HEALTH TIPS

ಕೋವಿಡ್‌ ದೃಢ ಪ್ರಮಾಣ ಶೇ 10ಕ್ಕಿಂತ ಹೆಚ್ಚಿದ್ದರೆ ರಾತ್ರಿ ಕರ್ಫ್ಯೂ: ಕೇಂದ್ರ

    ನವದೆಹಲಿ: ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 10ಕ್ಕಿಂತ ಹೆಚ್ಚು ಇರುವ ಪ್ರದೇಶಗಳಲ್ಲಿ ಮತ್ತು ಆಮ್ಲಜನಕಸಹಿತ ಹಾಸಿಗೆಗಳಿಗೆ ಹೆಚ್ಚು ಬೇಡಿಕೆ ಇರುವಲ್ಲಿ ರಾತ್ರಿ ಕರ್ಫ‍್ಯೂ, ಹೆಚ್ಚು ಜನ ಸೇರುವುದಕ್ಕೆ ನಿಷೇಧದಂತಹ ಕ್ರಮಗಳನ್ನು ಕೈಗೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರವು ಸೂಚಿಸಿದೆ.

      ಸದ್ಯಕ್ಕೆ ದೇಶದಲ್ಲಿ ಇಂತಹ ಜಿಲ್ಲೆಗಳು ಎಂಟು ಮಾತ್ರ ಇವೆ. ಕೋವಿಡ್‌ ದೃಢಪಡುವಿಕೆ ದರವು ಶೇ 5 ಮತ್ತು ಶೇ 10ರ ನಡುವೆ ಇರುವ 19 ಜಿಲ್ಲೆಗಳಲ್ಲಿಯೂ ಹೆಚ್ಚಿನ ನಿಗಾ ಅಗತ್ಯ. ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯದ ಓಮೈಕ್ರಾನ್‌ ರೂಪಾಂತರ ತಳಿಯು ಸುಮಾರು 60 ದೇಶಗಳಿಗೆ ಹರಡಿದೆ. ಹಾಗಾಗಿ ಕೋವಿಡ್‌ನ ಹೆಚ್ಚು ಪ್ರಕರಣಗಳು ಪತ್ತೆಯಾದ 70 ಕ್ಲಸ್ಟರ್‌ಗಳಲ್ಲಿಯೂ ಹೆಚ್ಚು ಗಮನ ಇರಿಸಬೇಕು ಎಂದು ಕೇಂದ್ರವು ಹೇಳಿದೆ. 2022ರ ಜನವರಿ-ಫೆಬ್ರುವರಿ ಹೊತ್ತಿಗೆ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚಳವಾಗಬಹುದು ಎಂದು ತಜ್ಞರುಅಂದಾಜಿಸಿದ್ದಾರೆ.

      ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

     ಚಳಿಗಾಲ ಆರಂಭವಾಗಿದೆ. ಹಾಗಾಗಿ, ಉಸಿರಾಟಕ್ಕೆ ಸಂಬಂಧಿಸಿದ ರೋಗಗಳು ಮತ್ತು ಜ್ವರದಂತಹ ರೋಗಗಳ ಬಗ್ಗೆ ಹೆಚ್ಚಿನ ನಿಗಾ ಇರಿಸುವಂತೆಯೂ ಸೂಚಿಸಲಾಗಿದೆ.

     ಕೋವಿಡ್‌ ಪ್ರಕರಣಗಳು ಹೆಚ್ಚು ಇರುವ 70 ಕ್ಲಸ್ಟರ್‌ಗಳು ಯಾವುವು ಎಂಬುದನ್ನು ಕೇಂದ್ರವು ಹೇಳಿಲ್ಲ. ಆದರೆ, ನವೆಂಬರ್‌ನ ಕೊನೆಯ ಎರಡು ವಾರಗಳಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾದ ಆರು ರಾಜ್ಯಗಳ 30 ಜಿಲ್ಲೆಗಳಲ್ಲಿಯೇ ಹೆಚ್ಚಿನ ಕ್ಲಸ್ಟರ್‌ಗಳು ಇವೆ. ಜಮ್ಮು ಕಾಶ್ಮೀರದ ಕಠುವಾ, ಒಡಿಶಾದ ಧೆನ್‌ಕನಲ್‌ ಮತ್ತು ಕಂಧಮಾಲ್‌ ಹಾಗೂ ಕೇರಳದ ಎರ್ನಾಕುಳಂ, ತಿರುವನಂತಪುರ ಜಿಲ್ಲೆಗಳಲ್ಲಿ ಪ್ರಕರಣಗಳು ತೀವ್ರವಾಗಿ ಹೆಚ್ಚಿದ್ದವು. ಕರ್ನಾಟಕದ  ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಹೆಚ್ಚಿನ ನಿಗಾ ಅಗತ್ಯ ಎಂದು ಕೇಂದ್ರ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries