HEALTH TIPS

ನವೆಂಬರ್‌ನಿಂದ ಕರಾವಳಿಯಲ್ಲಿ ಕಂಬಳ ಕಲರವ

                      ಮಂಗಳೂರು: ಕರಾವಳಿ ಅಪ್ಪಟ ಜನಪದ ಆಟವಾದ ಕೆಸರು ಗದ್ದೆಯ ಕಂಬಳ ಕೂಟಕ್ಕೆ ದಿನಗಣನೆ ಶುರುವಾಗಿದೆ. ಕಂಬಳದ ಕೂಟಕ್ಕೆ ದಿನ ನಿಗದಿ ಆಗುತ್ತಿದ್ದಂತೆ, ಇತ್ತ ಮಣ್ಣಿನ ಮಕ್ಕಳು ಭರ್ಜರಿ ತಾಲೀಮು ಆರಂಭಿಸಿದ್ದಾರೆ. ಕೆಸರು ಗದ್ದೆಯಲ್ಲಿ ಸಂಭ್ರಮಿಸಿ, ಕೋಣಗಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದಾರೆ.

                   ಅಪ್ಪಟ ಜನಪದ ಆಟ, ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಬಿರುಸಿನ ಓಟ. ಇದು ಕರಾವಳಿಗರ ಹೆಮ್ಮ ಕಂಬಳ ಕೂಟ. ಕರಾವಳಿಯಲ್ಲಿ ಯಾವ ಕ್ರೀಡೆಗೂ ಇರದ ಕ್ರೇಜ್ ಕಂಬಳಕ್ಕಿದೆ. ಕಂಬಳ ಅಂದರೆ ಸರ್ವಧರ್ಮದವರು ಸೇರಿ, ಬಡವ ಶ್ರೀಮಂತ ಎನ್ನದೇ ಸಂಭ್ರಮಿಸುವ ಜನಪದ ಆಟ.

                                               ಕಂಬಳ ಕ್ರೀಡೆಯಲ್ಲಿ ಹೊಸ ಇತಿಹಾಸ; ಈ ವರ್ಷವೇ ಕೋಣ ಓಡಿಸಲಿದ್ದಾರೆ ಯುವತಿಯರು!

               ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಲ್ಲಿ ನಡೆಯುವ ಸಾಂಪ್ರದಾಯಿಕ ಹಾಗೂ ಆಧುನಿಕ ಕಂಬಳಗಳು ನವೆಂಬರ್ ತಿಂಗಳಿನಿಂದ ಆರಂಭವಾಗಲಿದೆ. ಆದರೆ ಕಂಬಳದ ಓಟದ ಕೋಣಗಳನ್ನು ನೇರವಾಗಿ ಕಂಬಳ ಗದ್ದೆಗೆ ಇಳಿಸುವ ಬದಲಾಗಿ, ಕಂಬಳ ಸೀಜನ್ ಶುರುವಾಗುವ ತಿಂಗಳುಗಳ ಮೊದಲು ಮನೆಯ ಗದ್ದೆಗಳಲ್ಲಿ ಅಥವಾ ಕಂಬಳ ನಡೆಯುವ ಕರೆಗಳಲ್ಲಿ ತರಬೇತಿ ನೀಡಲಾಗುತ್ತದೆ.

                                           ಕಂಬಳ ವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ದಾಖಲೆ ಸೃಷ್ಟಿ

             ಇದನ್ನು 'ಕುದಿ ಕಂಬಳ' ಅಂತಾ ಕರೆಯುತ್ತಾರೆ. ಕುದಿ ಕಂಬಳದಲ್ಲಿ ಕೋಣಗಳನ್ನು ಓಡಿಸಿ ತಯಾರು ಮಾಡುತ್ತಾರೆ. ಅದರಂತೆ ಉಡುಪಿ ಜಿಲ್ಲೆಯ ಬೈಂದೂರಿನ ಬೋಳಂಬಳ್ಳಿಯಲ್ಲಿ ಕೋಣಗಳ ಯಜಮಾನ, ಪರಮೇಶ್ವರ ಭಟ್ ಈಗಾಗಲೇ ಮುಂದಿನ ತಿಂಗಳ ಕಂಬಳಕ್ಕಾಗಿ ತಮ್ಮ ಕೋಣಗಳ ಕುದಿ ಕಂಬಳದಲ್ಲಿ ಸಜ್ಜು ಮಾಡುತ್ತಿದ್ದಾರೆ. ಕಳೆದ ಬಾರಿಯ ಕಂಬಳಕೂಟದಲ್ಲಿ ಕಂಬಳ ಗದ್ದೆಗೆ ಇಳಿದು ಗಮನ ಸೆಳೆದಿದ್ದ ಕಂಬಳ ಕೋಣಗಳ ಕಿರಿಯ ಯಜಮಾನಿ ಚೈತ್ರಾ ಪರಮೇಶ್ವರ ಭಟ್ ಕುದಿ ಕಂಬಳದಲ್ಲಿ ಭಾಗವಹಿಸಿದ್ದಾರೆ.

                                              ಪುರುಷ ಪ್ರಧಾನ ಕಂಬಳ ಗದ್ದೆಯಲ್ಲಿ 11ರ ಬಾಲಕಿಯ ಕಲರವ!

                 ಕಂಬಳ ಓಟಗಾರರು ಕೂಡ, ಕಂಬಳ ಕೂಟದ ಓಟಕ್ಕೂ ಮೊದಲು ಕುದಿ ಕಂಬಳದ ಅಭ್ಯಾಸದಲ್ಲಿ ತೊಡಗಿಸಿಕೊಂಡು, ಮುಂದಿನ ಕಂಬಳದ ಓಟ ಸ್ಪರ್ಧೆಗೆ ಸಜ್ಜಾಗುತ್ತಾರೆ. ಮಕ್ಕಳು, ಹಿರಿಯರು ಕೆಸರು ಗದ್ದೆಯಲ್ಲಿ ಕೋಣದ ಓಟ ನೋಡಿ ಸಂಭ್ರಮಿಸುತ್ತಾರೆ.

                 ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನಲ್ಲಿ ನಡೆಯುವ ಕಂಬಳ ದಿನಾಂಕ ಕೂಡಾ ನಿಗದಿಯಾಗಿದೆ. ನವೆಂಬರ್ 27 ರಂದು ಮೂಡಬಿದಿರೆಯಲ್ಲಿ ಈ ವರ್ಷದ ಮೊದಲ ಕಂಬಳ ನಡೆಯಲಿದೆ. ನವೆಂಬರ್‍ನಿಂದ ಮಾರ್ಚ್ ತನಕ ಒಟ್ಟು17 ಕಂಬಳಗಳು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿದೆ.

            ಮೊದಲ ಕಂಬಳ ನವೆಂಬರ್27 ರಂದು ಮೂಡಬಿದಿರೆಯಲ್ಲಿ ನಡೆದರೆ, ಡಿಸೆಂಬರ್ 11ರಂದು ಹೊಕ್ಕಾಡಿಗೋಳಿ, ಡಿಸೆಂಬರ್18ರಂದು ಮಂಗಳೂರು, ಡಿಸೆಂಬರ್ 26ರಂದು ಮುಲ್ಕಿ, ಜನವರಿ 1ರಂದು ಕಕ್ಕೆ ಪದವು, ಜನವರಿ 8ರಂದು ಅಡ್ವೆ ನಂದಿಕೂರು, ಜನವರಿ 16ರಂದು ಕಾರ್ಕಳದ ನಂದಿಕೂರು ಕಂಬಳ ನಡೆಯಲಿದೆ.

                 ಜನವರಿ 22ರಂದು ಪುತ್ತೂರು, ಜನವರಿ 29ರಂದು ಐಕಳ, ಫೆಬ್ರವರಿ 5ರಂದು ಬಾರಾಡಿ ಬೀಡು ಕಂಬಳ, ಫೆಬ್ರವರಿ 12ರಂದು ಜೆಪ್ಪು, ಫೆಬ್ರವರಿ 19ರಂದು ವಾಮಂಜೂರು, ಫೆಬ್ರವರಿ 26ರಂದು ಕಾಸರಗೋಡುವಿನ ಪೈವಳಿಕೆ, ಮಾರ್ಚ್ 5ರಂದು ಕಟಪಾಡಿಯಲ್ಲಿ ಕಂಬಳ ನಡೆಯಲಿದೆ.

              ಮಾರ್ಚ್12ರಂದು ಉಪ್ಪಿನಂಗಡಿ, ಮಾರ್ಚ್ 19ರಂದು ಬಂಗಾಡಿ ಮತ್ತು 2021-2022ರ ಕೊನೆಯ ಕಂಬಳ ಮಾರ್ಚ್ 26ರಂದು ಬೆಳ್ತಂಗಡಿ ತಾಲೂಕಿನ ವೇಣೂರುನಲ್ಲಿ ಕಂಬಳ ನಡೆಯಲಿದೆ. ಈಗಾಗಲೇ ಕಂಬಳದ ತಯಾರಿಗಳು ನಡೆಯುತ್ತಿವೆ.

               ಒಟ್ಟಿನಲ್ಲಿ ಕೊರೊನಾದ ಕಾರಣದಿಂದ ಈ ಬಾರಿಯೂ, ಕಳೆದ ಸೀಜನ್‍ನಂತೆ ಕಂಬಳ ಕೂಟ ತಡವಾಗುತ್ತೋ ಏನೋ ಎನ್ನುವ ಆತಂಕ ಕಂಬಳ ಪ್ರಿಯರಲ್ಲಿ ಇತ್ತು. ಆದರೆ ಮುಂದಿನ ತಿಂಗಳು ಆಧುನಿಕ ಕಂಬಳಕ್ಕೆ ದಿನ ನಿಗದಿ ಆಗಿದೆ. ಹೀಗಾಗಿ ಕಂಬಳ ಪ್ರಿಯರು ಕಂಬಳ ಕಲವರಕ್ಕಾಗಿ ಕಾದು ಕುಳಿತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries