ಕುಂಬಳೆ: ಕುಂಬಳೆ-ಬದಿಯಡ್ಕ- ಮುಳ್ಳೇರಿಯ ರಸ್ತೆ ಅಭಿವೃದ್ಧಿಯ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿರುವ ಮರಗಳನ್ನೆಲ್ಲ ಕಡಿದುರುಳಿಸುವ ಬೇಸರದ ಸನ್ನಿವೇಶ ನಡೆಯುತ್ತಿದೆ. ಈ ನಡುವೆ ಕಡಿಯದೆ ಉಳಿಸಿದ ನೂರಾರು ವರ್ಷಗಳಷ್ಟು ಹಳೆಯದಾದ ಮಾವಿನಡಿ ಎಂದೆ ಹೇಳಲ್ಪಡುವ ಸೂರಂಬೈಲು ಪೆರ್ಣೆ ಸಮೀಪದ ಬೃಹತ್ ಮಾವಿನ ಮರದಲ್ಲಿ, ನನ್ನನ್ನು ಸಂರಕ್ಷಿಸಿದ ಕೆ.ಎಸ್.ಟಿ. ಪಿ.ಗೆ ವಂದನೆಗಳು ಎಂದು ತಿಳಿಸುವಂತಹ ಬ್ಯಾನರ್ ಒಂದು ಪ್ರತ್ಯಕ್ಷಗೊಂಡಿದೆ.
ರಸ್ತೆ ಅಭಿವೃದ್ಧಿ ಯೋಜನೆ ಭಾಗವಾಗಿ ಮೊದಲು ತೀರ್ಮಾನಿಸಿದ ಪ್ರಕಾರ ಈ ಮರವನ್ನು ಹೊರತುಪಡಿಸಿ ಪ್ಲಾನ್ ತಯಾರಾಗಿತ್ತು. ಆದರೆ ಮರದ ಎದುರು ಭಾಗದಲ್ಲಿ ಅಗತ್ಯದಷ್ಟು ಸ್ಥಳಾವಕಾಶವಿದ್ದರೂ ಈ ಮರವನ್ನು ಕಡಿಯುವ ಹುನ್ನಾರದಿಂದ ಪ್ಲಾನ್ ಪುನಃ ರಚಿಸಿ ಮಾವಿನ ಮರವನ್ನು ಕಡಿಯಲು ಅಧಿಕೃತರು ಗುರುತು ಮಾಡಿದ್ದರು. ಇದು ಪರಿಸರ ಪ್ರೇಮಿಗಳ ಹಾಗೂ ಊರವರ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ನನ್ನನ್ನು ರಕ್ಷಿಸಿ, ನಾನು ನಿಮಗೆ ಯಾವುದೇ ರೀತಿಯ ಸಮಸ್ಯೆಗಳನ್ನು ಮಾಡುವುದಿಲ್ಲ ಮುಂತಾದ ಪೋಸ್ಟರ್ ಗಳು ಮರದಡಿಯಲ್ಲಿ ಪ್ರತ್ಯಕ್ಷ ಗೊಂಡಿದ್ದವು. ಜೊತೆಗೆ ಕಾಸರಗೋಡು ಸಾಮಾಜಿಕ ಅರಣ್ಯಧಿಕಾರಿಗೆ, ಕೆ.ಎಸ್.ಟಿ.ಪಿ ಅಧಿಕಾರಿಗಳಿಗೆ ಮಾತ್ರವಲ್ಲದೆ ಜಿಲ್ಲಾಧಿಕಾರಿಗೂ ಹಲವಾರು ಮನವಿಗಳು ಸಮರ್ಪಣೆ ಯಾಗಿದ್ದವು.
ಈಗ ಮಾವಿನ ಮರವು ತನ್ನನ್ನು ಟಿಂಬರ್ ಮಾಫಿಯಾ ಕೈಯಿಂದ ರಕ್ಷಣೆ ಮಾಡಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದೆ ಎಂಬ ಬ್ಯಾನರ್ ರಾರಾಜಿಸುತ್ತಿದೆ.




