HEALTH TIPS

ಒಬಿಸಿ, ಇಡಬ್ಲ್ಯುಎಸ್‌ ಕೋಟಾ ನಿರ್ಧಾರ ಆಗುವವರೆಗೆ ನೀಟ್ ಪಿಜಿ ಕೌನ್ಸೆಲಿಂಗ್ ಇಲ್ಲ

            ನವದೆಹಲಿಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ಇತರ ಹಿಂದುಳಿದ ವರ್ಗ (ಒಬಿಸಿ) ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್‌) ನಿಗದಿಪಡಿಸಲಾದ ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥಿಪಡಿಸುವವರೆಗೆ ಈ ಸಾಲಿನ ಶೈಕ್ಷಣಿಕ ವರ್ಷದ ನೀಟ್‌ ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

            ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಅವರು ನೀಡಿದ ಈ ಭರವಸೆಯನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ದಾಖಲಿಸಿಕೊಂಡಿತು. ಈಗಾಗಲೇ ಘೋಷಿಸಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಿದರೆ ವಿದ್ಯಾರ್ಥಿಗಳು ಗಂಭೀರ ಸಮಸ್ಯೆಗೆ ಸಿಲುಕುತ್ತಾರೆ ಎಂದು ಪೀಠ ಎಚ್ಚರಿಕೆ ನೀಡಿತು.

             ನೀಟ್‌ ವಿದ್ಯಾರ್ಥಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ಅರವಿಂದ ದಾತಾರ್‌, ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಈಗಾಗಲೇ ಘೋಷಿಸಿರುವಂತೆ ಅಕ್ಟೋಬರ್‌ 25ರಿಂದಲೇ ಕೌನ್ಸಲಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ ಎಂದರು. ಆಗ ಕೇಂದ್ರ ಸರ್ಕಾರದಿಂದ ಈ ಭರವಸೆ ವ್ಯಕ್ತವಾಯಿತು.

             ಇದೇ ಜುಲೈ 29ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಅಖಿಲ ಭಾರತ ನೀಟ್ ಯುಜಿಯ ಶೇ 15ರಷ್ಟು ಸೀಟುಗಳಲ್ಲಿ ಹಾಗೂ ನೀಟ್‌ ಪಿಜಿಯ ಶೇ 50ರಷ್ಟು ಸೀಟುಗಳಲ್ಲಿ ಒಬಿಸಿಗೆ ಶೇ 27ರಷ್ಟು ಮತ್ತು ಇಡಬ್ಲ್ಯುಎಸ್‌ಗೆ ಶೇ 10ರಷ್ಟು ಮೀಸಲಾತಿ ಪ್ರಕಟಿಸಲಾಗಿತ್ತು. ಇಡಬ್ಲ್ಯುಎಸ್‌ಗೆ ನೀಡಲಾದ ವಾರ್ಷಿಕ ವರಮಾನ ಮಿತಿ  8 ಲಕ್ಷ, ಅವರಿಗೆ ಮೀಸಲಾತಿ ಸೌಲಭ್ಯ ಸಿಗುತ್ತದೆ, ಆದರೆ ಒಬಿಸಿಯಲ್ಲಿ ₹8 ಲಕ್ಷ ಆದಾಯವನ್ನು ಕೆನೆಪದರ ಎಂದು ಗುರುತಿಸಿ ಮೀಸಲಾತಿ ಸೌಲಭ್ಯದಿಂದ ಹೊರಗಿಡಲಾಗಿದೆ. ಇದುವೇ ವಿವಾದದ ಮೂಲವಾಗಿದೆ.

               ಇದನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಇದೀಗ ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ತೀರ್ಪು ಕೊಡುವ ತನಕ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆ ಬಿದ್ದಿದೆ.

          ಈ ವಿಚಾರದಲ್ಲಿ ಇದೇ 21ರಂದು ಕೇಂದ್ರವನ್ನು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್‌, ಇಡಬ್ಲ್ಯುಎಸ್‌ ವರ್ಗಕ್ಕೆ ನಿಗದಿಪಡಿಸಿದ 8 ಲಕ್ಷ ಆದಾಯ ಮಿತಿಯನ್ನು ಬದಲಿಸುವ ವಿಚಾರ ಇದೆಯೇ ಎಂದು ಕೇಳಿತ್ತು. ಯಾವ ಮಾನದಂಡ ಇಟ್ಟುಕೊಂಡು ಈ ಆದಾಯ ಮಿತಿ ನಿಗದಿಪಡಿಸಲಾಗಿದೆ ಎಂದೂ ಪ್ರಶ್ನಿಸಿತ್ತು.‌



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries