HEALTH TIPS

ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುತ್ತಾರೆ ಎನ್ನುವುದು ಮಿಥ್ಯೆ: ಸಿಜೆಐ ಎನ್.ವಿ.ರಮಣ

              ಹೈದರಾಬಾದ್: ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ರವಿವಾರ ಇಲ್ಲಿ ಕೊಲಿಜಿಯಂ ಮೂಲಕ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕಗೊಳಿಸುತ್ತಿದ್ದಾರೆ ಎಂಬ ಆರೋಪದ ವಿರುದ್ಧ ನ್ಯಾಯಾಂಗವನ್ನು ಸಮರ್ಥಿಸಿಕೊಂಡರು.

             ವಿಜಯವಾಡಾದ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಐದನೇ ಲಾವು ವೆಂಕಟೇಶ್ವರುಲು ದತ್ತಿ ಉಪನ್ಯಾಸವನ್ನು ನೀಡಿದ ನ್ಯಾ.ರಮಣ ಅವರು,'ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕಗೊಳಿಸುತ್ತಾರೆ 'ಎಂಬಂತಹ ನುಡಿಗಟ್ಟುಗಳನ್ನು ಪುನರುಚ್ಚರಿಸುವುದು ಇಂದಿನ ದಿನಗಳಲ್ಲಿ ಫ್ಯಾಷನ್ ಆಗಿದೆ.

