HEALTH TIPS

ಭಾರತೀಯ ಬಾಹ್ಯಾಕಾಶ ಸಂಘ ಉದ್ಘಾಟಿಸಿದ ಪ್ರಧಾನಿ ಮೋದಿ

               ನವದೆಹಲಿ: ದೇಶದ ಬಾಹ್ಯಾಕಾಶ ಕ್ಷೇತ್ರದ ಧ್ವನಿಯಾಗುವ ಉದ್ದೇಶದೊಂದಿಗೆ ರಚನೆಯಾಗಿರುವ ಭಾರತೀಯ ಬಾಹ್ಯಾಕಾಶ ಸಂಘವನ್ನು (ಇಂಡಿಯನ್ ಸ್ಪೇಸ್ ಅಸೋಷಿಯೇಷನ್‌ -ಐಎಸ್‌ಪಿಎ) ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಉದ್ಘಾಟಿಸಿದರು.

                 ನಂತರ ಮಾತನಾಡಿದ ಅವರು, 'ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಾಗಿ ಸಂಘ ಬದ್ಧತೆ ಪ್ರದರ್ಶಿಸುವುದನ್ನು ಒತ್ತಿ ಹೇಳಿದ್ದಲ್ಲದೇ, ಇಂಥ ದೃಢ ನಿರ್ಧಾರಗಳನ್ನು ಕೈಗೊಳ್ಳುವಂತಹ ಸರ್ಕಾರವನ್ನು ದೇಶ ಹಿಂದೆಂದೂ ಕಂಡಿರಲಿಲ್ಲ' ಎಂದು ಪ್ರತಿಪಾದಿಸಿದರು.

                              ನಷ್ಟದಲ್ಲಿದ್ದ ಸಾರ್ವಜನಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವಲ್ಲಿನ ಸರ್ಕಾರದ ಯಶಸ್ಸನ್ನು ಉಲ್ಲೇಖಿಸಿದ ಅವರು, ಇದು ನಮ್ಮ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ' ಎಂದು ಪ್ರತಿಪಾದಿಸಿದರು.

           'ಅಗತ್ಯವಿಲ್ಲ ಎನಿಸಿದ ಕ್ಷೇತ್ರಗಳನ್ನು ಖಾಸಗಿ ಉದ್ಯಮಿಗಳಿಗೆ ತೆರೆದಿಡಬೇಕು' ಎನ್ನುವುದು ಸಾರ್ವಜನಿಕ ವಲಯದ ಬಗ್ಗೆ ಸರ್ಕಾರದ ನೀತಿಯಾಗಿದೆ ಎಂದು ಹೇಳಿದರು.

           ದೇಶದಲ್ಲಿನ ಬಾಹ್ಯಾಕಾಶ ಕ್ಷೇತ್ರದಿಂದ ರಕ್ಷಣಾ ಕ್ಷೇತ್ರವರೆಗಿನ ಹಲವು ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, 'ನಮ್ಮ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿ ಹಾಗೂ ವಿವಿಧ ಪಾಲುದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ' ಎಂದು ಪ್ರತಿಪಾದಿಸಿದರು.

                                                                                                                                                                ಭಾರತ ಬೃಹತ್ ಸುಧಾರಣೆಯತ್ತ ಗಮನಹರಿಸಿದೆ. ಏಕೆಂದರೆ, 'ಆತ್ಮನಿರ್ಭರ ಭಾರತ ನಿರ್ಮಾಣ'ದ ಗುರಿ ಹೊಂದಿರುವ ರಾಷ್ಟ್ರದ ದೂರದೃಷ್ಟಿ ಸ್ಪಷ್ಟವಾಗಿದೆ ಎಂದು ಮೋದಿ ಹೇಳಿದರು.

'ಕೇಂದ್ರ ಸರ್ಕಾರ ಒಬ್ಬ ಪಾಲುದಾರನಾಗಿ, ಕೈಗಾರಿಕೋದ್ಯಮಕ್ಕೆ, ಯುವ ಸಂಶೋಧಕರಿಗೆ, ಸ್ಟಾರ್ಟ್‌ಅಪ್‌ ಸ್ಥಾಪಿಸುವವರಿಗೆ ನೆರವು ನೀಡುತ್ತಿದ್ದು, ಅದನ್ನು ಮುಂದುವರಿಸಲಿದೆ' ಎಂದೂ ಹೇಳಿದರು.

           'ನಮ್ಮ ಸರ್ಕಾರ ನಾಲ್ಕು ಸ್ತಂಭಗಳ ಆಧಾರದ ಮೇಲೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಂದಾಗಿದೆ. ಅದರಲ್ಲಿ ಹೊಸ ಹೊಸ ಸಂಶೋಧನೆಗಳನ್ನು ನಡೆಸಲು ಖಾಸಗಿ ವಲಯಕ್ಕೆ ಸ್ವಾತಂತ್ರ್ಯ ನೀಡುವುದು, ಸರ್ಕಾರ ಸಕ್ರಿಯವಾಗಿ ಪ್ರಮುಖ ಪಾತ್ರ ವಹಿಸುವುದು, ಭವಿಷ್ಯಕ್ಕಾಗಿ ಯುವ ಸಮೂಹವನ್ನು ಸಜ್ಜುಗೊಳಿಸುವುದು ಮತ್ತು ಬಾಹ್ಯಾಕಾಶ ವಲಯವನ್ನು ಸಾಮಾನ್ಯ ಜನರ ಅಭಿವೃದ್ಧಿಗೆ ನೆರವು ನೀಡುವ ಸಂಪನ್ಮೂಲವಾಗಿ ಕಲ್ಪಿಸುವುದು ಸೇರಿದೆ' ಎಂದು ಪ್ರಧಾನಿ ವಿವರಿಸಿದರು.

            ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆ: ದೋವಲ್‌ ದೇಶದ ಭೌಗೋಳಿಕ ಪ್ರದೇಶದ ಮೇಲೆ ನಿಗಾ ಇಡುವ ಸಾಮರ್ಥ (ಜಿಯೊಗ್ರಫೈಸ್‌ ಟ್ರ್ಯಾಕಿಂಗ್‌), ಬಾಹ್ಯಾಕಾಶ ಆಸ್ತಿಗಳನ್ನು ರಕ್ಷಿಸಿಕೊಳ್ಳುವ ಹಾಗೂ ವಾಣಿಜ್ಯಿಕವಾಗಿ ಲಭ್ಯವಿರುವ ದೇಶೀಯ ಉಪಗ್ರಹ ಆಧಾರಿತ ಸಂವಹನ ಪರಿಹಾರಗಳ ಸಾಮರ್ಥ್ಯವನ್ನು ವೃದ್ಧಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಭಿಪ್ರಾಯಪಟ್ಟರು.

           'ಭಾರತೀಯ ಬಾಹ್ಯಾಕಾಶ ಸಂಘ' ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರ್ತಿ ಏರ್‌ಟೆಲ್‌, ಲಾರ್ಸನ್‌ ಅಂಡ್ ಟರ್ಬೊ, ಅಗ್ನಿಕುಲ್‌, ದ್ರುವಾ ಸ್ಪೇಸ್‌ ಅಂಡ್ ಕ್ವಾ ಸ್ಪೇಸ್‌ನಂತಹ ಭಾರತೀಯ ಬಾಹ್ಯಾಕಾಶ ಉದ್ಯಮದಲ್ಲಿ ತೊಡಗಿರುವ ಕಂಪನಿಗಳು ಸೇರಿ 'ಭಾರತೀಯ ಬಾಹ್ಯಾಕಾಶ ಸಂಘ'ವನ್ನು (ಇಂಡಿಯನ್ ಸ್ಪೇಸ್ ಅಸೋಸಿಯೇಷನ್‌) ರಚಿಸಿಕೊಂಡಿವೆ.

           'ಆರ್ಥಿಕ ವೃದ್ಧಿ ಮತ್ತು ತಂತ್ರಜ್ಞಾನ ಅಭಿವೃದ್ಧಿ ಎರಡೂ ರಾಷ್ಟ್ರ ಶಕ್ತಿಯ ಪ್ರಮುಖ ಅಂಶಗಳು. ಇಂಥ ಕಾಲಘಟ್ಟದಲ್ಲಿ ಸರ್ಕಾರ ದೀರ್ಘ ಕಾಲ ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿಗಾಗಿ ನೀತಿಗಳನ್ನು ರೂಪಿಸುವುದಕ್ಕಷ್ಟೇ ಪಾಲುದಾರ ರಾಗಿರಲು ಸಾಧ್ಯವಿಲ್ಲ' ಎಂದು ಹೇಳಿದರು. ಇದೇ ವೇಳೆ 'ರಾಷ್ಟ್ರ ನಿರ್ಮಾಣದಲ್ಲಿ ಸರ್ಕಾರಿ ಕ್ಷೇತ್ರದಷ್ಟೇ ಖಾಸಗಿ ವಲಯವೂ ಸಮಾನ ಪಾಲುದಾರ' ಎಂದು ಅಭಿಪ್ರಾಯಪಟ್ಟರು.

             'ಇಲ್ಲಿಯವರೆಗೆ, ಬಾಹ್ಯಾಕಾಶದಂತಹ ವಿಶೇಷವಾದ ಕ್ಷೇತ್ರಗಳಲ್ಲಿ ಸಾರ್ವಜನಿಕ ವಲಯದ ಪ್ರಾಬಲ್ಯ ಮಾತ್ರ ಇತ್ತು. ಇನ್ನು ಮುಂದೆ ಆ ಕ್ಷೇತ್ರವನ್ನು ನಾವು ಖಾಸಗಿ ವಲಯಕ್ಕೂ ತೆರೆದಿಡಬೇಕಿದೆ' ಎಂದು ದೋವಲ್ ಪ್ರತಿಪಾದಿಸಿದರು.

          'ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದವರು ಹೂಡಿಕೆ ಮಾಡುವುದರಿಂದ, ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ, ತಂತ್ರಜ್ಞಾನದ ಒಳಗೊಳ್ಳುವಿಕೆಯನ್ನು ಸುಲಭಗೊಳಿಸುತ್ತದೆ. ಅಷ್ಟೇ ಅಲ್ಲ, ಜಂಟಿ ಉದ್ಯಮಗಳ ಮೂಲಕ ವಿದೇಶಿ ಪಾಲುದಾರಿಕೆಯನ್ನು ಒಳಗೊಳ್ಳುತ್ತದೆ' ಎಂದು ಅವರು ವಿವರಿಸಿದರು.

            ಈ ಎಲ್ಲ ಕ್ರಮಗಳು ಭಾರತವನ್ನು 'ಬಾಹ್ಯಾಕಾಶ ಆಸ್ತಿಗಳ ಉತ್ಪಾದನಾ ಕೇಂದ್ರ'ವನ್ನಾಗಿಸುತ್ತದೆ' ಎಂದ ಅವರು, ಶಕ್ತಿಶಾಲಿಯಾದ ಖಾಸಗಿ ಉದ್ಯಮ ಕ್ಷೇತ್ರಗಳೂ ದೇಶದ ಭದ್ರತೆಯಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries