ಲಂಡನ್ : ಯುಕೆಯಲ್ಲಿ ಕೊರೊನಾವೈರಸ್ ಸೋಂಕು ಅಧಿಕವಾಗುತ್ತಿದೆ. ಜುಲೈ ಬಳಿಕ ಮೊದಲ ಬಾರಿಗೆ ಯುಕೆಯಲ್ಲಿ ದೈನಂದಿನ ಕೋವಿಡ್ ಪ್ರಕರಣ 50,000 ಕ್ಕೂ ಅಧಿಕ ದಾಖಲಾಗಿದೆ.
ನೂತನ ಅಂಕಿ ಅಂಶಗಳ ಪ್ರಕಾರ ಗುರುವಾರ ಯುಕೆಯಲ್ಲಿ 52,009 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ. ಇದು ಜುಲೈ 17 ರ ಬಳಿಕ ಮೊದಲ ಬಾರಿಗೆ ದಾಖಲಾದ ಅಧಿಕ ಕೋವಿಡ್ ಪ್ರಕರಣವಾಗಿದೆ.
ಈ ನಡುವೆ ಯುಕೆಯಲ್ಲಿ 12 ವರ್ಷ ಪ್ರಾಯದ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇಕಡ 79 ಮಂದಿಗೆ ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ಲಸಿಕೆಯನ್ನು ನೀಡುವುದರಲ್ಲಿ ಆಡಳಿತವು ಸಫಲವಾಗಿದೆ. ಹಾಗೆಯೇ ಯುಕೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯು ಕೂಡಾ ಭಾರೀ ಇಳಿಮುಖವಾಗಿದೆ.
ಈಗ ಮತ್ತೆ ಕೊರೊನಾವೈರಸ್ ಸೋಂಕು ಯುಕೆಯಲ್ಲಿ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಇನ್ನೂ ಕೂಡಾ ಲಸಿಕೆ ಪಡೆಯವರ ಬಳಿ ಲಸಿಕೆ ಪಡೆಯುವಂತೆ ಆಡಳಿತವು ಒತ್ತಾಯಿಸುತ್ತಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ದೈಹಿಕವಾಗಿ ದುರ್ಬಲವಾಗಿರುವವರಿಗೆ ಮುರನೇ ಬೂಸ್ಟರ್ ಲಸಿಕೆ ನೀಡುವ ಪ್ರಸ್ತಾಪವನ್ನು ಮಾಡಲಾಗುತ್ತಿದೆ. ಹಾಗೆಯೇ ಪ್ಲೂ ಲಸಿಕೆಯನ್ನು ಪಡೆಯುವಂತೆಯೂ ತಿಳಿಸಲಾಗುತ್ತಿದೆ.
ಯುಕೆಯಲ್ಲಿ ಕೊರೊನಾ ವೈರಸ್ ಸೋಂಕು ಏರಿಕೆ ಆಗುತ್ತಿರುವ ಬಗ್ಗೆ ಬುಧವಾರ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಒಳಾಂಗಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಕ್ರಮಗಳನ್ನು ಮತ್ತೆ ಜಾರಿಗೆ ತರುವ ಸಮಯ ಇದ್ದಲ್ಲ ಎಂದು ಕೂಡಾ ಇದೇ ಸಂದರ್ಭದಲ್ಲಿ ಸಾಜಿದ್ ಜಾವಿದ್ ಅಭಿಪ್ರಾಯಿಸಿದರು.
"ಯುಕೆಯಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರತಿ ದಿನ ಒಂದು ಲಕ್ಷ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗುವಷ್ಟು ಮಟ್ಟಿಗೆ ಕೋವಿಡ್ ಪರಿಸ್ಥಿತಿ ತಲುಪಬಹುದು. ಈ ಕೊರೊನಾ ಸಾಂಕ್ರಾಮಿಕವು ಇನ್ನೂ ಕೂಡಾ ಅಂತ್ಯವಾಗಿಲ್ಲ," ಎಂದು ತಿಳಿಸಿದ್ದಾರೆ. "ನಾವು ಪ್ರತಿ ದಿನದ ಕೊರೊನಾ ಸೋಂಕು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಆದರೆ ನಾವು ಈ ಸಂದರ್ಭದಲ್ಲಿ ಪ್ಲ್ಯಾನ್ ಬಿ ಯನ್ನು ಜಾರಿ ಮಾಡುವುದಿಲ್ಲ," ಎಂದು ಕೂಡಾ ಹೇಳಿದರು.
ಕಳವಳ ವ್ಯಕ್ತಪಡಿಸಿದ ಪ್ರಧಾನಿ ಬೋರಿಸ್
ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಕೂಡಾ ಯುಕೆಯಲ್ಲಿ ಈ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. "ಈ ಚಳಿಗಾಲದ ಸಂದರ್ಭದಲ್ಲಿ ಕೊರೊನಾ ಸೋಂಕು ಅಧಿಕವಾದರೆ, ಜನರಲ್ಲಿ ಉಸಿರಾಟದ ಸಮಸ್ಯೆ ಕೂಡಾ ಅಧಿಕವಾಗುವ ಸಾಧ್ಯತೆ ಇದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆ ಹೆಚ್ಚಾಗಬಹುದು," ಎಂದು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಕಳವಳ ವ್ಯಕ್ತಪಡಿಸಿದ್ದಾರೆ.
"ನಾವು ಪ್ರತಿ ದಿನ ಕೊರೊನಾ ಪ್ರಕರಣಗಳು ಹೇಗೆ ಏರಿಕೆ ಆಗುತ್ತಿದೆ ಎಂದು ಗಮನಿಸುತ್ತಿದ್ದೇವೆ. ಕೊರೊನಾ ಪ್ರಕರಣಗಳ ಸಂಖ್ಯೆಯು ಅಧಿಕವಾಗಿದೆ. ಆದರೆ ನಾವು ಯಾವು ಊಹೆಯನ್ನು ಮಾಡಿದ್ದೆವು ಅದನ್ನು ದಾಟಿ ಕೊರೊನಾ ಪ್ರಕರಣಗಳು ವರದಿ ಆಗುತ್ತಿಲ್ಲ. ಆದ್ದರಿಂದ ನಾವು ನಮ್ಮ ಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿಲ್ಲ," ಎಂದು ತಿಳಿಸಿದರು.
ಈ ನಡುವೆ ಬ್ರಿಟನ್‌ನಲ್ಲಿ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಇಂಗ್ಲೆಂಡ್‌ನಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಎಡ್ವರ್ಡ್ ಎಗರ್, "ಇಂಗ್ಲೆಂಡ್‌ನಲ್ಲಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಅಧಿಕವಾಗುತ್ತಿದೆ," ಎಂದು ತಿಳಿಸಿದ್ದಾರೆ. ಮಕ್ಕಳಲ್ಲಿ ಶೇ.4.58ರಷ್ಟು ಸೋಂಕು ಹರಡುವಿಕೆ ಕಂಡುಬಂದಿದೆ. ಅಂದರೆ 25 ರಲ್ಲಿ 1 ಕ್ಕಿಂತ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯು ಹೇಳಿದೆ.

