ನವದೆಹಲಿ: ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಹರಡುವಿಕೆ ಭೀತಿ ಹೆಚ್ಚಿದ ಈ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವುದರ ಬಗ್ಗೆ ಆಲೋಚಿಸುವುದರ ಬದಲಿಗೆ ಎಲ್ಲರಿಗೂ ಕೊವಿಡ್-19 ಲಸಿಕೆ ನೀಡುವತ್ತ ಲಕ್ಷ್ಯ ವಹಿಸುವಂತೆ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ
ಭಾರತದಲ್ಲಿ ಕೊವಿಡ್-19 ಪರಿಸ್ಥಿತಿ ಹಾಗೂ ಓಮಿಕ್ರಾನ್ ಆತಂಕದ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ರಾಯಭಾರಿ ಡಾ. ರೊಡರಿಕೋ ಆಫ್ರಿನ್ ಮಾತನಾಡಿದ್ದು, ದೇಶದಲ್ಲಿನ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡುವುದು ತುರ್ತು ಅಗತ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಭೀತಿ ನಡುವೆ ಸೋಂಕಿನಿಂದ ಸುರಕ್ಷಿತವಾಗಿರಲು ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಬಹುದೇ ಎಂಬ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಓಮಿಕ್ರಾನ್ ಸೋಂಕು ಹರಡುವಿಕೆಯಿಂದ ಪಾರಾಗಲು ಒಂದೇ ಮಾರ್ಗವಿದೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ನೀಡುವತ್ತ ಲಕ್ಷ್ಯ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
ಓಮಿಕ್ರಾನ್ ವಿರುದ್ಧ ಯಾವ ಲಸಿಕೆ ಸುರಕ್ಷಿತ?: ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸಿರುವ ಕಾಳಜಿ ರೂಪಾಂತರ ಪ್ರಬೇಧಕ್ಕೆ ಸೇರಿದ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಯಾವ ಲಸಿಕೆಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ತಳಿಯ ವಿರುದ್ಧ ಯಾವ ಲಸಿಕೆಯು ಹೆಚ್ಚು ಪರಿಣಾಮಕಾರಿ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಹಂತದಲ್ಲಿ ಕೊವಿಡ್-19 ಲಸಿಕೆ ಪಡೆದುಕೊಳ್ಳದ ಜನರನ್ನು ಕಡೆಗಳಿಸಿ ಈಗಾಗಲೇ ಎರಡು ಡೋಸ್ ಪಡೆದವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವುದಕ್ಕೆ ಸಲಹೆ ನೀಡಲು ಇದು ಸೂಕ್ತ ಕಾಲವಲ್ಲ ಎಂದು ಡಾ.ಆಫ್ರಿನ್ ಹೇಳಿದ್ದಾರೆ. ಇದರ ಮಧ್ಯೆ, ಬೂಸ್ಟರ್ ಡೋಸ್‌ಗಳನ್ನು ನೀಡುವಂತೆ ಶಿಫಾರಸುಗಳನ್ನು ಮಾಡಬೇಕೇ ಬೇಡವೇ ಎಂಬುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ ಆಗಿರುವ SAGE (ಇಮ್ಯುನೈಸೇಶನ್‌ನಲ್ಲಿನ ಕಾರ್ಯತಂತ್ರದ ಸಲಹಾ ತಂಡ)ಯು ಡಿಸೆಂಬರ್ 7ರಂದು ಸಭೆ ನಡೆಸಲಿದೆ. ಕೊವಿಡ್-19 ಸೋಂಕಿನಿಂದ ಪ್ರತಿರಕ್ಷಣೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಬೂಸ್ಟರ್ ಡೋಸ್ ಅಥವಾ ಹೆಚ್ಚುವರಿ ಡೋಸ್‌ಗಳನ್ನು ನೀಡುವ ಬಗ್ಗೆ ಚರ್ಚಿಸಲು ಸಭೆಯನ್ನು ನಡೆಸಿತು. ಆದರೆ, ಮೂಲಗಳ ಪ್ರಕಾರ ಆರೋಗ್ಯ ಸಚಿವಾಲಯಕ್ಕೆ ಇನ್ನೂ ಯಾವುದೇ ಶಿಫಾರಸು ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ. ಹೊಸ ರೂಪಾಂತರಗಳಿಂದ ಭವಿಷ್ಯ ಅನಿಶ್ಚಿತ: "ಕೊರೊನಾವೈರಸ್ ಹೂಸ ರೂಪಾಂತರಗಳಿಂದ ಭವಿಷ್ಯವು ನಿಶ್ಚಿತವಾಗಿದೆ. ಕೊವಿಡ್-19 ಹೊಸ ಸೋಂಕಿತ ಪ್ರಕರಣಗಳ ಏರಿಕೆಯನ್ನು ನಿಯಂತ್ರಿಸಲು ಹಾಗೂ ನಿರ್ವಹಿಸುವುದಕ್ಕೆ ನಾವು ಈಗಾಗಲೇ ಎಲ್ಲ ರೀತಿ ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಓಮಿಕ್ರಾನ್ ಸೋಂಕು ಹರಡುವಿಕೆ ವೇಗವನ್ನು ತಗ್ಗಿಸುವುದು, ಓಮಿಕ್ರಾನ್ ಸೋಂಕಿನ ಸಮರ್ಥ ನಿರ್ವಹಣೆ ಮಾಡುವುದಕ್ಕಾಗಿ ಸರಿಯಾದ ಸಂದರ್ಭದಲ್ಲಿ ಕೊವಿಡ್-19 ಲಸಿಕೆಯನ್ನು ಪಡೆದುಕೊಳ್ಳಬೇಕು. ಆ ಮೂಲಕ ಸೋಂಕು ಹರಡುವಿಕೆ ಸರಪಳಿಯನ್ನು ಕತ್ತರಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು," ವಿಶ್ವ ಆರೋಗ್ಯ ಸಂಸ್ಥೆಯ ರಾಯಭಾರಿ ಡಾ. ರೊಡರಿಕೋ ಆಫ್ರಿನ್ ಹೇಳಿದ್ದಾರೆ. ಭಾರತದಲ್ಲಿ ಶೇ.85ರಷ್ಟು ಜನರಿಗೆ ಕೊವಿಡ್-19 ಲಸಿಕೆ: ದೇಶದಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ 96 ಕೋಟಿ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯ ಎರಡೂ ಡೋಸ್ ಅನ್ನು ನೀಡುವ ಗುರಿ ಹೊಂದಲಾಗಿತ್ತು. ಇದರ ಹೊರತಾಗಿ ಭಾರತದಲ್ಲಿ ಶೇ.85ರಷ್ಟು ಜನರಿಗೆ ಮಾತ್ರ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದಾರೆ. ಭಾರತವು ತನ್ನ ಸಂಪೂರ್ಣ ಜನಸಂಖ್ಯೆಯ ಎರಡನೇ ಡೋಸ್ ವ್ಯಾಪ್ತಿಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ತನ್ನ ಒತ್ತಡವನ್ನು ಹೊಂದಿದೆ. ಭಾರತ ಸರ್ಕಾರದ 'ಹರ್ ಘರ್ ದಸ್ತಕ್' ಅಭಿಯಾನವು ಎರಡನೇ ಡೋಸ್‌ಗೆ ಬಂದಾಗ ಭಾರತವು ಶೇಕಡಾ 50 ರಷ್ಟು ಅಂಕವನ್ನು ದಾಟಲು ಸಹಾಯ ಮಾಡಿದೆ. ಅರ್ಹ ಜನಸಂಖ್ಯೆಯಲ್ಲಿ, 85 ಪ್ರತಿಶತ ಜನರು ಕೋವಿಡ್ -19 ಲಸಿಕೆಯ ಮೊದಲ ಜಬ್ ಅನ್ನು ಸ್ವೀಕರಿಸಿದ್ದಾರೆ. ಭಾರತದಲ್ಲಿ ಒಟ್ಟು 21 ಓಮಿಕ್ರಾನ್ ಸೋಂಕಿತ ಪ್ರಕರಣ: ಹೊಸ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಐದರಿಂದ 21ಕ್ಕೆ ಏರಿಕೆಯಾಗಿದೆ. 17 ಹೊಸ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ರಾಜಸ್ಥಾನದಲ್ಲಿ 9, ಮಹಾರಾಷ್ಟ್ರ 8, ಕರ್ನಾಟಕ 2, ಗುಜರಾತ್ ಮತ್ತು ದೆಹಲಿಯಲ್ಲಿ ತಲಾ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.




