಷದ ಅಂತ್ಯದ ವೇಳೆಗೆ ವಾಯುಪಡೆಗೆ ಸೇರಿಸಲಾಗುವುದು ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಮಂಗಳವಾರ ಹೇಳಿದ್ದಾರೆ.
ತನ್ನ ಸಂಪೂರ್ಣ ಕಾರ್ಯಕ್ಷಮತೆಗಾಗಿ ಮೂರು ವಿಭಿನ್ನ ಕ್ಷಿಪಣಿಗಳನ್ನು ಬಳಸುವ ಎಸ್ -400 ವಿಮಾನ-ನಿರೋಧಕ ಶಸ್ತ್ರಾಸ್ತ್ರ ವ್ಯವಸ್ಥೆಯ ಅಳವಡಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷದ ಅಂತ್ಯದ ವೇಳೆಗೆ ಅದನ್ನು ಸೇನೆಯಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಏರ್ ಚೀಫ್ ಮಾರ್ಷಲ್ ಚೌಧರಿ ಅವರು, 'ಎಸ್-400 ವಿತರಣೆಯು ಹಾದಿಯಲ್ಲಿದೆ. ಮೊದಲ ರೆಜಿಮೆಂಟ್ ಅನ್ನು ಈ ವರ್ಷದೊಳಗೆ ಸೇರಿಸಿಕೊಳ್ಳಬೇಕು. ಕ್ಷಿಪಣಿ ವ್ಯವಸ್ಥೆಯು ಒಳಬರುವ ಪ್ರತಿಕೂಲ ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಸಹ 400 ಕಿಮೀ ದೂರದಲ್ಲಿ ಮತ್ತು 30 ಕಿಮೀ ಎತ್ತರದಲ್ಲೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
ಭಾರತ ಮತ್ತು ರಷ್ಯಾ ಅಕ್ಟೋಬರ್ 2018 ರಲ್ಲಿ 5.43 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಐದು ಎಸ್ -400 ಕ್ಷಿಪಣಿ ವ್ಯವಸ್ಥೆಗಳ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ.




