HEALTH TIPS

ಪ್ರಬುದ್ಧ ಮನಸ್ಸು ನಮ್ಮದಾಗಲಿ

                    ಬದುಕಿನಲ್ಲಿ ಏರಿಳಿತಗಳು ಬಹುಸಾಮಾನ್ಯ. ಕೆಲವೊಮ್ಮೆ ಸಂತಸದ ಕ್ಷಣಗಳು ಹೊಮ್ಮಿದರೆ ಮತ್ತೊಮ್ಮೆ ದುಃಖದ ಅಲೆಗಳು ನಮ್ಮನ್ನು ಸುತ್ತುವರಿಯುತ್ತವೆ. ಅಂತೆಯೇ ಹೊಗಳಿಕೆ, ತೆಗಳಿಕೆಯ ಅನುಭವಗಳು ಕೂಡ ದಕ್ಕುತ್ತಿರುತ್ತವೆ. ನಮಗೆ ಇಷ್ಟವೆನಿಸುವ ಸಂಗತಿಗಳು ಸುಖದಾನುಭೂತಿಗೆ ಕಾರಣವಾದರೆ, ಇಷ್ಟವೆನಿಸದ ಸಂಗತಿಗಳು ನೋವಿನ ಅನುಭವಕ್ಕೆ ತಳ್ಳುತ್ತವೆ. ಸುಖ-ದುಃಖ, ನೋವು-ನಲಿವು ಇತ್ಯಾದಿ ದ್ವಂದ್ವಗಳು ನಮ್ಮನ್ನು ಕಂಗೆಡಿಸುತ್ತಲೇ ಇರುತ್ತವೆ. ಇದಕ್ಕೆಲ್ಲ ಬಹುಮುಖ್ಯ ಕಾರಣ ಮನಸ್ಸನ್ನು ನಾವು ನಿರ್ದಿಷ್ಟ ಬಗೆಯ ರೂಢಿಗಳಲ್ಲಿ ಬಂಧಿಸಿಟ್ಟಿರುವುದಾಗಿದೆ.

            ಸೂಫಿ ಪರಂಪರೆಯ ರಬಿಯಾ ಬಹುಶ್ರೇಷ್ಠ ಸಂತಳು. ಅಪರಿಮಿತವಾದ ಸ್ಥಿತಪ್ರಜ್ಞೆಯನ್ನು ಹೊಂದಿದವಳು. ಒಂದು ದಿನ ತನ್ನ ಗುಡಿಸಿಲಿನಲ್ಲಿ ದೈನಂದಿನ ಕಾಯಕದಲ್ಲಿ ರಬಿಯಾ ನಿರತಳಾಗಿದ್ದಳು. ಅವಳ ಭೇಟಿಗಾಗಿ ಭಕ್ತನೊಬ್ಬ ಗುಡಿಸಿಲಿನ ಮುಂದೆ ಬಂದು ನಿಂತ. ಅವಳ ಕಾಯಕಕ್ಕೆ ಭಂಗ ತರುವುದು ಲೇಸಲ್ಲವೆಂದು ತಿಳಿದು ಅಲ್ಲಿಂದಲೇ ಅವಳನ್ನು ಕೊಂಡಾಡಿದ. 'ತಾಯಿ ನಿನ್ನ ಮುಖದಲ್ಲಿ ಅದೆಂಥ ದೈವಕಳೆ. ನಿನ್ನ ದರುಶನದಿಂದ ನನ್ನ ಬದುಕು ಪಾವನವಾಯಿತು. ನಿನ್ನ ಸ್ಪರ್ಶದಿಂದ ನೆಲವೆಲ್ಲ ಪಾವನವಾಯಿತು' ಎಂದು ಹೊಗಳಿ ವಂದಿಸಿಹೋದ. ಸ್ವಲ್ಪ ಸಮಯ ಕಳೆದಿರಬೇಕು. ಓರ್ವ ನಾಸ್ತಿಕ ಅವಳ ಗುಡಿಸಲ ಮುಂದೆ ಬಂದು ನಿಂತ. ಅವಳು ಕಾಯಕದಲ್ಲಿ ನಿರತಳಾದ ಕಾರಣ ಅವನನ್ನು ಗಮನಿಸಲಿಲ್ಲ. ಅವನಿಗೆ ಸಿಟ್ಟು ಬಂದಿತು. ಅವಳಿಗೆ ತುಂಬ ಅಹಂ ಎಂದು ಮನಸ್ಸಿಗೆ ಬಂದಂತೆ ಬೈದು ಹೊರಟು ಹೋದ. ಅವಳು ಧ್ಯಾನ ಮುಗಿಸಿದ ನಂತರ ಅವಳ ಗಂಡ 'ರಬಿಯಾ, ವ್ಯಕ್ತಿಯೊಬ್ಬ ನಿನ್ನನ್ನು ಕೆಟ್ಟದಾಗಿ ಬೈದ. ನೀನು ಸುಮ್ಮನೇ ಇದ್ದೆ. ಕೇಳಿಸಲಿಲ್ಲವೇ ನಿನಗೆ?' ಎಂದ. ಅವಳು 'ನನಗೆ ಏನೂ ಕೇಳಿಸಲಿಲ್ಲ' ಎಂದಳು. 'ಮತ್ತೋರ್ವ ನಿನ್ನನ್ನು ತುಂಬಾ ಹೊಗಳಿದ. ಅದು ನಿನ್ನ ಗಮನಕ್ಕೆ ಬಂದಿತೆ?' ಎಂದ. ಖಂಡಿತವಾಗಿಯೂ ಇಲ್ಲ ಎಂದಳು. ಏರುದನಿಯಲ್ಲಿದ್ದ ಹೊಗಳಿಕೆ ತೆಗಳಿಕೆಗೆ ಒಂದಷ್ಟೂ ವಿಚಲಿತಳಾಗದೇ ಇರಲು ಹೇಗೆ ಸಾಧ್ಯವಾಯಿತು? ಎಂದು ಕೇಳಿದ. ಅಲ್ಲಿಯೇ ಇದ್ದ ಅವಳ ಗುರುಗಳು 'ಅವಳ ಪ್ರಬುದ್ಧ ಮನಸ್ಸು ಇದಕ್ಕೆ ಕಾರಣ' ಎಂದರು.

