ಕಾಸರಗೋಡು: ಕೇರಳ ಸರ್ಕಾರ ಸಪ್ಲೈಕೋದ ನವೀಕರಣ ನಡೆಸುವ ನಿಟ್ಟಿನಲ್ಲಿ ರಾಜ್ಯದ 500ಕ್ಕೂ ಹೆಚ್ಚು ಸಪ್ಲೈಕೋ ಸೂಪರ್‍ಮಾರ್ಕೆಟ್ ಮೂಲಕ ಆನ್‍ಲೈನ್ ಮಾರಾಟ ಮತ್ತು ಹೋಮ್ ಡೆಲಿವರಿ ಸೇವೆ ಆರಂಭಿಸಲು ತೀರ್ಮಾನಿಸಿದೆ.
ಆನ್‍ಲೈನ್ ಮಾರಾಟದ ರಾಜ್ಯಮಟ್ಟದ ಉದ್ಘಾಟನೆಯನ್ನು ತೃಶ್ಯೂರ್‍ನಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರಾಜ್ಯ ಕಂದಾಯ ಖಾತೆ ಸಚಿವ ಇ.ರಾಜನ್ ನೆರವೇರಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ವಕೀಲ ಜಿ.ಆರ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೊದಲ ಹಂತದಲ್ಲಿ ತ್ರಶ್ಯೂರ್‍ನಲ್ಲಿ ಮೂರು ಸಪ್ಲೈಕೋ ಮಾರಾಟ ಕೇಂದ್ರಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಎರಡನೇ ಹಂತದಲ್ಲಿ ಪ್ರತಿ ಮಹಾನಗರಪಾಲಿಕೆ ಹಾಗೂ ಮೂರನೇ ಹಂತದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸೂಪರ್‍ಮಾರ್ಕೆಟ್ ಆರಂಭಗೊಳ್ಳಲಿದೆ. ಆನ್‍ಲೈನ್ ಮಾರಾಟ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಪ್ಲೈಕೋ ಕಾರ್ಯಾಚರಿಸಲಿದ್ದು, ಈ ಮೂಲಕ ಖರೀದಿಸುವ ಗ್ರಾಹಕರಿಗೆ ಶೇ. 5ರಷ್ಟು ರಿಯಾಯಿತಿಯೂ ಲಭ್ಯವಾಗಲಿದೆ. ಸಪ್ಲೈಕೋ ಉತ್ಪನ್ನಗಳು ಲಭ್ಯವಾಗಲು "ಸಪ್ಲೈ ಕೇರಳ'ಎಂಬ ಆ್ಯಪ್ ಮೂಲಕ ಆರ್ಡರ್ ಮಾಡಬಹುದಾಗಿದೆ. ಈ ಉತ್ಪನ್ನಗಳನ್ನು 24ತಾಸುಗಳ ಒಳಗಾಗಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಇತರ ಹಲವು ಸವಲತ್ತುಗಳೂ ಲಭ್ಯವಾಗಲಿರುವುದಾಗಿ ಪ್ರಕಟಣೆ ತಿಳಿಸಿದೆ.




