ಕೊಚ್ಚಿ: ದಕ್ಷಿಣ ಕೊರಿಯಾದ ಈರುಳ್ಳಿ ತೋಟದಲ್ಲಿ ಕೆಲಸ ಮಾಡಲು ಸಾವಿರಾರು ಮಲಯಾಳಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಿಗಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಎರ್ನಾಕುಳಂ ಟೌನ್ ಹಾಲ್‍ನಲ್ಲಿ ರಾಜ್ಯ ಸರ್ಕಾರದ ವಿದೇಶಿ ನೇಮಕಾತಿ ಸಂಸ್ಥೆಯಾದ ಒಡೆಪೆಕ್ ಆಯೋಜಿಸಿದ್ದ ಸೆಮಿನಾರ್‍ನಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ವಿದ್ಯಾವಂತ ಯುವಕರು. ಅವರಲ್ಲಿ ಹೆಚ್ಚಿನವರೂ ಕೃಷಿ ಬಗ್ಗೆ ತಿಳಿಯದವರು ಎನ್ನಲಾಗಿದೆ.
ಜನದಟ್ಟಣೆಯಿಂದಾಗಿ ಒಡೆಪೆಕ್ ವೆಬ್‍ಸೈಟ್ ಸಹ ಸ್ಥಗಿತಗೊಂಡಿದೆ. ಮೊದಲ ಎರಡು ದಿನಗಳಲ್ಲಿ 100 ಹುದ್ದೆಗಳಿಗೆ ಸುಮಾರು 5,000 ಮಂದಿ ಅರ್ಜಿ ಸಲ್ಲಿಸಿದ್ದರು. ಈ ತಿಂಗಳ 22ರಂದು ಅರ್ಜಿ ಆಹ್ವಾನಿಸಲಾಗಿತ್ತು. ಉದ್ಯೋಗಕ್ಕೆ ವಿದ್ಯಾರ್ಹತೆ 10ನೇ ತರಗತಿ. 1 ಲಕ್ಷ ರೂ. ವೇತನ ನೀಡಲಾಗುವುದೆಂದು ಹೇಳಲಾಗಿದೆ.
ದಕ್ಷಿಣ ಕೊರಿಯಾ ಸರ್ಕಾರದ ಅಡಿಯಲ್ಲಿ ಕೃಷಿ ಯೋಜನೆಗೆ ಕೇರಳದಿಂದ ಜನರನ್ನು ನೇಮಿಸಿಕೊಳ್ಳಲಾಗುತ್ತಿದೆ. ನೇಮಕಾತಿ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಇರಲಿದೆ. ಇದನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ತಿಂಗಳಿಗೆ 28 ದಿನ ಕೆಲಸ ಇರುತ್ತದೆ. ಸಮಯ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ. ಕೆಲಸದ ಸಮಯದಲ್ಲಿ ಊಟವನ್ನು ಉಚಿತವಾಗಿ ನೀಡಲಾಗುತ್ತದೆ.
ಇಂಗ್ಲಿಷ್ ಕನಿಷ್ಠ ಜ್ಞಾನವನ್ನು ಹೊಂದಿರಬೇಕು. ತಂತ್ರಜ್ಞಾನ ಆಧಾರಿತ ಬೇಸಾಯ ಪದ್ಧತಿ ಜಾರಿಯಲ್ಲಿದ್ದರೂ ಮಾನವ ಶ್ರಮವೂ ಬೇಕಾಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರನ್ನು ನಿರೀಕ್ಷಿಸಲಾಗಿದೆ. ಮೊದಲ ಹಂತದಲ್ಲಿ ನೂರು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. 60ರಷ್ಟು ಮಹಿಳೆಯರಿರಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ.