                ನಮ್ಮ ಮನಸ್ಸು ನಿರ್ದಿಷ್ಟ ಬಗೆಗಳಲ್ಲಿ ಮಾತ್ರ ಚಿಂತಿಸುತ್ತಿರುತ್ತದೆ. ಗತಕಾಲದ ಹಿನ್ನಲೆ, ವರ್ತಮಾನದ ಜೊತೆಗಿನ ಸಂಬಂಧ, ಭವಿಷ್ಯದೊಡಗಿನ ಕನಸುಗಳ ಜೊತಗೆ ತಳುಕು ನಮ್ಮ ಮನಸ್ಸನ್ನು ನೂರೆಂಟು ಸಂಕೋಲೆಗಳಲ್ಲಿ ಬಂಧಿತವಾಗಿ ಸತ್ಯವನ್ನು ದರ್ಶಿಸುವಲ್ಲಿ ಸೋಲುತ್ತದೆ. ನಾವು ಇಂತಹ ಬಾಹ್ಯ ಪರಿಸ್ಥಿತಿಗಳನ್ನು ಆಯ್ಕೆ ಮಾಡಲಾಗದು. ನಿಯಂತ್ರಿಸಲೂ ಆಗದು. ಆದರೆ ಅವುಗಳಿಗೆ ನಾವು ಪ್ರತಿಕ್ರಿಯೆ ನೀಡುವುದನ್ನು ಮಾತ್ರ ಖಂಡಿತವಾಗಿ ನಾವು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಪೂರ್ವಾಗ್ರಹವಿಲ್ಲದ, ಸಿದ್ಧಸೂತ್ರಗಳಿಲ್ಲದ ಸ್ಪಷ್ಟವಾದ ಮನಸ್ಸು ನಮ್ಮದಾದಾಗ ಮಾತ್ರವೇ ಅದು ಎಲ್ಲ ಏರಿಳಿತಗಳನ್ನು ಸಮಾಧಾನ ಚಿತ್ತದಿಂದ, ಹಕ್ಕಿಯ ಹಾಡನ್ನು ಕೇಳಿಸಿಕೊಳ್ಳುವಂತೆ ಪರಿಶುದ್ಧ ಭಾವದಿಂದ ಸ್ವೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಬದುಕಿನ ನೈಜ ಆನಂದ ಅನುಭವ ನಮ್ಮದಾಗಿಸಿಕೊಳ್ಳುವ ಸಾರ್ಥಕ ಹೆಜ್ಜೆಗೆ ಮುನ್ನುಡಿಯಾಗುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries