ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಜೊತೆಗೆ ಹಲವೆಡೆ ಸಂಭವಿಸಿದ ಭೂಕುಸಿತದಲ್ಲಿ ಈವರೆಗೂ 6 ಮಂದಿ ಪ್ರಾಣ ಬಿಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ನಾಲ್ವರು ಹಾಗೂ ಇಡುಕ್ಕಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಹಲವೆಡೆ ಭೂಕುಸಿತ ಸಂಭವಿಸಿದೆ. ಕೊಟ್ಟಾಯಂ ಜಿಲ್ಲೆಯ ಕುಟ್ಟಿಕ್ಕಲ್ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದ ಮೂರು ಸೇತುವೆಗಳಿಗೆ ಹಾನಿಯಾಗಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಭೂಕುಸಿತದಿಂದ 12 ಜನರು ನಾಪತ್ತೆಯಾಗಿದ್ದರೆ, ಇಡುಕ್ಕಿ ಜಿಲ್ಲೆಯಲ್ಲಿ 6 ಮಂದಿ ಕಣ್ಮರೆಯಾಗಿದ್ದಾರೆ.
ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಾಗೂ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲಿ ವರುಣನ ಕೋಪಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಹುಪಾಲು ಪ್ರದೇಶಗಳು, ರಸ್ತೆಗಳು ಜಲಾವೃತಗೊಂಡಿವೆ. ದಕ್ಷಿಣ ಕೇರಳ ಪ್ರದೇಶದಲ್ಲಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ.
ಕೊಟ್ಟಾಯಂ ಜಿಲ್ಲೆಯಲ್ಲಿ ಪರಿಸ್ಥಿತಿ ವಿಕೋಪ:
ಕೇರಳದಲ್ಲಿ ರೆಡ್ ಅಲರ್ಟ್ ಘೋಷಿಸಿದ ಐದು ಜಿಲ್ಲೆಗಳ ಪೈಕಿ ಕೊಟ್ಟಾಯಂ ಕೂಡಾ ಒಂದಾಗಿದೆ. ಕೊಟ್ಟಾಯಂ ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆ ಎಚ್ಚರಿಕೆಯನ್ನು ನೀಡಿದ್ದು, ಮೊಣಕಾಲುದ್ದ ನಿಂತ ನೀರಿನಲ್ಲಿ ಚಲಿಸಲು ಸಾಧ್ಯವಾಗದೇ ಸ್ಥಳೀಯರು ಕಾರನ್ನು ತಳ್ಳಿಕೊಂಡು ಹೋಗುತ್ತಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇನ್ನೊಂದು ವಿಡಿಯೋದಲ್ಲಿ ಭಾರೀ ಮಳೆಯ ನಡುವೆ ಹಗ್ಗದಿಂದ ವಾಹನವನ್ನು ಹೊರತೆಗೆಯಲು ಪುರುಷರು ಪ್ರಯತ್ನಿಸುತ್ತಿರುವುದು ಗೊತ್ತಾಗಿದೆ.
ಕೇರಳ ಪ್ರವಾಹ ಪರಿಸ್ಥಿತಿ ಕುರಿತು ಪ್ರಮುಖ ಅಂಶಗಳು:
* ಕೇರಳದಲ್ಲಿ ಧಾರಾಕಾರ ಮಳೆಯಿಂದಾಗಿ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ಎರಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
* ಪಥನಂಥಿಟ್ಟಾ, ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ಥ್ರಿಸುರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
* ತಿರುವನಂತಪುರಂ, ಕೊಲ್ಲಂ, ಅಲಪ್ಪುಜಾ, ಪಲಕ್ಕದ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉಳಿದಂತೆ ಎರಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
* ಕೇರಳ ಸರ್ಕಾರದ ಮನವಿ ಮೇರೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸೇನೆ ಹಾಗೂ ವಾಯುಪಡೆಯು ರಕ್ಷಣಾ ಕಾರ್ಯಾಚರಣೆಗಾಗಿ ತೆರಳಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ಸನ್ನದ್ಧಗೊಂಡಿದ್ದು, ದಕ್ಷಿಣ ಏರ್ ಕಮಾಂಡ್ ಅಡಿಯಲ್ಲಿರುವ ಎಲ್ಲಾ ನೆಲೆಗಳು ಹೆಚ್ಚಿನ ಎಚ್ಚರಿಕೆ ವಹಿಸಲಾಗಿವೆ.
* ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇನೆಯು ತನ್ನ ಸಿಬ್ಬಂದಿಯನ್ನು ನಿಯೋಜಿಸಿದೆ. ಪಾಂಗೋಡ್ ಮಿಲಿಟರಿ ನಿಲ್ದಾಣದಿಂದ ಕಂಜೀರಪಲ್ಲಿನ್ ಕೊಟ್ಟಾಯಂ ಜಿಲ್ಲೆಗೆ ಸೇನೆಯ 30 ಸಿಬ್ಬಂದಿ ಪಡೆಯನ್ನು ಸ್ಥಳಾಂತರಿಸಲಾಗಿದೆ.
* ಕೇರಳದಲ್ಲಿ ಧಾರಾಕಾರ ಮಳೆಯಿಂದ ಬಹುಪಾಲು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಸಾರ್ವಜನಿಕರು ಜಾಗರೂಕತೆಯಿಂದಿರಬೇಕು. ಪರ್ವತ ಮತ್ತು ನದಿ ಹಾಗೂ ಸಮುದ್ರದ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳದಂತೆ ಮುಖ್ಯಮಂತ್ರಿ ಕಚೇರಿಯಿಂದ ಸಂದೇಶ ರವಾನಿಸಲಾಗಿದೆ.
*ಕೇರಳದ ಕರಾವಳಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಮೀಗೆ ತಲುಪುವ ಸಾಧ್ಯತೆಯಿದ್ದು, ಇಂದು ಮತ್ತು ನಾಳೆ ಮೀನುಗಾರರು ಈ ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.
* ಕೇರಳ ಕರಾವಳಿಯಲ್ಲಿ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಅಕ್ಟೋಬರ್ 17 (ಭಾನುವಾರ) ಮುಂಜಾನೆಯವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಕ್ಟೋಬರ್ 18ರ ಸೋಮವಾರ ಮಳೆಯಾಗುವ ಸಾಧ್ಯತೆಯಿದ್ದು, ಮಂಗಳವಾರ ಬೆಳಗ್ಗೆಯಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದೆ," ಎಂದು ಹವಾಮಾನ ಇಲಾಖೆ ತಿಳಿಸಿದೆ.