              ಇದು ವ್ಯಾಪಕವಾಗಿ ಪ್ರಚಾರದಲ್ಲಿರುವ ಒಂದು ಮಿಥ್ಯೆಯಾಗಿದೆ. ವಾಸ್ತವದಲ್ಲಿ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ತೊಡಗಿರುವ ಹಲವರ ಪೈಕಿ ನ್ಯಾಯಾಂಗವೂ ಒಂದಾಗಿದೆ,ಅಷ್ಟೇ. ಕೇಂದ್ರ ಕಾನೂನು ಸಚಿವಾಲಯ,ರಾಜ್ಯ ಸರಕಾರಗಳು,ರಾಜ್ಯಪಾಲರು,ಉಚ್ಚ ನ್ಯಾಯಾಲಯಗಳ ಕೊಲಿಜಿಯಮ್‌ಗಳು, ಗುಪ್ತಚರ ಸಂಸ್ಥೆ ಮತ್ತು ಕೊನೆಯದಾಗಿ ಉನ್ನತ ಅಧಿಕಾರಿಗಳು ಸೇರಿದಂತೆ ಹಲವರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ ಮತ್ತು ಇವರೆಲ್ಲರೂ ಅಭ್ಯರ್ಥಿಯ ಸೂಕ್ತತೆಯನ್ನು ಪರಿಶೀಲಿಸಲು ನಿಯೋಜಿತರಾಗಿರುತ್ತಾರೆ. ಮೇಲೆ ಹೇಳಿದ ಮಿಥ್ಯೆಯು ಕೆಲವು ವರ್ಗಗಳಿಗೆ ಹೊಂದಿಕೆಯಾಗುವುದರಿಂದ ಉತ್ತಮವಾದ ತಿಳುವಳಿಕೆ ಹೊಂದಿದವರೂ ಈ ಮಿಥ್ಯೆಯನ್ನು ಪ್ರಚಾರ ಮಾಡುತ್ತಾರೆ ಎನ್ನುವುದು ನನಗೆ ಬೇಸರವನ್ನುಂಟು ಮಾಡಿದೆ ಎಂದರು.
             ಇತ್ತೀಚಿಗೆ ಸಂಸತ್ತಿನಲ್ಲಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ (ವೇತನಗಳು ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ,2021ರ ಮೇಲಿನ ಚರ್ಚೆ ಸಂದರ್ಭದಲ್ಲಿ ಕೇರಳದ ಸಂಸದ ಜಾನ್ ಬ್ರಿಟ್ಟಾಸ್ ಅವರು,ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕಗೊಳಿಸುವುದನ್ನು ಎಲ್ಲಿಯೂ ಕೇಳಿಲ್ಲ ಎಂದು ಹೇಳಿದ್ದರು.
               ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ನ್ಯಾಯಾಂಗದ ಮುಂದಿರುವ ನಿರಂತರ ಸವಾಲುಗಳಲ್ಲೊಂದಾಗಿದೆ ಎಂದ ನ್ಯಾ.ರಮಣ,ಇತ್ತೀಚಿನ ದಿನಗಳಲ್ಲಿ ಹಲವಾರು ನ್ಯಾಯಾಧೀಶರನ್ನು ನೇಮಕಗೊಳಿಸುವಲ್ಲಿ ಸರಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು.
            ಆದಾಗ್ಯೂ,ಮಲಿಕ್ ಮಝ್ಹರ್ ಪ್ರಕರಣದಲ್ಲಿ ನಿಗದಿಗೊಳಿಸಿರುವ ಕಾಲಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರವನ್ನು ಆಗ್ರಹಿಸಿದ ಅವರು,ಉಚ್ಚ ನ್ಯಾಯಾಲಯಗಳು ಮಾಡಿರುವ ಕೆಲವು ಶಿಫಾರಸುಗಳು ಇನ್ನಷ್ಟೇ ಕೇಂದ್ರ ಕಾನೂನು ಸಚಿವಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ರವಾನೆಯಾಗಬೇಕಿವೆ ಎಂದು ಬೆಟ್ಟು ಮಾಡಿದರು.
            ಪುನರ್ವಿಮರ್ಶೆ ಅಧಿಕಾರದ ಮೂಲಕ ನ್ಯಾಯಿಕ ಅತಿಕ್ರಮಣಗಳ ಕುರಿತು ಟೀಕೆಗಳ ವಿರುದ್ಧವೂ ನ್ಯಾಯಾಂಗವನ್ನು ಸಮರ್ಥಿಸಿಕೊಂಡ ನ್ಯಾ.ರಮಣ,ಇಂತಹ ಸಾರ್ವತ್ರೀಕರಣಗಳು ತಪ್ಪು ನಿರ್ದೇಶಿತವಾಗಿವೆ ಮತ್ತು ನ್ಯಾಯಾಂಗಕ್ಕೆ ನ್ಯಾಯಿಕ ಪುನರ್ವಿಮರ್ಶೆಯ ಅಧಿಕಾರವಿಲ್ಲದಿದ್ದರೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಾರ್ಯ ನಿರ್ವಹಣೆಯನ್ನು ಯೋಚಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.
           ಜನಪ್ರಿಯ ಬಹುಮತವು ಸರಕಾರದ ನಿರಂಕುಶ ಕ್ರಮಗಳಿಗೆ ಸಮರ್ಥನೆಯಾಗುವುದಿಲ್ಲ ಎಂದ ಅವರು,ಅಧಿಕಾರಗಳನ್ನು ಪ್ರತ್ಯೇಕಗೊಳಿಸುವ ಪರಿಕಲ್ಪನೆಯನ್ನು ನ್ಯಾಯಾಂಗ ಪುನರ್ವಿಮರ್ಶೆಯ ವ್ಯಾಪ್ತಿಯನ್ನು ನಿರ್ಬಂಧಿಸಲು ಬಳಕೆ ಮಾಡುವಂತಿಲ್ಲ ಎಂದರು.
             ಶಾಸನಗಳನ್ನು ಅಂಗೀಕರಿಸುವ ಮುನ್ನ ಅವುಗಳ ಪರಿಣಾಮದ ವೌಲ್ಯಮಾಪನ ಅಥವಾ ಸಾಂವಿಧಾನಿಕತೆಯ ಮೂಲಭೂತ ಪರಿಶೀಲನೆಯ ಕೊರತೆಯ ಟೀಕಾಕಾರರಾಗಿರುವ ನ್ಯಾ.ರಮಣ,ಶಾಸಕಾಂಗವು ಕಾನೂನುಗಳನ್ನು ರೂಪಿಸುವಾಗ ಅವು ಸ್ಥಾಪಿತ ಸಾಂವಿಧಾನಿಕ ತತ್ತ್ವಗಳಿಗೆ ಬದ್ಧವಾಗಿರುತ್ತವೆ ಎನ್ನುವುದು ಕನಿಷ್ಠ ನಿರೀಕ್ಷೆಯಾಗಿರುತ್ತದೆ. ಕಾನೂನುಗಳನ್ನು ರೂಪಿಸುವಾಗ ಅವುಗಳಿಂದ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಬಗ್ಗೆಯೂ ಅವರು ಯೋಚಿಸಬೇಕಾಗುತ್ತದೆ. ಆದರೆ ಇಂತಹ ತತ್ತ್ವಗಳನ್ನು ನಿರ್ಲಕ್ಷಿಸಲಾಗುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries