ಕಾಸರಗೋಡು: ವಿದ್ಯುತ್ ಗ್ರಾಹಕತ್ವದಲ್ಲಿ ತಲೆದೋರುವ ನಷ್ಟ ನಿಯಂತ್ರಿಸುವ, ಸರಬರಾಜು ಹಂತದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ಖಚಿತಪಡಿಸುವ, ಸಂಪೂರ್ಣ ವಿದ್ಯುದೀಕರಣ ಸಾಧ್ಯವಾಗಿಸುವ ಗುರಿಯೊಂದಿಗೆ ಆರಂಭಿಸಲಾದ ಕೇಂದ್ರ ಸರ್ಕಾರದ ಯೋಜನೆ ಆರ್.ಡಿ.ಎಸ್.ಎಸ್.(ರಿವಾಂಬ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಂ) ನ ಅಂಗವಾಗಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ.
ದೇಶದಲ್ಲಿ ಒಟ್ಟು 3 ಲಕ್ಷ ಕೋಟಿ ರೂ. ಮೀಸಲಿರಿಸಿರುವ ಈ ಯೋಜನೆ 2026ನೇ ಇಸವಿಯ ವೇಳೆಗೆ ಪೂರ್ಣಗೊಳ್ಳಲಿದೆ. 2021-22 ರಿಂದ 2025-26 ವರೆಗಿನ 5 ವರ್ಷಗಳ ಅವಧಿಯಲ್ಲಿ ಇದು ಜಾರಿಗೊಳ್ಳಲಿದೆ. ದಿಲ್ಲಿ ಕೇಂದ್ರೀಕರಿಸಿ ಚಟುವಟಿಕೆ ನಡೆಸುವ ಪಿ.ಎಫ್.ಸಿ. ಕಂಪನಿ ಯೋಜನೆಯ ನೋಡೆಲ್ ಏಜೆನ್ಸಿಯಾಗಿದೆ. ಕಾಸರಗೋಡು ಜಿಲ್ಲೆಯ ವಿದ್ಯುತ್ ವಿತರಣೆ ಚಟುವಟಿಕೆಗಳಿಗಾಗಿ 80 ಕೋಟಿ ರೂ., ಸರಬರಾಜಿಗಾಗಿ 55.56 ಕೋಟಿ ರೂ. ಯೋಜನೆಯ ಅಂಗವಾಗಿ ಮಂಜೂರು ಮಾಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಈ ಯೋಜನೆಯ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಮೆಂಬರ್ ಸೆಕ್ರಟರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ಸಿ.ಎಚ್.ಕುಂಞಂಬು, ಎಂ.ರಾಜಗೋಪಾಲನ್ ಸದಸ್ಯರಾಗಿರುತ್ತಾರೆ. ಕಾಸರಗೋಡು ಸರ್ಕಲ್ ಇಲೆಕ್ಟ್ರಿಕಲ್ ಡೆಪ್ಯೂಟಿ ಚೀಫ್ ಇಂಜಿನಿಯರ್ ಪಿ. ಸುರೇಂದ್ರನ್ ಸಮಿತಿಯ ಸಂಚಾಲಕರಾಗಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಆರ್.ಡಿ.ಎಸ್.ಎಸ್. ಯೋಜನೆ ಜಾರಿಯ ಬಗ್ಗೆ ಸಂವಾದ ನಡೆಯಿತು. ಯೋಜನೆ ಬಗ್ಗೆ ಕಾರ್ಯಕಾರಿ ಇಂಜಿನಿಯರ್(ಪಿ.ಎಂ.ಯು.) ಕೆನ್ನಿ ಫಿಲಿಪ್ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಇ.ಚಂದ್ರಶೇಖರನ್, ಕಾಸರಗೊಡು ಸರ್ಕಲ್ ಇಲೆಕ್ಟ್ರಿಕಲ್ ಚೀಫ್ ಇಂಜಿನಿಯರ್ ಪಿ.ಸುರೇಂದ್ರ ಉಪಸ್ಥಿತರಿದ್ದರು.




