ಕಾಸರಗೋಡು: ಜಿಲ್ಲೆಯ ಪೆರಿಯ ಕಲ್ಯೋಟ್‍ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿ.ಬಿ.ಐ ಅಧಿಕಾರಿಗಳು ಆರಂಭದಲ್ಲಿ ಬಂಧಿಸಿದ್ದ ಐದು ಮಂದಿ ಸಿಪಿಎಂ ಕಾರ್ಯಕರ್ತರಿಗೆ ಎರ್ನಾಕುಳಂ ಸಿ,ಜೆ.ಎಂ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಸುರೇಂದ್ರನ್ ಯಾನೆ ವಿಷ್ಣುಸುರ, ಎ.ಮಧು ಯಾನೆ ಶಾಸ್ತಾ ಮಧು, ರೆಜಿ ವರ್ಗೀಸ್, ಎ.ಹರಿಪ್ರಸಾದ್, ಸಿಪಿಎಂ ಏಚಿಲಡ್ಕ ಶಾಖಾ ಕಾರ್ಯದರ್ಶಿ ಎ.ರಾಜೇಶ್ ಎಂಬವರಿಗೆ ಜಾಮೀನು ನಿರಾಕರಿಸಲಾಗಿದೆ. ಆರೋಪಿಗಳಿಗೆ ಜಾಮೀನು ನೀಡಿದಲ್ಲಿ ಕೇಸು ಬುಡಮೇಲುಗೊಳಿಸುವ ಸಾಧ್ಯತೆಯಿರುವುದಾಗಿ ಪ್ರೋಸಿಕ್ಯೂಶನ್ ವಾದ ಮನ್ನಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. ಸಿಬಿಐ ಡಿವೈಎಸ್ಪಿ ಅನಂತಕೃಷ್ಣನ್ ನೇತೃತ್ವದ ಅಧಿಕರಿಗಳ ತಂಡ ಕಾಸರಗೋಡು ಸರ್ಕಾರಿ ಅತಿಥಿಗೃಹದ ಸಿಬಿಐ ಕ್ಯಾಂಪ್ ಹೌಸ್‍ನಲ್ಲಿ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವಂತೆ ಕಳೆದ ವರ್ಷ ಹೈಕೋರ್ಟಿನ ಏಕಸದಸ್ಯ ಪೀಠ ನೀಡಿದ್ದರೆ, ಸಿಬಿಐ ತನಿಖೆ ಬೇಡವೆಂದು ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟು ತಳ್ಳಿಹಾಕಿತ್ತು. 2019 ಫೆಬ್ರವರಿ 17ರಂದು ಪೆರಿಯ ಕಲ್ಯೋಟ್ ನಿವಾಸಿಗಳಾದ ಕೃಪೇಶ್(21)ಹಾಗೂ ಶರತ್‍ಲಾಲ್(24)ಎಂಬವರನ್ನು ತಂಡವೊಂದು ಮಾರಕಾಯುಧಗಳಿಂದ ಕಡಿದು ಕೊಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಏರಿಯಾ, ಸ್ಥಳೀಯ ಕಾರ್ಯದರ್ಶಿಗಳು, ಪಕ್ಷದ ಕಾರ್ಯಕರ್ತರು ಸೇರಿದಂತೆ 14ಮಂದಿ ಆರೋಪಿಗಳಿದ್ದಾರೆ. ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಸದಸ್ಯ ಪೀತಾಂಬರನ್ ಮೊದಲ ಆರೋಪಿಯಾಗಿದ್ದಾನೆ.




