ಕುಂಬಳೆ: ಭಾಷೆ ಎಂಬುದು ಯಾರ ಸ್ವತ್ತೂ ಅಲ್ಲ. ಅದಕ್ಕೆ ಯಾವುದೇ ಕೋಪಿರೈಟ್ ಇಲ್ಲ. ಜನರ ನಿರಂತರ ಸಂಪರ್ಕದಿಂದ ತನ್ನ ಶಬ್ದಭಂಡಾರವನ್ನು ವೃದ್ಧಿಸಿಕೊಂಡು, ಅಪಾರ ಪಾಂಡಿತ್ಯದ ಮೂಲಕ ಹವ್ಯಕ ಭಾಷೆಯ ಹವಿ-ಸವಿ ಶಬ್ದಕೋಶವನ್ನು ಹೊರತರುವಲ್ಲಿ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಯಶಸ್ವಿಯಾಗಿದ್ದಾರೆ. ಇದು ಸಾಹಿತ್ಯಲೋಕಕ್ಕೆ ಅವರ ಸಾರ್ಥಕ ಸೇವೆಯಾಗಿದೆ. ಭಾಷೆ ಸಂಸ್ಕøತಿ ಬೆಳೆಸಲು ಇದು ಸಕಾಲವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಪತ್ರಕರ್ತ, ಸಾಹಿತಿ ವಿ.ಬಿ.ಅರ್ತಿಕಜೆ ಹೇಳಿದರು.
ಶಿಕ್ಷಣ ತಜ್ಞ, ನಿವೃತ್ತ ಅಧ್ಯಾಪಕ, ಸಾಹಿತಿ ವಿ.ಬಿ.ಕುಳಮರ್ವ ಅವರ ಹವಿ-ಸವಿ ಕೋಶ ಹವ್ಯಕ ಕನ್ನಡ ನಿಘಂಟನ್ನು ಭಾನುವಾರ ನಾರಾಯಣಮಂಗಲದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪ್ರತಿಭೆ ಇರುವವರು ಬರೆಯಲು ಮುಂದೆ ಬರಬೇಕು. ಉಳಿದವರು ಹಣನೀಡಿ ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ ಸಾರಾಸ್ವತ ಲೋಕಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಅವರು ತಿಳಿಸಿದರು.
ಪ್ರಸಿದ್ಧ ಯಕ್ಷಗಾನ ಕಲಾವಿದ, ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಶಬ್ದಗಳ ಕುರಿತಾದಂತಹ ಮಾಹಿತಿ, ಅರ್ಥ ಹಾಗೂ ಅದನ್ನು ಉಪಯೋಗಿಸಲು ಶಬ್ದಕೋಶವು ದಾರಿಯನ್ನು ತೋರಿಸುತ್ತದೆ. ಭಾಷೆ ಎಂಬ ಸಂಪತ್ತನ್ನು ನಾವು ಉಳಿಸಿಕೊಳ್ಳಬೇಕು. ಹವ್ಯಕ ಭಾಷೆಯು ಕನ್ನಡದ ಒಂದು ಪ್ರಬೇದ, ಪ್ರಕಾರ, ಕವಲು ಹೀಗೆ ಅದನ್ನು ಗುರುತಿಸಿಕೊಳ್ಳಬಹುದು. ಹವ್ಯಕ ಭಾಷೆಯು ಕನ್ನಡದ ಕವಲಾಗಿದ್ದರೂ, ಸ್ವತಂತ್ರವಾಗಿ ಉಳಿಯಬಲ್ಲ ಬೆಳೆಯಲ್ಲ ಒಂದು ಶಕ್ತಿಪೂರ್ಣವಾದ ಭಾಷೆಯಾಗಿದೆ. ಲಿಪಿ ಇದ್ದರೂ ಇಲ್ಲದಿದ್ದರೂ ಹವ್ಯಕ ಭಾಷೆಯು ಸ್ವತಂತ್ರವಾಗಿ ನಿಲ್ಲಬಲ್ಲ ಭಾಷೆಯಾಗಿದೆ. ನಮ್ಮ ಸಮಾಜದ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ಭಾಷೆ ಉಪಯೋಗಿಸಲ್ಪಡಬೇಕು ಎಂದರು.
ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ. ವಸಂತ ಕುಮಾರ ತಾಳ್ತಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭಾಷೆ ಹಾಗೂ ಭಾಷೆಗನುಗುಣವಾದ ಸಂಸ್ಕøತಿ ಹವ್ಯಕರದ್ದಾಗಿದೆ. ಹವಿ ಸವಿ ಕೋಶವು ಹವ್ಯಕ ಸಂಸ್ಕøತಿಯ, ಸಮಾಜದ ಸಂವರ್ಧನೆಗೆ ಪೂರಕವಾಗಲಿ ಎಂದು ಶುಭಕೋರಿದರು.
ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಮಾತನಾಡಿದರು. ನಿವೃತ್ತ ಅಧ್ಯಾಪಕ, ಶಿಕ್ಷಣತಜ್ಞ, ಸಾಹಿತಿ, ಕೃತಿಕತೃ ವಿ.ಬಿ.ಕುಳಮರ್ವ ಸುದೀರ್ಘ ಕಾಲದಿಂದ ಕೃತಿ ರಚನೆಯ ಬಗೆಗಿನ ಶ್ರಮ, ಸಂಶೋಧನೆಯ ಕುರಿತು ಮಾತನಾಡಿದರು. ರಾಜಶ್ರೀ ಕುಳಮರ್ವ ನಿರೂಪಿಸಿದರು. ಗಣಪತಿ ಭಟ್ ಕುಳಮರ್ವ ಸ್ವಾಗತಿಸಿ, ವಾರಿಜಾ ಶಶಾಂಕ್ ಕುಳಮರ್ವ ವಂದಿಸಿದರು. ಶ್ರದ್ಧಾ, ಮೇಧಾ ನಾಯರ್ಪಳ್ಳ ಸಹೋದರಿಯರಿಂದ ಗಮಕ ವಾಚನ ಪ್ರವಚನ ನಡೆಯಿತು. ಬಳಿಕ ಪುಟಾಣಿಗಳಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ವಿನೋದಾವಳಿಗಳು ನಡೆಯಿತು.




