ಕಾಸರಗೋಡು: ಕೇರಳಾದ್ಯಂತ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರಿಕರಿಗೆ ಕಟ್ಟು ನಿಟ್ಟಿನ ನಿಯಂತ್ರಣ ಹೇರಲಾಗಿದೆ. ಮಂಡಲಪೂಜೆಗಾಗಿ ನ. 15ರಂದು ಶಬರಿಮಲೆ ಗರ್ಭಗುಡಿ ಬಾಗಿಲು ತೆರೆದುಕೊಳ್ಳುವ ಹಿನ್ನೆಲೆಯಲ್ಲಿ ಈ ನಿಯಂತ್ರಣ ಏರ್ಪಡಿಸಲಾಗಿದೆ. ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಪಾ ನದಿಯಲ್ಲಿ ಹಾಗೂ ಇತರ ಸ್ನಾನಘಟ್ಟಗಳಲ್ಲಿ ಭಕ್ತಾದಿಗಳು ಸ್ನಾನ ಮಾಡದಂತೆ ನಿಯಂತ್ರಣ ಹೇರಲಾಗಿದೆ. ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ನಡೆಸಿದವರಿಗೆ, ದಿನ ಬದಲಾಯಿಸಿ ನೀಡುವ ಬಗ್ಗೆಯೂ ದೇವಸ್ವಂ ಬೋರ್ಡ್ ಚಿಂತನೆ ನಡೆಸುತ್ತಿದೆ. ಎರ್ನಾಕುಳಂ, ಇಡುಕ್ಕಿ, ತೃಶ್ಯೂರ್ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.




