ನವದೆಹಲಿ: ಜಾಮೀನಿಗೆ ಸಂಬಂಧಪಟ್ಟ ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತಲುಪಿಸುವಲ್ಲಿನ ವಿಳಂಬ ನ್ಯಾಯ ವ್ಯವಸ್ಥೆಯಲ್ಲಿನ 'ಗಂಭೀರ ನ್ಯೂನತೆ' ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
0
samarasasudhi
ನವೆಂಬರ್ 04, 2021
ನವದೆಹಲಿ: ಜಾಮೀನಿಗೆ ಸಂಬಂಧಪಟ್ಟ ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತಲುಪಿಸುವಲ್ಲಿನ ವಿಳಂಬ ನ್ಯಾಯ ವ್ಯವಸ್ಥೆಯಲ್ಲಿನ 'ಗಂಭೀರ ನ್ಯೂನತೆ' ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
'ಜಾಮೀನು ಆದೇಶಗಳು ಜೈಲು ಅಧಿಕಾರಿಗಳಿಗೆ ತಲುಪುವಲ್ಲಾಗುವ ವಿಳಂಬ, ಪ್ರತಿಯೊಬ್ಬ ವಿಚಾರಣಾಧೀನ ಕೈದಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ.
ಅಲಹಾಬಾದ್ ಹೈಕೋರ್ಟ್ ಆಯೋಜಿಸಿದ್ದ 'ವರ್ಚುವಲ್ ಕೋರ್ಟ್'ಗಳು ಹಾಗೂ ಕಕ್ಷಿದಾರರಿಗೆ ಆನ್‌ಲೈನ್ ಮೂಲಕ ಕಾನೂನು ಸೇವೆಗಳನ್ನು ಒದಗಿಸುವ 'ಇ-ಸೇವಾ ಕೇಂದ್ರಗಳ' ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಜಾಮೀನು ಆದೇಶಗಳು ಸಕಾಲದಲ್ಲಿ ಜೈಲುಗಳಿಗೆ ತಲುಪದೇ ಇರುವುದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ದೊಡ್ಡ ಕೊರತೆ. ವಿಚಾರಣಾಧೀನ ಕೈದಿಗಳದ್ದು ಮಾತ್ರವಲ್ಲ, ಶಿಕ್ಷೆ ಅಮಾನತುಗೊಂಡಿರುವ ಅಪರಾಧಿಯ ಸ್ವಾತಂತ್ರ್ಯಕ್ಕೂ ಇದರಿಂದ ಧಕ್ಕೆ ಉಂಟಾಗುವುದು' ಎಂದು ಅವರು ಹೇಳಿದರು.
ಈ ನ್ಯೂನತೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 'ಇ-ಕಸ್ಟಡಿ ಸರ್ಟಿಫಿಕೇಟ್' ನೀಡಲು ಒಡಿಶಾ ಹೈಕೋರ್ಟ್ ಜಾರಿಗೊಳಿಸಿದ ಕ್ರಮವನ್ನು ನ್ಯಾಯಮೂರ್ತಿ ಚಂದ್ರಚೂಡ್ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಈ ಹಿಂದೆ ಹಲವು ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಜಾಮೀನು ಆದೇಶಗಳು ತ್ವರಿತವಾಗಿ ಜೈಲುಗಳಿಗೆ ತಲುಪಿಸುವ ಸಲುವಾಗಿ 'ಎಲೆಕ್ಟ್ರಾನಿಕ್ ದಾಖಲೆಗಳ ತ್ವರಿತ ಮತ್ತು ಸುರಕ್ಷಿತ ರವಾನೆ' (FASTER) ಎಂಬ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.