ಆಯುಷ್ಮಾನ್ ಭಾರತ ಡಿಜಿಟಲ್ ಆರೋಗ್ಯ ಅಭಿಯಾನದ ಭಾಗವಾಗಿ ದೇಶದ ಪ್ರತೀ ಪ್ರಜೆಗೆ 14 ಅಂಕಿಗಳ ಡಿಜಿಟಲ್ ಆರೋಗ್ಯ ಸಂಖ್ಯೆಯೊಂದನ್ನು ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರವು ಇರಿಸಿರುವ ಬಹುದೊಡ್ಡ, ಮಹತ್ವಾಕಾಂಕ್ಷೆಯ ಹೆಜ್ಜೆ ಇದು.
ಇಂಥದ್ದೊಂದು ಆರೋಗ್ಯ ಗುರುತಿನ ಚೀಟಿಯ ಅಗತ್ಯ ಇದೆ ಎಂದು ಹೇಳಬಹುದು. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಮೂಡುತ್ತವೆ. ದತ್ತಾಂಶದ ಸಂಗ್ರಹ ಹಾಗೂ ಖಾಸಗಿತನಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಆತಂಕಗಳೂ ಮೂಡುತ್ತವೆ. ಆರೋಗ್ಯ ಹಾಗೂ ವೈದ್ಯಕೀಯ ವಿವರಗಳನ್ನೆಲ್ಲ ಒಂದೆಡೆ, ಡಿಜಿಟಲ್ ಸ್ವರೂಪದಲ್ಲಿ ಸಂಗ್ರಹಿಸಿ ಇಡುವ ಈ ಯೋಜನೆಯು ಇಂತಹ ವಿವರಗಳನ್ನೆಲ್ಲ ಮುದ್ರಿತ ರೂಪದಲ್ಲಿ ವೈದ್ಯರ ಬಳಿ ಕೊಂಡೊಯ್ಯಬೇಕಾದ ಅಗತ್ಯವನ್ನು ಇಲ್ಲವಾಗಿಸುತ್ತದೆ. ಆದರೆ, ವಾಸ್ತವದಲ್ಲಿ ಯಾವುದೇ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ, ಮುದ್ರಿತ ರೂಪದಲ್ಲಿರುವ ವಿವರಗಳನ್ನು ವೈದ್ಯರ ಬಳಿ ಒಯ್ಯುವುದು ವ್ಯಕ್ತಿ ಎದುರಿಸುವ ಸಮಸ್ಯೆಗಳ ಸಾಲಿನಲ್ಲಿ ಅತ್ಯಂತ ಸಣ್ಣದು. ದೇಶದ ಆರೋಗ್ಯ ಸೇವಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯಲ್ಲಿಯೂ ವೈದ್ಯರ ಬಳಿ ಕಡತಗಳನ್ನು ಒಯ್ಯುವುದು ಮೊದಲ ಸ್ಥಾನದಲ್ಲಿ ಇರುವ ಸಮಸ್ಯೆ ಅಲ್ಲ. ಆರೋಗ್ಯ ಸೇವೆಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳ ಕೊರತೆ, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆ, ಚಿಕಿತ್ಸಾ ವೆಚ್ಚವು ದುಬಾರಿ ಆಗಿರುವುದು, ಜನರಲ್ಲಿನ ಬಡತನ, ವೈದ್ಯಕೀಯ ಅಸಾಕ್ಷರತೆ... ಇಂಥವು ಪ್ರಮುಖ ಸಮಸ್ಯೆಗಳು. ಅತ್ಯಾಧುನಿಕ ಸೌಲಭ್ಯಗಳ ಆಸ್ಪತ್ರೆಗಳು ಇಲ್ಲದ ತಾಲ್ಲೂಕುಗಳು ಕರ್ನಾಟಕದಲ್ಲಿಯೇ ಹಲವು ಇವೆ. ಹೃದಯಾಘಾತದಂತಹ, ತಕ್ಷಣದ ಚಿಕಿತ್ಸೆ ಬೇಕಿರುವ ಸಂದರ್ಭಗಳು ಎದುರಾದಾಗ ಚಿಕಿತ್ಸೆ ಪಡೆಯಲು ನೂರಾರು ಕಿಲೊ ಮೀಟರ್ ಪ್ರಯಾಣಿಸಬೇಕಾದ ಸ್ಥಿತಿ ಕೂಡ ರಾಜ್ಯದ ಕೆಲವೆಡೆ ಇದೆ. ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬೇಕಾಗುವ ವೆಚ್ಚವು ಮಧ್ಯಮ ವರ್ಗದವರಿಗೂ ಎಟುಕದಂತೆ ಇದೆ. ಆರೋಗ್ಯ ವಿಮೆಗಳನ್ನು ಪಡೆಯುವ ಅಗತ್ಯದ ಬಗ್ಗೆ ಎಲ್ಲರಿಗೂ ಅರಿವು ಇಲ್ಲ. ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ವಿಪರೀತ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡಿದ ವರದಿಗಳು ಇವೆ. ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವು ಜನರಲ್ಲಿ ವಿಶ್ವಾಸ ಮೂಡಿಸುವಷ್ಟು ಇಲ್ಲ ಎಂದು ಹೇಳುವುದಕ್ಕೆ ಸಂಶೋಧನೆ ನಡೆಸಬೇಕಾದ ಅಗತ್ಯ ಇಲ್ಲ. ಈ ಎಲ್ಲ ಸಮಸ್ಯೆಗಳು ತೀರಾ ತುರ್ತಾಗಿ ನಿವಾರಣೆ ಆಗಬೇಕಾದವುಗಳು. ಆದರೆ, ಇವುಗಳನ್ನೆಲ್ಲ ಈ ಡಿಜಿಟಲ್ ಆರೋಗ್ಯ ಕಾರ್ಡ್ ಮೂಲಕ ನಿವಾರಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ದೇಶದ ಆರೋಗ್ಯ ಸೇವಾ ವಲಯದಲ್ಲಿ ಇರುವ ಮಿತಿಗಳು, ಆರೋಗ್ಯ ಕಾರ್ಡ್ ಸೌಲಭ್ಯವನ್ನು ಪೂರ್ತಿ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದೇ ಅನುಮಾನ. ಪ್ರಾಥಮಿಕ ಆರೋಗ್ಯ ಸೇವೆಗಳಾದರೂ ದೇಶದ ಪ್ರತೀ ಪ್ರಜೆಗೆ ಖಾತರಿಯಾಗಿ ಸಿಗುವ ಪರಿಸ್ಥಿತಿ ಇದ್ದರೆ ಈ ಕಾರ್ಡ್‌ನ ಪೂರ್ಣ ಪ್ರಯೋಜನ ಬಳಸಿಕೊಳ್ಳಲು ಸಾಧ್ಯವಾಗಬಹುದು.
ಖಾಸಗಿತನವು ಮೂಲಭೂತ ಹಕ್ಕುಗಳ ಪೈಕಿ ಒಂದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ವರ್ಷಗಳ ನಂತರವೂ ದೇಶದಲ್ಲಿ ಖಾಸಗಿತನವನ್ನು ರಕ್ಷಿಸುವ ಪ್ರತ್ಯೇಕ ಕಾನೂನಿನ ರಚನೆ ಆಗಿಲ್ಲ. ಇಂತಹ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಎಲ್ಲ ವೈದ್ಯಕೀಯ ವಿವರಗಳನ್ನು ಒಂದೆಡೆ ಡಿಜಿಟಲ್ ರೂಪದಲ್ಲಿ ಶೇಖರಿಸಿ ಇಡುವುದು ಅಪಾಯಕಾರಿ ಆಗಬಹುದು. ಮಾಹಿತಿ ಕಳ್ಳತನ ಹಾಗೂ ವಿವರಗಳ ದುರ್ಬಳಕೆ ಯನ್ನು ತಡೆಯಲು ಬಲಿಷ್ಠ ಕಾನೂನು ಇಲ್ಲ. ಖಾಸಗಿತನದ ವಿಚಾರವಾಗಿ ದೇಶದಲ್ಲಿ ಅರಿವು ಕೂಡ ಕಡಿಮೆ. ಜನರ ವೈದ್ಯಕೀಯ ವಿವರಗಳನ್ನು ಪಡೆದುಕೊಂಡು ವಿಮಾ ಕಂಪನಿಗಳು, ಔಷಧ ಕಂಪನಿಗಳು ಆ ವಿವರಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗದು. ಆಗ ಇಡೀ ಯೋಜನೆಯು ಸಾರ್ವಜನಿಕ ಹಿತಕ್ಕೆ ವಿರುದ್ಧವಾಗಿ ಪರಿಣಮಿಸಬಹುದು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಇಂತಹ ಗುರುತಿನ ಚೀಟಿಗಳು ತೃಪ್ತಿಕರ ಮಟ್ಟದಲ್ಲಿ ಪ್ರಯೋಜನಕಾರಿ ಆಗಿಲ್ಲ. ಹೊಸ ಯೋಜನೆಯನ್ನು ವ್ಯಾಪಕವಾಗಿ ಜಾರಿಗೊಳಿಸುವ ಮುನ್ನ ಈ ಸಂಗತಿಗಳ ಬಗ್ಗೆ ಪರಿಶೀಲನೆ ನಡೆಸಿದರೆ ಒಳಿತು.




