ಬದಿಯಡ್ಕ: ಭಾರತ ದೇಶವು ಇಡೀ ಪ್ರಪಂಚಕ್ಕೆ ಗುರುವಿನ ಸ್ಥಾನದಲ್ಲಿ ನಿಂತಿರುವುದು ನಮ್ಮ ಮಣ್ಣಿನ ಕಣಕಣದಲ್ಲಿಯೂ ಅಂತರ್ಗತವಾಗಿರುವ ಧಾರ್ಮಿಕವಾದ ಚೈತನ್ಯದಿಂದಾಗಿದೆ. ನಮ್ಮ ಮಣ್ಣಿನಲ್ಲಿ ನಿರಂತರವಾಗಿ ಆಧ್ಯಾತ್ಮಿಕವಾದ ಚೈತನ್ಯ ಪ್ರವಹಿಸುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವ ನಮ್ಮ ಧಾರ್ಮಿಕ ಕ್ಷೇತ್ರಗಳ ಪುನರುದ್ಧಾರಕ್ಕೆ ಎಲ್ಲರೂ ಒಂದುಗೂಡಬೇಕು ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಕುಂಬ್ಡಾಜೆ ಗ್ರಾಮದ ಉಪ್ಪಂಗಳ ಕಜೆಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಪ್ರಗತಿಗಾಗಿ ಶ್ರೀಸನ್ನಿಧಿಯಲ್ಲಿ ಭಾನುವಾರ ಊರ ಭಕ್ತಾದಿಗಳೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಎಲ್ಲೇ ಇದ್ದರೂ ತನ್ನದೇ ಆದ ಧರ್ಮ ಆಚಾರ ಪರಂಪರೆಯನ್ನು ಕಾಪಾಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ನಮ್ಮಲ್ಲಿರುವ ಧರ್ಮಾನುಷ್ಠಾನದ ಕೊರತೆ, ಏಕೀಕೃತವಾದ ಮನಸ್ಸಿನಿಂದ ಮತ್ತು ಏಕಾಗ್ರತೆಯಿಂದ ಗುರಿಯನ್ನು ಸೇರಲು ವಿಫಲವಾಗದಂತೆ ಮನಗಂಡು ಹಿರಿಯರು ಎಲ್ಲರನ್ನೂ ಒಂದೇ ಕಡೆ ಸೇರಿಸುವುದಕ್ಕೋಸ್ಕರ ಮೂರ್ತಿಯ ಆರಾಧನೆಯನ್ನು ಪ್ರಾರಂಭಿಸಿದ್ದಾರೆ. ತನ್ಮೂಲಕ ಮನೆಯ ದೇವರ ಕೋಣೆಯಿಂದ ಪ್ರಾರಂಭಿಸಿ ಗ್ರಾಮ ದೇವರು, ಕುಟುಂಬ ದೇವರು, ಸೀಮೆಯ ದೇವರು ಹೀಗೆ ಭಕ್ತಿ ಶ್ರದ್ಧೆಯಿಂದ ದೇವತಾಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸರಿಯಾದ ದಾರಿಯನ್ನು ತೋರಿಸಿದ್ದಾರೆ ಎಂದು ತಿಳಿಸುತ್ತಾ ಜೀರ್ಣೋದ್ಧಾರ ಕಾರ್ಯಗಳಿಗೆ ಪ್ರಗತಿಯುಂಟಾಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ, ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ, ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಹಿರಿಯರಾದ ಬಾಲಕೃಷ್ಣ ಭಟ್ ಕಜೆಮಲೆ, ಮಹಾಬಲೇಶ್ವರ ಭಟ್ ಉಪ್ಪಂಗಳ, ವೇಣುಗೋಪಾಲ ಕಳೆಯತ್ತೋಡಿ, ವಾರ್ಡು ಸದಸ್ಯ ಹರೀಶ್ ಗೋಸಾಡ, ಶ್ರೀಧರ ಭಟ್ ಚೋಕೆಮೂಲೆ ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ನರಸಿಂಹ ಸ್ವರೂಪಿ ಮಹಾವಿಷ್ಣು :
ಕಜೆಮಲೆಯಲ್ಲಿ ನೆಲೆಸಿರುವ ನರಸಿಂಹ ಸ್ವರೂಪಿಯಾದ ಮಹಾವಿಷ್ಣು ದೇವಾಲಯವು ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಹಿರಿಯರ ಅನುಭವದ ಪ್ರಕಾರ ಐದು ತಲೆಮಾರಿನಿಂದ ಆರಾಧಿಸಲ್ಪಡುತ್ತಾ ಬಂದಿರುವ ಈ ಕ್ಷೇತ್ರದಲ್ಲಿ ಪ್ರಸ್ತುತ ಉಪ್ಪಂಗಳ ಕಜೆಮಲೆ ಮನೆತನದಿಂದ ಪೂಜಾ ಕಾರ್ಯಗಳು ನಿತ್ಯವೂ ನಡೆಯುತ್ತಿದೆ.




